ಗಾಯಕ ಜನ್ನಿ-ಶೂದ್ರ ಶ್ರೀನಿವಾಸ್‌ರಿಗೆ ಡಾ.ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ

Sep 19, 2025 - 17:47
 0  2
ಗಾಯಕ ಜನ್ನಿ-ಶೂದ್ರ ಶ್ರೀನಿವಾಸ್‌ರಿಗೆ ಡಾ.ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ

ಶ್ರವಣಬೆಳಗೊಳ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕೊಡ ಮಾಡುವ ಡಾ.ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಇಂದು ಗಣ್ಯರಿಗೆ  ಪ್ರದಾನ ಮಾಡಲಾಯಿತು.
ಶ್ರೀಕ್ಷೇತ್ರ ಚಾವುಂಡರಾಯ ಸಭಾಂಗಣದಲ್ಲಿ, ಶ್ರೀ ಮಠದ  ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರ ದಿನ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೨೪ ನೇ ಸಾಲಿನ ದತ್ತಿ ಪ್ರಶಸ್ತಿಯನ್ನು ಜನಮನದ ಜನ್ನಿ ಎಂದೇ ಖ್ಯಾತರಾದ ಮೈಸೂರಿನ ಹೆಸರಾಂತ ಗಾಯಕ ಎಚ್.ಜನಾರ್ಧನ್, ೨೦೨೫ ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ ಶೂದ್ರ ಶ್ರೀನಿವಾಸ್ ಅವರಿಗೆ ಸ್ಥಳೀಯ ಶಾಸಕ ಡಾ.ಸಿ.ಎನ್.ಬಾಲಕೃಷ್ಣ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜನ್ನಿ,ಈ ದೇಶದಲ್ಲಿ ಅವಕಾಶ ಇಲ್ಲದವರನ್ನು, ಜಾತಿ ಹೆಸರಿನಲ್ಲಿ, ನಿರುದ್ಯೋಗಿಗಳನ್ನು ತುಳಿಯುವುದು ನಿಂತಿಲ್ಲ ಎಂದು ಬೇಸರ ಹೊರ ಹಾಕಿದರು.
ಡಾ.ಸಿದ್ದಲಿಂಗಯ್ಯ ಹೆತ್ತವರು, ನನ್ನ ತಂದೆ-ತಾಯಿ ಎಲ್ಲರೂ ಜೀತ ಮಾಡಿದವರು ಎಂದು ನೆನಪಿಸಿಕೊಂಡರು. ಸಿದ್ದಲಿಂಗಯ್ಯ ದಿವ್ಯ ಪ್ರಕಾಶವಾಗಿ ಈ ನಾಡಿನಲ್ಲಿ ಮೂಡಿದ. ಆತ ಮೂಡುವುದರ ಜೊತೆ ನಮ್ಮನ್ನೂ ಮೂಡಿಸಿದ. ನಾನೇನು ದೊಡ್ಡ ಹಾಡುಗಾರ ಅಲ್ಲ, ಆದರೆ ಸಿದ್ದಲಿಂಗಯ್ಯ ಅವರ ಕವಿತೆಯಲ್ಲಿದ್ದ ಹರಿತವಾದ ವಿಚಾರಗಳು ಅಂದರೆ ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು, ಒದೆಸಿಕೊಂಡು ಒರಗಿದೋರು ನನ್ನ ಜನಗಳು ಎಂಬ ಸಾಲುಗಳು ನನ್ನನ್ನು ಗಾಯಕನನ್ನಾಗಿ ಮಾಡಿದವು ಎಂದರು.
ಶೂದ್ರ ಶ್ರೀನಿವಾಸ್ ಮಾತನಾಡಿ, ಸಿದ್ದಲಿಂಗಯ್ಯ ಅವರ ಹೆಸರಿನ ಪ್ರಶಸ್ತಿಯನ್ನು ಪಡೆದಿರುವುದು ನನ್ನ ಬದುಕಿನಲ್ಲಿ ತುಂಬಾ ಸಂತೋಷದ ವಿಷಯ ಎಂದರು.

