ಸಹಕಾರಿ ಕ್ಷೇತ್ರಕ್ಕೆ ಅನಿರೀಕ್ಷಿತ  ಗ್ರಾಂಡ್ ಎಂಟ್ರಿ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

May 23, 2025 - 16:53
 0  3
ಸಹಕಾರಿ ಕ್ಷೇತ್ರಕ್ಕೆ ಅನಿರೀಕ್ಷಿತ  ಗ್ರಾಂಡ್ ಎಂಟ್ರಿ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಇದೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಯಶಸ್ವಿ ಪ್ರವೇಶ ಮಾಡಿದ್ದು  ಎಲ್ಲರಲ್ಲಿ ಕುತೂಹಲವನ್ನು ಕೆರಳಿಸಿದೆ.

ಸೇವೆಯ ಮೂಲಕವೇ ಕ್ಷೇತ್ರದಲ್ಲಿ ಜನಾನುರಾಗಿಯಾಗಿ ರಾಜಕೀಯ ಪ್ರವೇಶ ಮಾಡಿ ಸತತ 3 ಬಾರಿ ಶಾಸಕರಾಗುವುದರ ಮೂಲಕ ಹ್ಯಾಟ್ರಿಕ್ ಸಾಧನೆಯನ್ನು ಮಾಡಿ ಇತಿಹಾಸವನ್ನು ಬರೆದಿರುವ ಶಾಸಕರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು ಜಿದ್ದಾ-ಜಿದ್ದಿನ ಪೈಪೋಟಿ ನಡೆಯುತ್ತಿರುವ ಈ ಸಂದರ್ಭದಲ್ಲಿ  ಅವಿರೋಧವಾಗಿ ಆಯ್ಕೆಯಾಗಿರುವುದು ಎಲ್ಲರ ಗಮನವನ್ನು ಸೆಳೆಯುವಂತಾಗಿದ್ದು, ಕುತೂಹಲವನ್ನು ಕೆರಳಿಸಿದೆ.

ಬಾಗೇಪಲ್ಲಿ ತಾಲ್ಲೂಕಿನ ಚಿನಕಾಯಲಪಲ್ಲಿ ಪ್ಯಾಕ್ಸ್ ಮೂಲಕ ಸಿಂಧುತ್ವ ಹೊಂದಿರುವ ನಾಮ ನಿರ್ದೇಶಿತ ಡೆಲಿಗೇಟ್ ಆಗುವ ಮೂಲಕ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ನಾಮಪತ್ರವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಸಲ್ಲಿಸಿದ್ದರು. ಒಟ್ಟು 13 ಮತದಾರರನ್ನು ಹೊಂದಿದ್ದ ಕ್ಷೇತ್ರದಲ್ಲಿ 11 ಪ್ಯಾಕ್ಸ್ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಮತ್ತು 2 ಪ್ಯಾಕ್ಸ್ಗಳಲ್ಲಿ ಎನ್‌ಡಿಎ ಬೆಂಬಲಿತ ಡೆಲಿಗೇಟ್‌ಗಳು ಮತದಾನದ ಹಕ್ಕನ್ನು ಪಡೆದುಕೊಂಡಿದ್ದರು. ಈ ಹಿಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಹೆಚ್.ವಿ.ನಾಗರಾಜು ಮತ್ತು ವಿ.ವೆಂಕಟಶಿವಾರೆಡ್ಡಿಯವರು ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಹೊಂದಿರಲಿಲ್ಲವಾದ ಕಾರಣ ಅನಿವಾರ್ಯವಾಗಿ ಹೊಸಬರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಂಗ್ರೆಸ್ ಬೆಂಬಲಿತರಾಗಿ ‘ಯಾರು’ ಮತ್ತು ಎನ್‌ಡಿಎ ಬೆಂಬಲಿತರಾಗಿ ‘ಯಾರು’ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಸಹಜವಾಗಿಯೇ ನಡೆಯುತ್ತಿತ್ತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಎನ್‌ಡಿಎ ಅಭ್ಯರ್ಥಿಯಾಗಿ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಅವರೋಧ ಆಯ್ಕೆಗೆ ಕಾರಣವಾಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋದವಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿವಿದ ಮುಖಂಡರು ಮತ್ತು ಪ್ಯಾಕ್ಸ್ ಆಡಳಿತ ಮಂಡಳಿಗಳ ಸದಸ್ಯರು ಶಾಸಕರಿಗೆ ಹಾರ-ತುರಾಯಿಗಳನ್ನು ಹಾಕಿ ಅಭಿನಂದಿಸುತ್ತಿದ್ದಾರೆ. ಇನ್ನು ಹೆಚ್ಚಿನ ಸಾಲ ಸೌಲಭ್ಯಗಳನ್ನು ಈ ಭಾಗದ ರೈತರಿಗೆ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.

ಈ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಪ್ರತಿಕ್ರಿಯೆಯನ್ನು ಪತ್ರಿಕೆ ಕೇಳಿದಾಗ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋದವಾಗಿ ಆಯ್ಕೆಯಾಗಲು ಪಕ್ಷಾತೀತವಾಗಿ ಸಹಕಾರ ನೀಡಿದ ಎಲ್ಲರಿಗು ಶಾಸಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕುಂಠಿತಗೊoಡಿರುವ ಸಾಲ ಸೌಲಭ್ಯಗಳನ್ನು ಹೆಚ್ಚಿಸಿ ರೈತರಿಗೆ ಹೆಚ್ಚಿನ ಅನುಕೂಲವಾಗಲು ರಾಜಕೀಯರಹಿತವಾಗಿ ಖುದ್ದು ತಾವೇ ಸ್ಪರ್ಧಿಸಬೇಕು ಎಂದು ಎಲ್ಲರೂ ಒತ್ತಾಯ ಮಾಡಿದ್ದರಿಂದ ಮಾತಿಗೆ ಕಟ್ಟುಬಿದ್ದು ಅನಿರೀಕ್ಷಿತವಾಗಿ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡುವಂತಾಯಿತು. ಈ ಭಾಗದ ರೈತರು ಮತ್ತು ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0