ಜೂಲಪಾಳ್ಯ ಗ್ರಾಮದಲ್ಲಿ ಹಳ್ಳಹಿಡಿದ ಜಲಜೀವನ್ ಮಿಷನ್ ಯೋಜನೆ-ಅಧಿಕಾರಿಗಳಿಗೆ ಶಾಪ ಹಾಕುತ್ತಿರುವ ಗ್ರಾಮಸ್ಥರು

ಭಾಗ್ಯನಗರ: ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಒಂದು ವರ್ಷದ ಹಿಂದೆ ಪ್ರಾರಂಭಗೊಂಡಿರುವ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಜೂಲಪಾಳ್ಯ ಗ್ರಾಮದ ಗ್ರಾಮಸ್ಥರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ತಾಲೂಕಿನ ಜೂಲಪಾಳ್ಯ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಅಪೂರ್ಣ ಜಲ ಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆಗಳಿಗೆ ಶುದ್ದ ನೀರು ಪೂರೈಸುವಂತೆ ಒತ್ತಾಯಿಸಿ ಗ್ರಾಮದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾರಾಯಣಪ್ಪ ಮಾತನಾಡಿ, ಭಾರತ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರು ಓದಗಿಸಿ, ನೀರುನ್ನು ಸಂರಕ್ಷಣೆ ಮಾಡಿ ಮಹಿಳೆಯರ ಶ್ರಮ ಮತ್ತು ಸಮಯವನ್ನು ಉಳಿಸಬೇಕಾಗಿರುವ ಜಲ ಜೀವನ್ ಮೀಷನ್ ಯೋಜನೆಯ ಮುಖ್ಯ ಉದ್ದೇಶವೇ ಬಾಗೇಪಲ್ಲಿ ತಾಲೂಕಿನಲ್ಲಿ ಹಳ್ಳ ಹಿಡಿದಂತಾಗಿದೆ. ತಾಲೂಕಿನ ಜೂಲಪಾಳ್ಯ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕಳೆದ ಒಂದು ವರ್ಷದ ಹಿಂದೆ ಕಾಮಗಾರಿ ಪ್ರಾರಂಭಿಸಿ ಗ್ರಾಮದ ಬೀದಿ ಬೀದಿಯ ರಸ್ತೆಗಳನ್ನು ಹಗೆದು ಪೈಪ್ ಲೈನ್ ಅಳವಡಿಸಿರುವುದು ಬಿಟ್ಟರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ, ಪೈಪ್ ಲೈನ್ ಆಳವಡಿಕೆಗಾಗಿ ಹಗೆದಿರುವ ಸಿಸಿ ರಸ್ತೆಗಳನ್ನು ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ, ಪೈಪ್ ಮತ್ತು ನಲ್ಲಿಗಳನ್ನು ಅಳವಡಿಸಿಲ್ಲ. ಜೂಲಪಾಳ್ಯ ಗ್ರಾಮ ಪಂಚಾಯತಿ ಜನಪ್ರತಿನಿದಿಗಳ, ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿದೆ.
ಗುತ್ತಿಗೇದಾರ ಜಲ ಜೀವನ್ ಮಿಷನ್ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟಿರುವ ಪರಿಣಾಮ ಮನೆಗಳಿಗೆ ಸರಬರಾಜು ಆಗಬೇಕಾಗಿರುವ ನೀರು ಚರಂಡಿ, ರಸ್ತೆಗಳಲ್ಲಿ ಹರಿಯುತ್ತಿವೆ, ನಿತ್ಯ ನೀರು ಹರಿದು ರಸ್ತೆಗಳು ಹದಗೆಟ್ಟಿರುವುದರ ಜತೆಗೆ ನೀರು ನಿಂತಲ್ಲೆ ನಿಂತು ಗ್ರಾಮದ ರಸ್ತೆಗಳು ಕೊಳಚೆ ಪ್ರದೇಶವಾಗಿ ವಿವಿಧ ಬಗೆಯ ಬ್ಯಾಕ್ಟೀರೀಯಗಳು ಉಲ್ಬಣಗೊಂಡು ಗ್ರಾಮದ ಜನರು ಸಾಂಕ್ರಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಚತೆ ಸಂಪೂರ್ಣವಾಗಿ ಮರೀಚಿಕೆ ಆಗಿದೆ.
ಗ್ರಾಮದಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಸಂಬoಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಕಾಮಗಾರಿ ಉದ್ದೇಶಕ್ಕಾಗಿ ಹಗೆದಿರುವ ರಸ್ತೆಗಳನ್ನು ದುರಸ್ಥಿಗೊಳಿಸಿ, ಮನೆ ಮನೆಗೂ ಶುದ್ದ ನೀರು ಪೂರೈಸಿ, ಸ್ವಚ್ಚತೆ ಕಾಪಾಡದಿದ್ದರೆ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಂಜುಂಡಪ್ಪ, ನರಸಿಂಹಮೂರ್ತಿ, ನರಸಿಂಹಪ್ಪ, ಚಿಕ್ಕ ವೆಂಕಟರವಣಪ್ಪ, ವಿ.ನರಸಿಂಹಮೂರ್ತಿ, ನಾಗರಾಜು, ಆನಂದಪ್ಪ, ಅಂಜಿನಪ್ಪ, ವೆಂಕಟರವಣಪ್ಪ, ರಾಮನ್ನ, ಅಬಿಲಾಷ್, ನರೇಶ್, ಜೀವಿಕಾ ನರಸಿಂಹಪ್ಪ ಮತ್ತಿತರರು ಇದ್ದರು.
What's Your Reaction?






