ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ ತೋರುವ ಕವಿ ಎಚಸ್ವಿಅವರ ನಾಟಕ "ಹೂವಿ"
ಎಚ್.ಎಸ್.ವೆಂಕಟೇಶಮೂರ್ತಿಯವರು ಬರೆದಿರುವ ಮಕ್ಕಳ ನಾಟಕ "ಹೂವಿ" ಭೂಮಿಯ ಮೇಲೆ ಹಸಿರು ಉಳಿಸಿಕೊಳ್ಳುವುದು ಎಷ್ಟು ಅಗತ್ಯ ಎಂಬುದನ್ನು ಪ್ರಸ್ತುತ ಪಡಿಸುತ್ತದೆ.
ಗೌಡರ ಮಗ ಹೊನ್ನನ ತಂಗಿ ಬೆಳ್ಳಿ ಗೆಳತಿಯರ ಜೊತೆ ಹೊನ್ನೆ ತೋಪಿನಲ್ಲಿ ಆಟ ಆಡುವಾಗ ಆಡಿ ಆಡಿ ದಣಿದು ಹೊನ್ನೆ ಮರದಡಿ ಗೆಳತಿಯರ ಜೊತೆ ಕುಳಿತಿರುವಾಗ ಬೀಸುವ ತಂಗಾಳಿಯಲ್ಲಿ ಹೂವಿನ ಘಮಲು ಅವಳ ಮೂಗಿಗೆ ಬಡಿದು ಗಾಳಿಯಲ್ಲಿ ಹೂವೊಂದು ಬಂದು ಅವಳ ಕೈಗೆ ಸಿಗುತ್ತದೆ. ಆ ಹೂವಿನ ಮೇಲೆ ಆಕೆಗೆ ಮೋಹವಾಗಿ ಅದನ್ನು ಪಡೆದೇ ತೀರಬೇಕು ಎಂದು ನಿರ್ಧರಿಸಿ ಅವಳ ಅಣ್ಣ ಹೊನ್ನೇಗೌಡನಿಗೆ ಹೇಳುತ್ತಾಳೆ. ಈ ದೃಶ್ಯ ನಮಗೆ ಬೆಳ್ಳಿ ಬೆಳೆದು ಬಂದ ಶ್ರೀಮಂತಿಕೆಯನ್ನು ತೋರಿಸುವುದರ ಜೊತೆಗೆ ಸಹಜವಾಗಿ ಆಕೆಯ ಅಹಂಕಾರವನ್ನು ನಾವು ಕಾಣಬಹುದು.
ಬೆಳ್ಳಿಯ ಮಾತು ಕೇಳಿ ಅಣ್ಣ, ತಾನು ಆ ಹೂವಿನ ಗಿಡ ಅತಳ ವಿತಳ ಪಾತಾಳದಲ್ಲಿದ್ದರೂ ನಿಂಗೆ ತಂದು ಕೊಡುತ್ತೇನೆ ಎಂದು ಹೇಳಿ, ಈ ಹೂವನ್ನು ತಂದು ಕೊಟ್ಟವರಿಗೆ ಆ ಹೂವನ್ನು ಪಡೆದು ಒಂದು ಹೂವಿಗೆ ಹತ್ತು ಹೊನ್ನು ಕೊಡುವುದಾಗಿ ಡಂಗುರ ಸಾರಿಸುತ್ತಾನೆ. ಇದನ್ನು ಆತ ಸವಾಲಾಗಿ ತೆಗೆದುಕೊಂಡು ಹೊರಡುತ್ತಾನೆ. ಇದು ಕೂಡ ಶ್ರೀಮಂತಿಕೆ ಪ್ರಭಾವ, ಶ್ರೀಮಂತಿಕೆ ಇದ್ದರೆ ಎಲ್ಲವೂ ದೊರಕುತ್ತದೆ ಎನ್ನುವ ಧೋರಣೆಯನ್ನು ಇಲ್ಲಿ ಗುರುತಿಸಬಹುದು.
