ಕೂಡಲೇ ಎಕರೆಗೆ ಕನಿಷ್ಠ 25 ಸಾ.ರೂ. ಪರಿಹಾರ ನೀಡಿ: ಬಂಡೆಪ್ಪ ಖಾಶೆಂಪುರ್

Aug 29, 2025 - 16:18
 0  9
ಕೂಡಲೇ ಎಕರೆಗೆ ಕನಿಷ್ಠ 25 ಸಾ.ರೂ. ಪರಿಹಾರ ನೀಡಿ: ಬಂಡೆಪ್ಪ ಖಾಶೆಂಪುರ್

ಬೀದರ್ (ಆ.29): ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜಮೀನಿನಲ್ಲಿ ನೀರು ನಿಂತು ರೈತರು ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಕೂಡಲೇ ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬುಧೇರಾ, ಮಲ್ಲಿಕ್ ಮರ್ಜಾಪೂರ್, ಖಾಶೆಂಪುರ್ ಪಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಲ್ಲಿ ನೀರು ನಿಂತಿವೆ. ಇದರಿಂದ ರೈತರು ಬೆಳೆದ ಸೋಯಾ, ಹೆಸರು, ತೊಗರಿ, ಕಬ್ಬು, ಉದ್ದು ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಬಹುತೇಕ ಹಾನಿಯಾಗಿವೆ.

ಅಷ್ಟೇ ಅಲ್ಲದೇ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಜಮೀನುಗಳಲ್ಲಿ ಬೆಳೆಗಳೇ ಕಾಣದ ರೀತಿಯಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು.

ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಬೇಕು. ಬೆಳೆ ವಿಮಾ ಕಂಪನಿಗಳು ಕೂಡ ಬೆಳೆ ನಷ್ಟಕ್ಕೆ ಬೆಳೆ ವಿಮೆ ಪರಿಹಾರ ಒದಗಿಸಿಕೊಡಬೇಕು. ಆ ನಿಟ್ಟಿನಲ್ಲಿ ಸಂಬಂಧಿಸಿದವರು ಕೆಲಸ ಮಾಡಬೇಕು.

ನಮ್ಮ ಭಾಗದಲ್ಲಿ ಹೊಣ ಬೇಸಾಯವನ್ನೇ ನಂಬಿಕೊಂಡು ಕುಳಿತ್ತಿದ್ದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬೆಳೆ ಹಾನಿ ಪರಿಹಾರ ಘೋಷಣೆ ಮಾಡ್ಬೇಕು. ಆ ಮೂಲಕ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡ್ಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಹೇಳಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ರಾಣಿ, ಉಪ ಕೃಷಿ ನಿರ್ದೇಶಕ ಎಮ್.ಎ.ಕೆ ಅನ್ಸಾರಿ, ಕೃಷಿ ಅಧಿಕಾರಿ ಶತ್ರುಜ್ಞಾ, ಬಗದಲ್ ಕೃಷಿ ಅಧಿಕಾರಿ ಸಂಗಮೇಶ್, ಮನ್ನಳ್ಳಿ ಕೃಷಿ ಅಧಿಕಾರಿ ವಿಜಯಕುಮಾರ್, ರೈತರಾದ ಮಾಣಿಕ್ ಭೀಮಣ್ಣ ಮಚ್ಕುರಿ, ಬಕ್ಕಪ್ಪ ಚಂದಪ್ಪ, ಕೃಷ್ಣ ಸತ್ಯನಾರಾಯಣ, ವಿಕ್ರಮ್ ಶರಣಪ್ಪ, ಶರಣಪ್ಪ ಖಾಶೆಂಪುರ್, ಅಮರೇಶ್ ಪರಮಣ್ಣ, ಲೋಕೇಶ್ ಎಮ್ ಮರ್ಜಾಪೂರ್, ರಮೇಶ್ ಮರ್ಜಾಪೂರ್, ರಾಜಶೇಖರ್ ಚುಲ್ಕೆ, ಶ್ರೀಕಾಂತ್ ನೌಬಾದೆ, ಗಣಪತಿ ಹಾಸ್ಗೊಂಡ, ದಶರಥ ಮೇತ್ರೆ, ಸುನೀಲ್ ತಿಪ್ಗೊಂಡ ಸೇರಿದಂತೆ ಅನೇಕರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0