೫೦ ವರ್ಷ ಮೇಲ್ಪಟ್ಟು ನಾವೆಲ್ಲ ಒಟ್ಟಿಗೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ಸಿದ್ದಲಿಂಗಯ್ಯ ಅವರ ಹೊಲೆ ಮಾದಿಗರ ಹಾಡು ಕವಿತೆಗಳನ್ನು ಶೂದ್ರ ಪತ್ರಿಕೆಯಲ್ಲಿ ಪ್ರಕಟಿಸುವಾಗ ಲಂಕೇಶ್ ಅವರು ಏನಾದರೂ ತೊಂದರೆ ಆದೀತು ಹುಷಾರು ಎಂದು ಎಚ್ಚರಿಸಿದ್ದರು. ಏಕೆಂದರೆ ಕವಿತೆಯ ನುಡಿ ತೀವ್ರ,ತೀಕ್ಷ್ಣವಾಗಿದ್ದವು. ಅದೇ ವೇಳೆಗೆ ಬಸವಲಿಂಗಪ್ಪ ಅವರು ಬೂಸಾ ಪ್ರಕರಣ ಎದ್ದಿತ್ತು ಎಂದು ನೆನಪಿಸಿಕೊಂಡರು.
ಶೂದ್ರ ಪತ್ರಿಕೆಯಲ್ಲಿ ಎಲ್ಲ ಕವಿತೆ ಪ್ರಕಟಿಸಿದೆ, ಬೇರೆಲ್ಲೂ ಪ್ರಕಟ ಆಗಲಿಲ್ಲ. ನಂತರ ಪುಸ್ತಕವಾಗಿಸಿ ಪ್ರಕಟಿಸಿ ಹೆಸರು ಕೊಡುವಾಗ ಮುನ್ನುಡಿ ಬರೆಸುವುದು ಕಷ್ಟವಾಯಿತು. ಕಡೆಗೆ ಡಾ.ಕೆ.ವಿ.ನಾರಾಯಣ ಬರೆದರು. ಪುಸ್ತಕ ಪ್ರಕಟ ಆದ ಮೇಲೆ ಹೊಸ ಚಿಂತನೆಯ ಅದನ್ನು ತಲುಪಿಸಲು ಸಾಕಷ್ಟು ಕಷ್ಟಪಟ್ಟೆವು ಎಂದು ಹೇಳಿದರು.
ಪರಮಪೂಜ್ಯ ಸ್ವಾಮೀಜಿ ಮಾತನಾಡಿ, ಡಾ.ಸಿದ್ದಲಿಂಗಯ್ಯ ಹೆಸರಿನ ಪ್ರಶಸ್ತಿಯನ್ನು ಅವರೊಂದಿಗಿದ್ದು, ಅವರ ನೋವು-ನಲಿವುಗಳಲ್ಲಿ ಭಾಗಿಯಾಗಿದ್ದ ಇಬ್ಬರಿಗೆ ನೀಡಿರುವುದು ಅರ್ಥಪೂರ್ಣ ಎಂದರು.
ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಹಾಸನ ಜಿಕಸಾಪ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡ ಅಭಿನಂದನಾ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ರಮಾಕುಮಾರಿ ಸಿದ್ದಲಿಂಗಯ್ಯ, ಡಾ.ಮಾನಸ ಸಿದ್ದಲಿಂಗಯ್ಯ ಆಗಮಿಸಿದ್ದರು.
ಈ ವೇಳೆ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಎಚ್.ಬಿ.ಮದನಗೌಡ, ಗೌರವ ಕೋಶಾಧ್ಯಕ್ಷ ಡಿ.ಆರ್.ವಿಜಯಕುಮಾರ್, ಚನ್ನರಾಯಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್ ಹಡೇನಹಳ್ಳಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ನಾಗೇಶ್ ಎಂ.ಡಿ, ಡಾ.ಯುವರಾಜ್, ಜಾವಗಲ್ ಪ್ರಸನ್ನ ಕುಮಾರ್, ಶ್ರವಣಬೆಳಗೊಳ ಕಸಾಪ ಅಧ್ಯಕ್ಷ ನಾಗೇಂದ್ರ ರಾಯ ಇತರರು ಹಾಜರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0