ಹಾಸ್ಯ ಪದ್ಯಗಳನ್ನು ಜನಪ್ರಿಯಗೊಳಿಸಿದ "ಎಡ್ವರ್ಡ್ ಲಿಯರ್" 

ಹಾಸ್ಯ ಪದ್ಯಗಳನ್ನು ಜನಪ್ರಿಯಗೊಳಿಸಿದ "ಎಡ್ವರ್ಡ್ ಲಿಯರ್" 

21ನೇ ಮಗನಾಗಿ ಹುಟ್ಟಿದ ಎಡ್ವರ್ ಲಿಯರ್ ಮುಂದೆ ಚಿತ್ರಕಾರನೆಂದೂ, ಆಂಗ್ಲ ಸಾಹಿತ್ಯದ ಆದ್ಯ ಅಸಂಬದ್ಧ ಕವಿ ಎಂದು ಹೆಸರು ಪಡೆದವನು. ಲಂಡನಿನ ಬಳಿ 1812ರ ಮೇ 12ರಂದು ಆತ ಜನಿಸಿದ.15 ವರ್ಷದ ವಯಸ್ಸಿನಲ್ಲಿ ಚಿತ್ರ ಬರೆದು ಜೀವನ ಸಾಗಿಸಬೇಕಾಯಿತು. 19 ವರ್ಷವಾದಾಗ ಲಂಡನ್ನಿನ ಮೃಗಾಲಯದಲ್ಲಿ ಹಕ್ಕಿಗಳ ಚಿತ್ರ ಬರೆಯುವ ಕೆಲಸ ಸಿಕ್ಕಿತು. ಬರೆದ ಸೊಗಸಾದ ಹಾಗೂ ದೋಷರಹಿತವಾದ ಆ ಚಿತ್ರಗಳನ್ನು ಡರ್ಬಿಯ ಅರ್ಲ್ ಕಂಡು, ತಾನು ಸಂಗ್ರಹಿಸಿ ಸಾಕಿಕೊಂಡಿದ್ದ ಪ್ರಾಣಿಗಳ ಚಿತ್ರ ಬರೆಯುವ ಕೆಲಸವನ್ನು ಲಿಯರ್ ಗೆ ಒಪ್ಪಿಸಿದ. ಲಿಯರ್ ನಾಲ್ಕು ವರ್ಷಗಳ ಕಾಲ ಇವನ ಮನೆಯಲ್ಲಿಯೇ ಇದ್ದ. ಅರ್ಲ್ ನ ಮೊಮ್ಮಕ್ಕಳೊಡನೆ ಆಡುತ್ತಾ, ಅವರನ್ನು ನಗಿಸಲು, ಅರ್ಥವಿಲ್ಲದ ಆದರೆ ಅತ್ಯಂತ ಸುಂದರವಾದ ಪ್ರಾಸ ಲಯಗಳಿಂದ ಕೂಡಿದ ಪದ್ಯಗಳನ್ನು ರಚಿಸಿ ಅವರಿಗೆ ಓದಿ ಹೇಳುತ್ತಿದ್ದ. ಅಲ್ಲದೆ ಪದ್ಯಗಳಿಗೆ ತಕ್ಕ ಚಿತ್ರಗಳನ್ನು ಲಿಯರ್ ಬರೆದು ತೋರಿಸುತ್ತಿದ್ದ. ಲಿಯರ್ ನ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಹವಾ ಬದಲಾವಣೆಗಾಗಿ ಅವನು ಇಟಲಿ, ಗ್ರೀಸ್, ಈಜಿಪ್ಟ್, ಭಾರತ ಮೊದಲಾದ ದೇಶಗಳಲ್ಲಿ ಪ್ರವಾಸ ಮಾಡಿದ.