ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್

Jun 17, 2025 - 17:18
 0  8
ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್

ಬೀದರ್ (ಜೂ.17): ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಅವರ ತೋಟದ ಮನೆಯ ಆವರಣದಲ್ಲಿ ಭಾನುವಾರ ದಿನವಿಡೀ ಹಾಗೂ ಸೋಮವಾರ ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ 61ನೇ ವರ್ಷದ ಜನ್ಮ ದಿನ ಆಚರಣೆ ಮಾಡಿಕೊಂಡರು.
ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಅವರ ತೋಟದ ಮನೆಗೆ ಭಾನುವಾರ ದಿನವಿಡೀ ಹಾಗೂ ಸೋಮವಾರ ಬೀದರ್, ಕಲಬುರಗಿ, ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅವರ ಆಪ್ತರು ಕೇಕ್ ಕತ್ತರಿಸಿ, ಶಾಲು, ಹಾರ ಹಾಕಿ, ಹೂಗುಚ್ಛ ನೀಡಿ ಸನ್ಮಾನಿಸಿ, ಗೌರವಿಸುವ ಮೂಲಕ ಬಂಡೆಪ್ಪ ಖಾಶೆಂಪುರ್ ರವರಿಗೆ ಜನ್ಮ ದಿನದ ಶುಭ ಕೋರಿದರು.
ದಿನವಿಡೀ ಮೊಳಗಿದ ಜಯಘೋಷ:
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರ 61ನೇ ವರ್ಷದ ಜನ್ಮದಿನಕ್ಕೆ ಶುಭ ಕೋರಲು ವಿವಿಧೆಡೆಯಿಂದ ಆಗಮಿಸಿದ ಅವರ ಅಭಿಮಾನಿಗಳು, ಕಾರ್ಯಕರ್ತರು ದಿನವಿಡೀ ಜಯಘೋಷ ಮೊಳಗಿಸಿದರು. ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಪಕ್ಷ, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿರವರ ಪರವಾಗಿ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.
ಇದಕ್ಕೂ ಮುಂಚೆ, ಜನ್ಮ ದಿನದ ಅಂಗವಾಗಿ ಭಾನುವಾರ ಬೆಳಗ್ಗೆ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೊಬಾ) ದೇವಸ್ಥಾನ, ಶ್ರೀ ನಾಗಲಿಂಗೇಶ್ವರ ದೇವಸ್ಥಾನ, ಶ್ರೀ ಘೃತಮಾರಿ (ಗುರುತು ಮಲ್ಲಮ್ಮ) ದೇವಿ ದೇವಸ್ಥಾನ, ಬೀದರ್ ನಗರದ ಮಂಗಳಪೇಟಾದ ತಾಯಿ ಭವಾನಿ ಮಂದಿರ ಸೇರಿದಂತೆ ವಿವಿಧ ಮಂದಿರಗಳಿಗೆ ಹಾಗೂ ಅವರ ತಂದೆ, ತಾಯಿ ಗದ್ದುಗೆಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.
ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ್ ಮೂಳೆ, ಮಾಜಿ ಕೇಂದ್ರ ಸಚಿವರಾದ ಭಗವಂತ್ ಖೂಬಾರವರು ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಬಂಡೆಪ್ಪ ಖಾಶೆಂಪುರ್ ರವರ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಆಗಮಿಸಿ ಶುಭ ಕೋರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0