ಹೂವಿಯ ಅಕ್ಕ ಪುಟ್ಟಮ್ಮ ಹೊರಗೆ ಡಂಗುರದ ವಿಷಯವನ್ನು ತನ್ನ ತಂಗಿಗೆ ತಿಳಿಸುತ್ತಾಳೆ. ಒಂದು ಹೂವಿಗೆ ಹತ್ತು ಹೊನ್ನುಗಳನ್ನು ಕೊಡುವುದರಿಂದ ನಮ್ಮ ಮನೆಯ ಬಡತನ ನಿವಾರಣೆಯಾಗಬಹುದು. ಅದಕ್ಕಾಗಿ ಆ ಹೂವಿನ ಗಿಡವನ್ನು ಹುಡುಕುವುದಾಗಿ ಹೇಳಿ ಹೊರಡಬೇಕು ಅನ್ನುವಷ್ಟರಲ್ಲಿ ತಂಗಿ ಹೂವಿ ಆ ಹೂವಿನ ಗಿಡ ನಿನಗೆ ಅಲ್ಲೆಲ್ಲಿಯೂ ಸಿಗುವುದಿಲ್ಲ. ಒಂದು ಕೊಡಪಾನವನ್ನು ನನ್ನ ಮೇಲೆ ಸುರಿಯೇ ಅಕ್ಕಯ್ಯ ಎಂದು ಹೇಳಿ, ಹೂವಿ ಮೈಮುರಿದು ಪರಿಭ್ರಮಿಸುತ್ತಾ ಹೂವಿನ ಮರವಾಗಿ ಪರಿವರ್ತನೆಯಾಗುತ್ತಾಳೆ. ಪುಟ್ಟಕ್ಕನಿಗೆ ಮೊದಲೇ ಕೊಂಬೆ ರೆಂಬೆಗಳನ್ನು ಮುರಿಯಬಾರದು ಎಲೆಯನ್ನು ಹರಿಯಬಾರದು ಹೂಗಳಷ್ಟನ್ನೆ ಬಿಡಿಸಿಕೊಳ್ಳಬೇಕು ನಂತರ ಕೊನೆಗೆ ಒಂದು ಕೊಡಪಾನವನ್ನು ಸುರಿದರೆ ಮತ್ತೆ ಹೂವಿಯಾಗಿ ಬರುತ್ತೇನೆ ಎಂದು ಹೇಳಿರುತ್ತಾಳೆ. ಅದರಂತೆ ಪುಟ್ಟಕ್ಕ ಬುಟ್ಟಿಯ ತುಂಬಾ ಹೂ ಬಿಡಿಸಿಕೊಂಡು ಖುಷಿಯಿಂದ ಅವುಗಳನ್ನು ಮಾರಲು ಬೆಳ್ಳಿ ಮನೆಗೆ ಹೋಗಿ ಕೊಟ್ಟು ಹೊನ್ನು ಪಡೆಯುತ್ತಾಳೆ. ಆದರೆ ಮರದ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ. ತಂಗಿ ಹೂ ಮರವಾಗುವ ಪರಿ ನಿಜಕ್ಕೂ ಅದ್ಭುತ ಕಲ್ಪನೆ. ಹೆಣ್ಣು ಮತ್ತು ಪ್ರಕೃತಿ ಬೇರೆ ಬೇರೆಯಲ್ಲ ಎಂಬುದನ್ನು ನಾವು ಮರೆಯಬಾರದು.
ಪುಟ್ಟಕ್ಕನ ಬೆನ್ನು ಹತ್ತಿದ ಹೊನ್ನೇಗೌಡ ಮತ್ತು ಆತನ ಕುದುರೆ ಹುಲ್ಲಿನ ಬಣವೆಯಲ್ಲಿ ಕಾದು ಕುಳಿತು ಮುಂಜಾನೆ ಪುಟ್ಟಕ್ಕನ ಕೊನೆಯ ಒತ್ತಾಯಕ್ಕೆ ಹೂವಿ ಮತ್ತೆ ಹೂವಿನ ಮರವಾಗುವ, ಹೂ ಬಿಡಿಸಿಕೊಳ್ಳುವ ಪುಟ್ಟಕ್ಕನನ್ನು ಬಾಗಿಲಿನಿಂದ ಇಣುಕಿ ನೋಡಿ ಆಶ್ಚರ್ಯ ವ್ಯಕ್ತಪಡಿಸಿ, ಬೆಳ್ಳಿಯನ್ನು ಹೊನ್ನೇಗೌಡ ಮದುವೆ ಆಗಲು ನಿರ್ಧರಿಸಿ. ಮದುವೆಯಾಗುತ್ತಾನೆ. ಇದು ಕೂಡ ಸ್ವಪ್ರತಿಷ್ಠೆ ಯ ನಿರ್ಧಾರ ಕೂಡ ಎನಿಸುತ್ತದೆ. ವಿಶೇಷವಾದದ್ದು ನಮಗೇ ಸೇರಬೇಕು ಎನ್ನುವ ಧೋರಣೆಯನ್ನು ಇಲ್ಲಿ ಕಾಣಬಹುದಾಗಿದೆ.
