‘ಉಡುಪ ಸಂಗೀತೋತ್ಸವ’

May 24, 2025 - 15:24
 0  5
‘ಉಡುಪ ಸಂಗೀತೋತ್ಸವ’

ಬೆಂಗಳೂರು: ಶುದ್ಧ ಶಾಸ್ತ್ರೀಯ ಸಂಗೀತವನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಕಲಾವಿದರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸುವುದು ಮತ್ತು ಶ್ರೋತೃಗಳಿಗೆ ಆನಂದವನ್ನು ಉಂಟುಮಾಡುವುದು ಮಹೋನ್ನತ ಸೇವೆ. ಇದನ್ನು ಉಡುಪ ಪ್ರತಿಷ್ಠಾನ ಕಳೆದ 10 ವರ್ಷಗಳಿಂದ ಸಮರ್ಥವಾಗಿ ಮಾಡಿಕೊಂಡು ಬರುತ್ತಿರುವುದು ಕಲೆ ಮತ್ತು ಸಂಸ್ಕೃತಿಗಳ ಪ್ರಸಾರಕ್ಕೆ ಮೇಲು ಸ್ತರದ ಕೊಡುಗೆಯಾಗಿದೆ ಎಂದು ಪ್ರಖ್ಯಾತ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಹೇಳಿದರು.
ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ಬೆಂಗಳೂರಿನ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ
ಹಮ್ಮಿಕೊಂಡಿದ್ದ ‘ಉಡುಪ ಸಂಗೀತೋತ್ಸವ’ ಆರನೇ ಆವೃತ್ತಿ ಕಛೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ಥಳೀಯ ಕಲಾವಿದರ ವಿಶ್ವಾಸ ಮತ್ತು ಅಭಿಮಾನವನ್ನು ಸಂಪಾದಿಸುವುದರೊಂದಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಜತೆ ಸಖ್ಯ, ಸೌಹಾರ್ದ ಇರಿಸಿಕೊಂಡು ಸಂಗೀತ ಧಾರೆಯನ್ನು ಶ್ರೋತೃಗಳ ಮನ ಮಂದಿರಕ್ಕೆ  ತಲುಪಿಸುವಲ್ಲಿ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದವರು ವಿಶೇಷ ಕಾಳಜಿ ವಹಿಸಿದ್ದಾರೆ. ಇದು ಶ್ಲಾಘನೀಯ ಎಂದರು.
ಪ್ರಖ್ಯಾತ ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ ಮಾತನಾಡಿ, ಕಲಾವಿದರಾಗಿ, ಇನ್ನೊಬ್ಬ ಕಲಾವಿದರ ಪಾಂಡಿತ್ಯ ಅನಾವರಣಕ್ಕೆ ವೇದಿಕೆ ನೀಡುವುದು ಬಹು ಅಪರೂಪ. ಇಂಥ ಸೇವೆಯನ್ನು ಉಡುಪ ಪ್ರತಿಷ್ಠಾನ ಕಳೆದ 10 ವರ್ಷದಿಂದ ಮಾಡುತ್ತಿದೆ. ೀ ಪ್ರತಿಷ್ಠಾನದ ಎಲ್ಲ ಚಟುವಟಿಕೆಗೂ ನಮ್ಮ ಬೆಂಬಲ ಇದೆ ಎಂದರು.
ಸದ್ಗುರು ಉದಯ  ಸಿಂಗ್ ಅವರು, ಮಹಾನ್‌ಗಾಯಕರನ್ನು ಒಂದೆಡೆ ಕಾಣುವುದೇ ಒಂದು ಸುಕೃತ. ಅವರ  ಸಂಗೀತವನ್ನು ಲಿಸುವುದು ಪುಣ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸನ್ಮಾನ: ಇದೇ ಸಂದರ್ಭ  ಪಂಡಿತ್ ಬಿಕ್ರಮ್ ಘೋಷ್, ಆನೂರು ಆರ್. ಅನಂತಕೃಷ್ಣ ಶರ್ಮ, ಸದ್ಗುರು ಉದಯ್ ಸಿಂಗ್ ಸೇರಿದಂತೆ ಪಕ್ಕವಾದ್ಯ ಕಲಾವಿದರನ್ನು ಸನ್ಮಾನಿಸಲಾಯಿತು. 10 ವರ್ಷಗಳಿಂದ ಉಡುಪ ಪ್ರತಿಷ್ಠಾನ ನಡೆದುಬಂದ ದಾರಿಯ ವಿಡಿಯೋ ಕ್ಲಿಪಿಂಗ್ ಪ್ರದರ್ಶನ ನಡೆಯಿತು. ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ, ಕಲಾವಿದ ವಿದ್ವಾನ್ ಗಿರಿಧರ ಉಡುಪ ಇತರರು ಇದ್ದರು.

ರಂಜಿಸಿದ ಕಛೇರಿ:
 ಕಛೇರಿಯ ಮೊದಲ ಭಾಗದಲ್ಲಿ ವಿದ್ವಾನ್ ಆನೂರು ಅನಂತ ಕೃಷ್ಣಶರ್ಮ, (ಶಿವು) ಅವರ ಮೃದಂಗ, ಪಂಡಿತ್ ಬಿಕ್ರಮ್ ಘೋಷ್  ತಬಲಾ ಮತ್ತು ವಿದ್ವಾನ್ ಸಿ. ಪಿ. ವ್ಯಾಸ ವಿಠ್ಠಲ ಅವರ  ಖಂಜಿರಾ ವಾದನ (ತಾಳವಾದ್ಯ ಕಛೇರಿ) ಜನಮನ ರಂಜಿಸಿತು. ನಂತರ ವಿಶ್ವಮಾನ್ಯ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಗಾಯನಕ್ಕೆ  ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಮತ್ತು ಕೇಶವ ಜೋಶಿ ( ತಬಲಾ) ಪಕ್ಕವಾದ್ಯಸಾಥ್ ನೀಡಿ ಕಲಾ ರಸಿಕರ ಮನ ಸೆಳೆದರು.

( ಚಿತ್ರ ಗಳು ಇವೆ)

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ‘ಉಡುಪ ಸಂಗೀತೋತ್ಸವ’ ವನ್ನು ಭಾರತೀಯ ಶಾಸ್ತ್ರೀಯ ಸಂಗೀತದ ಮೇರು ಕಲಾವಿದರಾದ ಪಂಡಿತ್ ವೆಂಕಟೇಶ ಕುಮಾರ್, ಬಿಕ್ರಂ ಘೋಷ್, ಆನೂರು ಅನಂತ ಕೃಷ್ಣ ಶರ್ಮ, ಸಿ.ಪಿ. ವ್ಯಾಸವಿಠಲ, ಸದ್ಗುರು ಉದಯ್ ಸಿಂಗ್ ಉದ್ಘಾಟಿಸಿದರು. ಸಂಧ್ಯಾ ಉಡುಪ ಹಾಜರಿದ್ದರು.

‘ಉಡುಪ ಸಂಗೀತೋತ್ಸವ’ ದಲ್ಲಿ ವಿಶ್ವಮಾನ್ಯ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಗಾಯನ ಶ್ರೋತೃಗಳನ್ನು ರಂಜಿಸಿತು.
ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಮತ್ತು ಕೇಶವ ಜೋಶಿ ( ತಬಲಾ) ಪಕ್ಕವಾದ್ಯ ಸಹಕಾರ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0