Thursday, July 7, 2022
Home ಲೋಕಾಭಿರಾಮ ತ್ವರಿತ ಚಿಕಿತ್ಸೆಯಿಂದ ಶ್ರವಣ ಸಮಸ್ಯೆ ಪರಿಹಾರ

ತ್ವರಿತ ಚಿಕಿತ್ಸೆಯಿಂದ ಶ್ರವಣ ಸಮಸ್ಯೆ ಪರಿಹಾರ

ಉಡುಪಿ: ಶ್ರವಣ ಸಮಸ್ಯೆ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ತಿಳಿದು ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಶ್ರವಣ ದೋಷ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ. ಮುರಳೀಧರ ಪಾಟೀಲ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಮಾತನಾಡಿದರು.

ಶ್ರವಣ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಶಾಶ್ವತ ಕಿವುಡುತನ ಬರಲಿದೆ. ಕಿವುಡುತನದಿಂದ ವ್ಯಕ್ತಿಗೆ ಸಂವಹನ ಸಮಸ್ಯೆ ಉಂಟಾಗಿ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಜೊತೆಗೆ ತನ್ನ ಉದ್ಯೋಗದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಹುಟ್ಟಿನಲ್ಲೇ ಕಿವುಡುತನ ಕುರಿತು ವೈದ್ಯರು ಪರೀಕ್ಷಿಸಬೇಕು. ಮಕ್ಕಳಲ್ಲಿ ಕಿವುಡುತನ ಬಂದರೆ ಮಕ್ಕಳಿಗೆ ಮಾತನಾಡಲೂ ಕಷ್ಟವಾಗಲಿದೆ. ಆದ್ದರಿಂದ ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.

ಶಬ್ದ ಮಾಲಿನ್ಯ, ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿತ, ಜೋರಾಗಿ ಸಂಗೀತ ಕೇಳುವುದು, ಸಮಾರಂಭಗಳಲ್ಲಿ ಡಿಜೆ ಬಳಕೆ ಮುಂತಾದವುಗಳಿಂದ ನಿಧಾನವಾಗಿ ಶ್ರವಣ ಸಮಸ್ಯೆ ಕಂಡುಬರಲಿದೆ. ತಕ್ಷಣ ಕಂಡುಬರುವ ಶ್ರವಣ ಸಮಸ್ಯೆಗೆ ತ್ವರಿತವಾಗಿ ಚಿಕಿತ್ಸೆ ಪಡೆದಲ್ಲಿ ಶೇ. 90ರಷ್ಟು ಗುಣಪಡಿಸಲು ಸಾಧ್ಯ. ಮೊಬೈಲ್ ಇಯರ್ ಫೋನ್ ಮೂಲಕ ಹೆಚ್ಚು ಹೊತ್ತು ಮಾತನಾಡುವುದು, ಸಂಗೀತ ಕೇಳುವುದೂ ಅಪಾಯಕಾರಿ. ಮೊಬೈಲ್ ನ ಸಾಮಾನ್ಯ ಸ್ಪೀಕರ್ ನಿಂದ ಕೇಳಿಸಿಕೊಳ್ಳಿ ಎಂದವರು ಸಲಹೆ ನೀಡಿದರು.

ಈಚೆಗೆ ಆನ್ ಲೈನ್ ತರಗತಿ ಸಮಯದಲ್ಲಿ ಮಕ್ಕಳು ಇಯರ್ ಫೋನ್ ಹಾಕಿಕೊಳ್ಳುತ್ತಿದ್ದು, ಆನ್ ಲೈನ್ ತರಗತಿಯ ಮಕ್ಕಳ ಮೇಲೆ ಉಂಟಾಗುವ ಪರಿಣಾಮ ಕುರಿತು ಸಂಶೋಧನೆ ನಡೆಯುತ್ತಿದೆ. ಟ್ರಾಫಿಕ್ನಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಮತ್ತು ಕಾರ್ಖಾನೆಗಳ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣ ಸಮಸ್ಯೆಗೆ ಒಳಗಾಗಲಿದ್ದು, ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು, ಮಪ್ಲರ್ ಬಳಕೆ ಸೇರಿದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಡಾ. ಮುರಳೀಧರ್ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಡಾ. ಶ್ರೀರಾಮ ರಾವ್, ಭಾರತದಲ್ಲಿ ಪ್ರತೀ 100 ಮಂದಿಯಲ್ಲಿ 6 ಮಂದಿಗೆ ಶ್ರವಣ ಸಮಸ್ಯೆ ಇದೆ. ನವಜಾತ 100 ಶಿಶುಗಳ ಪೈಕಿ 2 ಶಿಶುಗಳಿಗೆ ಕಿವುಡು ಸಮಸ್ಯೆ ಇದೆ. ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡುವ ಎಲ್ಲಾ ರೀತಿಯ ಲಸಿಕೆ ಪಡೆಯಬೇಕು. ಶ್ರವಣ ಸಮಸ್ಯೆಯಿಂದ ಸ್ಪಷ್ಟವಾಗಿ ಮಾತನಾಡಲು ಆಗದೇ ಪದೇ ಪದೇ ಉಚ್ಛಾರ ಮಾಡಬೇಕಾಗುತ್ತದೆ.ಶ್ರವಣ ಸಮಸ್ಯೆ ಕುರಿತಂತೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಶ್ರವಣ ಸಮಸ್ಯೆ ಇರುವವರಿಗೆ ರೆಡ್ ಕ್ರಾಸ್ ಸಹಯೋಗದಲ್ಲಿ ಉಚಿತ ಶ್ರವಣ ಸಾಧನ ವಿತರಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿರುವವರು ಹೆಸರು ನೋಂದಾಯಿಸುವಂತೆ ತಿಳಿಸಿದರು.

ಡಿ.ಎಚ್.ಓ ಡಾ. ಸುಧೀರಚಂದ್ರ ಸೂಡ ಅಧ್ಯಕ್ಷತೆ ವಹಿಸಿದ್ದರು.

ಶ್ರವಣ ದೋಷ ಕುರಿತು ಅರಿವು ಮೂಡಿಸುವ ಕರಪತ್ರ ಬಿಡುಗಡೆ ಮಾಡಲಾಯಿತು. ಶ್ರವಣ ದಿನ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಉಚಿತ ಶ್ರವಣ ಪರೀಕ್ಷಾ ಶಿಬಿರ ನಡೆಸಲಾಯಿತು.

ಆಡಿಯೋಮೆಟ್ರಿಕ್ ಸಹಾಯಕಿ ಸಮೀಕ್ಷಾ ಡಿ. ರಾವ್ ಸ್ವಾಗತಿಸಿ, ಆಡಿಯಾಲಜಿಸ್ಟ್ ಪ್ರತೀಕ್ಷಾ ಬಿ. ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!