ಮದುವೆಯಾಗಿ ಮನೆಗೆ ಬಂದ ಹೂವಿ, ಅಂದು ರಾತ್ರಿ ಸಜ್ಜೆ ಮನೆಯಲ್ಲಿ ತನ್ನ ಗಂಡನ ಪ್ರೀತಿಗೋಸ್ಕರ ಮತ್ತೆ ಮರವಾಗಿ ಹೂಗಳನ್ನು ನೀಡಿ, ಹೂಗಳ ರಾಶಿಯಲ್ಲಿ ಮಲಗಿ ಸುಖಿಸುವುದು, ನಿದ್ರೆ ಮಾಡುವುದು ಗೆಲುವಿನ ಸಂಕೇತವಾಗಿ ಮತ್ತು ಅರ್ಪಣಾ ಮನೋಭಾವವನ್ನು ತಿಳಿಸಿದ್ದಾರೆ. ಹೀಗಿರುವಾಗ ಬೆಳ್ಳಿ ತನ್ನ ಅಣ್ಣ ಹೆಂಡತಿಯಾಗಿ ಹೂವಿಯನ್ನು ಮದುವೆ ಮಾಡಿಕೊಂಡು ಬಂದ ನಂತರ ಅವನು ಅವಳ ಜೊತೆ ಸರಸ ಸಲ್ಲಾಪದಲ್ಲಿ ಕಾಲ ಕಳೆಯುವಾಗ ಮನೆಯ ಕೆಲಸವೆಲ್ಲ ನನ್ನದೇ ಆಗಿದೆ ಎಂದು ಕುದುರೆಯ ಬಳಿ ತನ್ನ ನೋವನ್ನು ತೋಡಿಕೊಳ್ಳುತ್ತಾಳೆ.
ಅದೊಂದು ದಿನ ತನ್ನ ಬೆಳ್ಳಿ ಅಣ್ಣನ ಬಳಿ ಅತ್ತಿಗೆ ಹೂವಿಯನ್ನು ಉಯ್ಯಾಲೆ ಆಟಕ್ಕೆ ಹೊನ್ನೆ ತೋಪಿಗೆ ಕರೆದುಕೊಂಡು ಹೋಗುವುದಾಗಿ ಒಪ್ಪಿಸಿ ಅತ್ತಿಗೆಯನ್ನು ತನ್ನ ಗೆಳತಿಯರ ಜೊತೆ ಹೊನ್ನೆ ತೋಪಿಗೆ ಕರೆದುಕೊಂಡು ಹೋಗುತ್ತಾಳೆ. ಹೀಗೆ ಉಯ್ಯಾಲೆ ಆಡುವಾಗ ಹೂವಿಯನ್ನು ಹೂವಿನ ಮರವಾಗುವಂತೆ ಪುಸಲಾಯಿಸಿ ಹೂವಿ ಅವಳ ಒತ್ತಾಯ ಪೂರ್ವಕವಾಗಿ ಹೂ ಮರವಾಗುತ್ತಾಳೆ. ಇದನ್ನೇ ಕಾದುಕೊಂಡು ಇದ್ದ ಬೆಳ್ಳಿ ಕೊಂಬೆ ರೆಂಬೆ ಸಮೇತ ಹೂಗಳನ್ನು ಕಿತ್ತು ತನ್ನ ಗೆಳತಿಯರಿಗೆ ಕೊಡುತ್ತಾಳೆ. ಇದರಿಂದ ಹೂವಿ ತುಂಬಾ ನೋವನ್ನು ಅನುಭವಿಸುತ್ತಾಳೆ. ಹೂವಿ ಎಷ್ಟೋ ಬೇಡಿದರು ಬೆಳ್ಳಿ ಮನ ಕರಗುವುದಿಲ್ಲ. ಇದು ಹೆಣ್ಣು ಹೆಣ್ಣಿಗೆ ಶತ್ರು ಎಂಬುದನ್ನು ಸೂಚಿಸುತ್ತದೆ. ನನ್ನಲ್ಲಿ ಇಲ್ಲದ್ದು ಅವಳಲೇಕೆ ಎನ್ನುವ ಮನೋಭಾವನೆ ಬೆಳ್ಳಿಯದ್ದು. ಇದು ಕೆಲವು ಹೆಣ್ಣಿನ ಹೊಟ್ಟೆ ಕಿಚ್ಚು ಎಂದು ತೋರುತ್ತದೆ.
