ವಿಶ್ವಾಸ್ .ಡಿ. ಗೌಡರಿಗೆ “ಡಾ. ಅ.ನ.ಕೃ ಸಾರ್ವಭೌಮ ” ರಾಜ್ಯ ಪ್ರಶಸ್ತಿ

ಸಕಲೇಶಪುರ: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ರಾಜ್ಯ ಘಟಕ ಹೂವಿನಹಡಗಲಿ ಹಾಗೂ ಜಿಲ್ಲಾ ಘಟಕ ಹಾಸನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ರಾಜ್ಯಮಟ್ಟದಲ್ಲಿ ಗೌರವಿಸುವ ಕಾರ್ಯಕ್ರಮ ಹಾಸನದಲ್ಲಿ ಜರುಗುತ್ತಿದೆ.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಗಸ್ಟ್ 31, 2025 (ಭಾನುವಾರ) ಬೆಳಿಗ್ಗೆ 9:30ಕ್ಕೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಧೀಮಂತ ನಾಯಕ ಶ್ರೀ ಎಚ್. ಜ್ವಾಲನಯ್ಯ ಅವರ ಸ್ಮರಣಾರ್ಥ ಕೃತಿ ಬಿಡುಗಡೆ, ಕಾವ್ಯಗಾನ, ಕಲಾ ಕುಂಚ, ಭರತನಾಟ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇದೇ ಸಂದರ್ಭದಲ್ಲಿ ಸಾಧಕರಿಗೆ ರಾಜ್ಯಮಟ್ಟದ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ನಾಡು, ನುಡಿ, ಸಾಹಿತ್ಯ, ಪತ್ರಿಕಾ ಮಾಧ್ಯಮ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಶ್ರೀಯುತ ವಿಶ್ವಾಸ್ .ಡಿ. ಗೌಡರಿಗೆ “ಡಾ. ಅ.ನ.ಕೃ ಸಾರ್ವಭೌಮ” ರಾಜ್ಯ ಪ್ರಶಸ್ತಿ ಗಣ್ಯರ ಸಮ್ಮುಖದಲ್ಲಿ ಪ್ರದಾನವಾಗಲಿದೆ ಎಂದು ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸುಂದರೇಶ್ ಡಿ. ಉಡುವಾರೆ ತಿಳಿಸಿದ್ದಾರೆ.
ಈ ಸಂತಸದ ಕ್ಷಣದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಮಧುನಾಯಕ ಲಂಬಾಣಿ ಅವರು ಹರ್ಷ ವ್ಯಕ್ತಪಡಿಸಿ,
“ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಸಕಲೇಶಪುರ ತಾಲ್ಲೂಕಿನ ಅಧ್ಯಕ್ಷ, ಲೇಖಕ, ಸಂಘಟಕ, ಪತ್ರಕರ್ತ, ಅಂಕಣಕಾರ ಹಾಗೂ ಜೀವನಾಡಿ ಮಾಸಪತ್ರಿಕೆಯ ಉಪಸಂಪಾದಕರಾದ ವಿಶ್ವಾಸ್ .ಡಿ. ಗೌಡರಿಗೆ ಈ ಪ್ರಶಸ್ತಿ ಲಭಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ” ಎಂದು ತಿಳಿಸಿದ್ದಾರೆ.
ರಾಜ್ಯದ ಅನೇಕ ವೇದಿಕೆಗಳಲ್ಲಿ ತಮ್ಮ ವೈಖರಿಯ ಬರಹಗಳ ಮೂಲಕ ಹಾಗೂ ಕಾವ್ಯಸೃಷ್ಟಿಗಳ ಮೂಲಕ ಪ್ರೇಕ್ಷಕ-ಓದುಗರ ಮೆಚ್ಚುಗೆ ಗಳಿಸಿರುವ ವಿಶ್ವಾಸ್ .ಡಿ. ಗೌಡರಿಗೆ ಈಗಾಗಲೇ ಹಲವಾರು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಅವರ ಈ ಸಾಧನೆ ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಸಂಗತಿಯಾಗಿದೆ.
What's Your Reaction?






