Sunday, July 3, 2022
Home ಲೋಕಾಭಿರಾಮ ತಾಡವಾಲೆ ಗ್ರಂಥ ರಕ್ಷಣೆಗೆ ವಿಶಿಷ್ಟ ಯೋಜನೆ

ತಾಡವಾಲೆ ಗ್ರಂಥ ರಕ್ಷಣೆಗೆ ವಿಶಿಷ್ಟ ಯೋಜನೆ

ಉಡುಪಿ: ಭಾರತ ಸರ್ಕಾರದ ರಾಷ್ಟ್ರೀಯ ಪಾಂಡುಲಿಪಿ ಮಿಷನ್ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿರುವ ಹಸ್ತಪ್ರತಿ (ತಾಡವಾಲೆ)ಗಳನ್ನು ಸಂರಕ್ಷಿಸುವ ವಿಶೇಷ ಕಾರ್ಯಯೋಜನೆ ಹಮ್ಮಿಕೊಂಡಿದೆ ಎಂದು ನವದೆಹಲಿ ರಾಷ್ಟ್ರೀಯ ಪಾಂಡುಲಿಪಿ ಮಿಷನ್ ನಿರ್ದೇಶಕ ಪ್ರೊ. ಸುಧೀರ್ ಲಾಲ್ ಹೇಳಿದರು.

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ ಹಾಗೂ ಶ್ರೀ ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಸಂಯುಕ್ತಾಶ್ರಯದಲ್ಲಿ ಕಳೆದ ಮೇ 17ರಿಂದ ಭಾನುವಾರ (ಮೇ 23) ವರೆಗೆ ನಡೆದ ರಾಷ್ಟ್ರೀಯ ತುಳು ಲಿಪಿ ಆನ್ ಲೈನ್ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಯನದ ಕೊರತೆ ಹಾಗೂ ಮಾಹಿತಿಯ ಕೊರತೆಯಿಂದ ಈಗಾಗಲೇ ಅತ್ಯಮೂಲ್ಯವಾದ ಅಸಂಖ್ಯಾತ ಗ್ರಂಥಗಳು ನಾಶವಾಗಿವೆ. ಅವು ಸುರಕ್ಷಿತವಾಗಿರಬೇಕಾದರೆ ಅವುಗಳ ಲಿಪಿಗಳ ತಿಳುವಳಿಕೆ ಬಹುಮುಖ್ಯ. ಈ ನಿಟ್ಟಿನಲ್ಲಿ ಆಯಾ ಪ್ರಾಂತದಲ್ಲಿ ಲಿಪಿ ಕಲಿಕೆ ಕಾರ್ಯಾಗಾರ ನಡೆಸಲಾಗುವುದು.

ಹಸ್ತಪ್ರತಿಗಳನ್ನು ಚೆನ್ನಾಗಿ ಓದುವಂಥ ವಿದ್ವಾಂಸರ ತಂಡ ನಿರ್ಮಾಣ ಮಾಡಿದಾಗ ಆ ಗ್ರಂಥಗಳಲ್ಲಿರುವ ಅಪೂರ್ವ ವಿಚಾರ ಅಥವಾ ಪಾಠ ಶುದ್ಧಿಯನ್ನು ಪಡೆಯಲು ಸಾಧ್ಯ. ಹಸ್ತಪ್ರತಿ ಸಂರಕ್ಷಣೆ ಕಾರ್ಯಕ್ಕಾಗಿ ದೇಶದ ಉದ್ದಗಲಕ್ಕೂ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ಉಡುಪಿಯಲ್ಲಿ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನಕ್ಕೆ ಈ ನಿಟ್ಟಿನಲ್ಲಿ ವಿಶೇಷ ಮಾನ್ಯತೆ ನೀಡಲಾಗಿದೆ. ಹಸ್ತಪ್ರತಿ ಗ್ರಂಥಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ತುಳು ಲಿಪಿ ಕಲಿಕೆ ಕಾರ್ಯಾಗಾರ ಆಯೋಜಿಸಿರುವುದು ಅತ್ಯಂತ ಅಭಿನಂದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.. ಕೆ. ಇ. ದೇವನಾಥನ್ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯ ಯೋಜನೆ ಮತ್ತು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಂಥಸಂರಕ್ಷಣಾ ಕಾರ್ಯಕ್ರಮವನ್ನು ಪ್ರಶಂಸಿಸಿದರು.

ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತಿಗೆ ಮಠದ ಆಡಳಿತಾಧಿಕಾರಿ ವಿದ್ವಾನ್ ಎಂ. ಪ್ರಸನ್ನ ಆಚಾರ್ಯ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತುಳು ಲಿಪಿ ಕಾರ್ಯಾಗಾರ ಆಯೋಜಿಸಿ ಲಿಪಿಗಳ ವಿದ್ವಾಂಸರನ್ನು ಸಿದ್ಧಪಡಿಸಲಾಗುವುದು ಎಂದರು.

ಕಾರ್ಯಾಗಾರದಲ್ಲಿ ದೇಶದ ಪ್ರಸಿದ್ಧ ವಿದ್ವಾಂಸರು ಕಲಿಕೆಗಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಸಂಶೋಧನಾತ್ಮಕ ಅಧ್ಯಯನ ನಡೆಸುತ್ತಿರುವ ಬೆಂಗಳೂರಿನ ವೈಷ್ಣವಿ ಮೂರ್ತಿ ಎರ್ಕಡಿತ್ತಾಯ ಸಂಪನ್ಮೂಲವ್ಯಕ್ತಿಯಾಗಿದ್ದರು.

ಡಾ| ಬಿ. ಗೋಪಾಲಾಚಾರ್ಯ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ ಮುಖ್ಯಸ್ಥ ಡಾ| ವಿನಾಯಕ ನಾಮಣ್ಣವರ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!