ಮರವಾಗಿದ್ದ ಹೂವಿ ಮತ್ತೆ ಹೂವಿಯಾದಾಗ ರುಂಡ ಶರೀರವಾಗಿ ಮುಂಡ ಭೋಳಾದ ಮರವಾಗಿ ಇರುವುದನ್ನು ಕಂಡ ಬೆಳ್ಳಿ ಮತ್ತು ಜೊತೆಗಾತಿಯರು ಅಲ್ಲಿಂದ ವಾಪಸ್ಸು ಬಂದು ಬಿಡುತ್ತಾರೆ. ಈ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಬಂಡಿ ಓಡಿಸಿಕೊಂಡು ಬರುವ ರೈತ ಮುದುಕನೊಬ್ಬ ಇದನ್ನು ನೋಡಿ ತನ್ನ ಮನೆಯ ಅಂಗಳದಲ್ಲಿ ಇದನ್ನು ನೆಟ್ಟರೆ ಬೆಳೆಯಬಹುದು ಎಂದು ತನ್ನ ಗಾಡಿಯಲ್ಲಿ ಆ ಬೊಡ್ಡೆಯ ಮರವನ್ನು ಇಟ್ಟುಕೊಂಡು ಹೊರಡುತ್ತಾನೆ ಇದು ರೈತರು ಹೊಂದಿರುವ ಗುಣವನ್ನು ತೋರಿಸುತ್ತದೆ. ನಾಡಿನ ತಂದೆಯ ಸ್ಥಾನದಲ್ಲಿ ಅವನು ನಮಗೆ ಕಾಣುತ್ತಾನೆ.
ತಂಗಿ ಬೆಳ್ಳಿಯನ್ನು ತನ್ನ ಹೆಂಡತಿ ಹೂವಿಯ ಬಗ್ಗೆ ವಿಚಾರಿಸಿ ಕುದುರೆ ಏರಿ ಹುಡುಕುತ್ತಾ ರೈತನ ಅಂಗಳದಲ್ಲಿ ಎಲೆಯಾಗಿ ಚಿಗುರಾಗಿ ಕೊಂಬೆಯಾಗಿ ಬೆಳೆದಿರುವುದನ್ನು ಕಂಡು ಆ ಮರವನ್ನು ತಬ್ಬಿ ಈಕೆ ನನ್ನ ಹೆಂಡತಿ ಎಂದು ಆ ರೈತನ ಅರಿವಿಗೆ ತಂದು, ಹೂವಿಯನ್ನು ಕಣ್ಣು ಬಿಡಲು ಕೇಳಿಕೊಳ್ಳುತ್ತಾನೆ ಹೂವಿ ನಿಧಾನವಾಗಿ ಕಣ್ಣು ತೆರೆಯುತ್ತಾಳೆ. ಇಲ್ಲಿ ಹೊನ್ನೇಗೌಡನಿಗೆ ತನ್ನ ಹೆಂಡತಿಯ ಪ್ರೀತಿಯ ಅರ್ಥದಿಂದಾಗಿ ಕೊನೆಗೆ ತನ್ನ ಹೆಂಡತಿಯನ್ನು ಪಡೆಯುತ್ತಾನೆ.
ಕವಿ ಎಚ್ಎಸ್ ವೆಂಕಟೇಶಮೂರ್ತಿಯವರು ಹೂವಿ ನಾಟಕದ ಮೂಲಕ ಮನುಷ್ಯ ಪ್ರಕೃತಿಯ ಕೂಸು ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧದಿಂದಲೇ ಬದುಕು ಸಾಗುತ್ತಿರುವುದರ ಬಗ್ಗೆ ಹಾಗೂ ಈ ಸಮಾಜದೊಳಗೆ ಅದೇ ಚೈತನ್ಯವಾಗಿ ಎಲ್ಲರನ್ನೂ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿರುವುದರ ಬಗ್ಗೆ ಕವಿ ಬಹಳ ಅದ್ಭುತವಾಗಿ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಮಧ್ಯೆ ಮಧ್ಯೆ ಬರುವ ಕಾವ್ಯ ಜಾನಪದ ಸೊಗಡನ್ನು ಸಾರುವಂತಿದೆ. ಹಾಡುವ ಧಾಟಿಯಲ್ಲಿ ಇರುವ ಈ ಕಾವ್ಯವನ್ನು ಸುಮಧುರವಾಗಿ ಹಾಡಿಸಿಕೊಳ್ಳುತ್ತವೆ ಈ ನಾಟಕದೊಳಗೆ ಮತ್ತು ಮಧ್ಯೆ ಬರುವ ಕಾವ್ಯದೊಳಗೆ ಓದುಗ ಅಥವಾ ನೋಡುಗ ತನ್ನಲ್ಲಿ ಪರವಶನಾಗುವುದು ಖಂಡಿತ ನಡೆಯುತ್ತದೆ. ಇಂತಹ ಅದ್ಭುತ ಸನ್ನಿವೇಶವನ್ನು ಈ ನಾಟಕದ ತುಂಬಾ ಕಟ್ಟಿಕೊಟ್ಟಿರುವ ಹೊಸದಾದ ಕಲ್ಪನೆಯನ್ನು ಸೃಷ್ಟಿಸಿ ಕೊಟ್ಟಿರುವ ಕವಿ ಎಚ್ಎಸ್ ವೆಂಕಟೇಶಮೂರ್ತಿ ಅವರಿಗೆ ಅಭಿನಂದಿಸೋಣ.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ: 9739758558