Wednesday, August 10, 2022
Home ಲೋಕಾಭಿರಾಮ ಆರೋಗ್ಯ ಆಸ್ಪತ್ರೆಗೆ ಬಿಳಿ ಬಣ್ಣ ಬಳಿದು ವಿಶ್ವ ಮೂಳೆ ಸವಕಳಿ ಜಾಗೃತಿ

ಆಸ್ಪತ್ರೆಗೆ ಬಿಳಿ ಬಣ್ಣ ಬಳಿದು ವಿಶ್ವ ಮೂಳೆ ಸವಕಳಿ ಜಾಗೃತಿ

ಆಸ್ಪತ್ರೆಗೆ ಬಿಳಿ ಬಣ್ಣ ಬಳಿದು ವಿಶ್ವ ಮೂಳೆ ಸವಕಳಿ ಜಾಗೃತಿ
(ಸುದ್ದಿಕಿರಣ ವರದಿ)

ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ಮೂಳೆ ಸವಕಳಿ (ಆಸ್ಟಿಯೊಪೊರೋಸಿಸ್) ದಿನವನ್ನು ಆಚರಿಸಲಾಯಿತು. ಮೂಳೆ ಸವಕಳಿ ತಡೆಗಟ್ಟುವಿಕೆ, ರೋಗ ಪತ್ತೆ ಮತ್ತು ಚಿಕಿತ್ಸೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಮೂಳೆ ಆರೋಗ್ಯಕ್ಕಾಗಿ ಕ್ರಮ ಕೈಗೊಳ್ಳಿ ಎಂಬ ಘೋಷವಾಕ್ಯದೊಂದಿಗೆ ನಡೆಸಲಾದ ಕಾರ್ಯಕ್ರಮದಲ್ಲಿ ಕೆಎಂಸಿ ಮೂಳೆ ಮತ್ತು ಕೀಲು ವಿಭಾಗ ಹಾಗೂ ಅಂತಃಸ್ರಾವ ಶಾಸ್ತ್ರ (ಎಂಡೋಕ್ರ್ಯನೊಲೊಜಿ) ವಿಭಾಗ ವತಿಯಿಂದ ಆಸ್ಪತ್ರೆಯನ್ನು ಬಿಳಿ ಬಣ್ಣದಲ್ಲಿ ಬೆಳಗಿಸಲಾಯಿತು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೆಎಂಸಿ ಡೀನ್ ಡಾ. ಶರತ್ ರಾವ್, ಸಿಇಓ ಸಿ. ಜೆ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೂಳೆ ಮತ್ತು ಕೀಲು ವಿಭಾಗ ಮುಖ್ಯಸ್ಥ ಡಾ. ಶ್ಯಾಮಸುಂದರ ಭಟ್ ಮತ್ತು ಎಂಡೋಕ್ರ್ಯನೊಲೊಜಿ ವಿಭಾಗ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶರತ್ ರಾವ್, ಆಸ್ಟಿಯೊಪೊರೋಸಿಸ್ ದಿನವನ್ನು ವ್ಯಕ್ತಿಯ ಮೂಳೆ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುವ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಅಂಕಿಅಂಶಗಳ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತೀ ಮೂರು ಮಂದಿ ಮಹಿಳೆಯರಲ್ಲಿ ಒಬ್ಬರು ಆಸ್ಟಿಯೊಪೊರೊಟಿಕ್ ಮುರಿತದಿಂದ ಬಳಲುತ್ತಿದ್ದಾರೆ. ಐದು ಮಂದಿ ಪುರುಷರ ಪೈಕಿ ಒಬ್ಬರು ಇದೇ ಅಪಾಯವನ್ನು ಎದುರಿಸುತ್ತಾರೆ. ಆದರೆ, ಕೇವಲ 20 ಪ್ರತಿಶತದಷ್ಟು ಆಸ್ಟಿಯೊಪೊರೋಸಿಸ್ ರೋಗಿಗಳು ಮಾತ್ರ ಸರಿಯಾದ ರೋಗ ನಿರ್ಣಯ ಮತ್ತು ಚಿಕಿತ್ಸೆ ಪಡೆಯುವರಾಗಿದ್ದಾರೆ ಎಂದರು.

ಡಾ. ಅವಿನಾಶ್ ಶೆಟ್ಟಿ ಮಾತನಾಡಿ ಆಸ್ಟಿಯೊಪೊರೋಸಿಸ್ ರೋಗ, ಅದರ ಲಕ್ಷಣ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲು ಆಸ್ಟಿಯೊಪೊರೋಸಿಸ್ ದಿನ ಆಚರಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಆಸ್ಟಿಯೊಪೊರೋಸಿಸ್ ರೋಗ ಪತ್ತೆಹಚ್ಚಲು ನಿಯಮಿತವಾಗಿ ಪರೀಕ್ಷೆಗೊಳಗಾಗುವ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗುವುದು. ಅದರ ಅಂಗವಾಗಿ ಒಂದು ತಿಂಗಳ ಕಾಲ ಆಸ್ಟಿಯೊಪೊರೋಸಿಸ್ ರೋಗ ಪತ್ತೆಹಚ್ಚಲು ಶೇ. 50 ರಿಯಾಯಿತಿಯಲ್ಲಿ ಮೂಳೆ ಸ್ಕ್ಯಾನಿಂಗ್ ಮಾಡಲಾಗುವುದು ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!