ಕನ್ನಡ ರಂಗಭೂಮಿಯ ಧ್ರುವತಾರೆ "ವರದಾಚಾರ್ಯ"

ಕನ್ನಡ ರಂಗಭೂಮಿಯ ಧ್ರುವತಾರೆ "ವರದಾಚಾರ್ಯ"

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ವರದಾಚಾರ್ಯರು ಒಂದು ಧ್ರುವತಾರೆ. ಸುಮಾರು 25 ವರ್ಷಗಳ ಕಾಲ ನಾಟಕ ಕಲೆಯನ್ನೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡು ಅವರು ಕಲಾ ಸೇವೆ ಮಾಡಿದರು. ವರದಾಚಾರ್ಯರು ಜನಿಸಿದ್ದು 1869ರ ಫೆಬ್ರವರಿ 2ರಂದು. ಅವರ ತಂದೆ ರಾಮಸ್ವಾಮಿ ಅಯ್ಯಂಗಾರರು. ರೆವಿನ್ಯೂ ಶಿರಸ್ತೆದಾರರಾಗಿದ್ದರು. ವರದಾಚಾರ್ಯರು ತಮ್ಮ 10ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ತಂದೆಗೆ ಸಂಗೀತ ಕಲೆಯಲ್ಲಿ ತುಂಬಾ ಆಸಕ್ತಿ ಇತ್ತು. ಅದೇ ಗುಣ ಮಗನಲ್ಲಿಯೂ ಬೆಳೆಯಿತು. ವರದಾಚಾರ್ಯರು ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿ ಎಫ್.ಎ. ಪಾಸ್ ಮಾಡಿದರು. ಮೈಸೂರಿನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾಗ ಗೌರಿ ನರಸಿಂಹಯ್ಯನವರ "ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಸಭಾ ಮಂಡಲಿ"ಯಲ್ಲಿ ಪಾತ್ರವಹಿಸಲಾರಂಬಿಸಿದರು. ತಮ್ಮ ಅಭಿನಯ ಚಾತುರ್ಯದಿಂದ ಸ್ವಲ್ಪ ಕಾಲದಲ್ಲಿ ಜನಮನವನ್ನು ಆಕರ್ಷಿಸಿ ಉತ್ತಮ ನಟ ಎಂಬ ಹೊಗಳಿಕೆಗೆ ಪಾತ್ರರಾದರು. ಸ್ವಲ್ಪ ