ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭ

ಸೆಪ್ಟೆಂಬರ್ 6 ರಂದು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ದಾವಣಗೆರೆ ಭಕ್ತಾದಿಗಳಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮ.
ಸೆಪ್ಟೆಂಬರ್ 24 ರ ಬುಧವಾರ ಸಿರಿಗೆರೆಯಲ್ಲಿ ನಡೆಯಲಿರುವ ಸಿರಿಗೆರೆಯ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠದ 20 ನೇ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ದಾಸೋಹಕ್ಕೆ ದಾವಣಗೆರೆ ನಗರದ ಭಕ್ತಾದಿಗಳ ವತಿಯಿಂದ "ಭಕ್ತಿ ಸಮರ್ಪಣೆ" ಕಾರ್ಯಕ್ರಮವನ್ನು ದಿನಾಂಕ 06.09.2025 ರ ಶನಿವಾರ ಸಂಜೆ 6 ಘಂಟೆಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಭಕ್ತಿ ಸಮರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀಮದುಜ್ಜಯಿನಿ ಸದ್ಧರ್ಮ ಸಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾರಂಭದಲ್ಲಿ ಶ್ರೀಮಠದ ದಾವಣಗೆರೆ ನಗರದ ಭಕ್ತಾಧಿಗಳು ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಅರ್ಪಿಸಲಿದ್ದಾರೆ.
ಸಿರಿಗೆರೆಯ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20 ನೇ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಜೀವಿತದ ಅವಧಿಯಲ್ಲೇ ಜನಮಾನಸದಲ್ಲಿ ದಂತಕಥೆಯಾದವರು. ಮರ್ತ್ಯಲೋಕವೆಂಬ ಕರ್ತಾರನ ಕಮ್ಮಟದಲ್ಲಿ 'ಲಿಂಗ ಮೆಚ್ಚಿ ಅಹುದಹುದೆನ್ನುವಂತೆ' ಬದುಕಿದವರು. ಕೇವಲ ನುಡಿಜಾರರಾಗದೇ ನಡೆ ಧೀರರೂ ಆಗಿದ್ದ ಅಪ್ರತಿಮ ವೀರಸನ್ಯಾಸಿ, ಅಜ್ಞಾನ, ಬಡತನ, ಮೂಡನಂಬಿಕೆ, ಅಶಿಸ್ತುಗಳನ್ನೇ ಬಳುವಳಿ ಪಡೆದ ಅಪಾರ ಶಿಷ್ಯ ಸಮುದಾಯ ಹೊಂದಿದ ಪೀಠ, ಸದಾ ಕತ್ತಿ ಮಸೆಯುವ ಒಳ-ಹೊರಗಿಮ ಶತ್ರುಗಳು, ಇವುಗಳ ಮಧ್ಯೆ 'ವೀರನಾದರೆ ವೈರಿಯೂ ಮೆಚ್ಚಬೇಕು' ಎನ್ನುವ ಪರಿಯಲ್ಲಿ ಬಂದ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಕಂಟಕಗಳ ಕೆಂಡದ ಮೇಲೆ ಹೆಜ್ಜೆಯನ್ನಿಟ್ಟು ಸಮಾಜವನ್ನು ದಿಟ್ಟತನದಿಂದ ಮುನ್ನಡೆಸಿದ ಧೀರ ಸನ್ಯಾಸಿ, ದ್ವೇಷ ಅಸೂಯೆಗಳ ಹಾಲಾಹಲವನ್ನೇ ಉಂಡರೂ ಸಮಾಜಕ್ಕೆ ಅಮೃತವನ್ನೇ ಮನದಣಿಯ ಉಣಿಸಿದವರು 'ವೀರ ಸನ್ಯಾಸಿ' ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು.
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಮ್ಮ ನಾಡು, ನುಡಿ, ಶಿಕ್ಷಣ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಜನಮಾನಸದಲ್ಲಿ ಅವಿಸ್ಮರಣೀಯವಾಗಿವೆ. ಮಠ-ಪೀಠ ಪರಂಪರೆಯಲ್ಲೇ ಅವರು ಕ್ರಾಂತಿಕಾರಿ ಎಂದು ಪ್ರಖ್ಯಾತರಾದವರು. ದಿಟ್ಟ ಹೆಜ್ಜೆಯ ಧೀರ ಪ್ರಭುಗಳೆಂದೇ ಹೆಸರಾದವರು. ಸ್ವಾತಂತ್ರ್ಯ ಪೂರ್ವದಲ್ಲೇ ನೂರಾರು ಶಾಲಾ-ಕಾಲೇಜು, ಉಚಿತ ವಿದ್ಯಾರ್ಥಿನಿಲಯಗಳ ಸ್ಥಾಪನೆಯ ಮೂಲಕ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಪವೃಕ್ಷವಾಗುವುದರ ಮೂಲಕ ತ್ರಿವಿಧ ದಾಸೋಹಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ನಾಗರಿಕ ಸಮಾಜದ ಸದ್ಭಕ್ತರ ಹೃದಯ ಸಿಂಹಾಸನಾಧೀಶರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 34 ನೇ ಶ್ರದ್ಧಾಂಜಲಿ ಸಮಾರಂಭವನ್ನು ಯಾವುದೇ ಜಾತಿ ಧರ್ಮ ಮತವೆನ್ನದೇ ಸರ್ವ ಜಾತಿ ಧರ್ಮದವರು ಅತೀವ ಭಕ್ತಿ ಗೌರವಗಳಿಂದ ಆಚರಿಸುವ ಸಮಾರಂಭವಿದು. ದಾವಣಗೆರೆಯ ಸಮಸ್ತ ಭಕ್ತಾದಿಗಳು ಭಕ್ತಿ ಸಮರ್ಪಣೆ ಸಮಾರಂಭಕ್ಕೆ ಆಗಮಿಸಿ ತಮ್ಮ ಭಕ್ತಿ ಕಾಣಿಕೆಯನ್ನು ಅರ್ಪಿಸುವುದರ ಮೂಲಕ ಲಿಂಗೈಕ್ಯ ಗುರುವರ್ಯರ ಕೃಪೆಗೆ ಪಾತ್ರರಾಗಬೇಕಾಗಿ ಭಕ್ತವೃಂದದ ಪರವಾಗಿ ಸಮಾರಂಭದ ಆಯೋಜಕರು ಮನವಿ ಮಾಡಿದ್ದಾರೆ.
ಧನ್ಯವಾದಗಳೊಂದಿಗೆ
ಕೆ.ರಾಘವೇಂದ್ರ ನಾಯರಿ
ಮೊ: 9844314543
What's Your Reaction?






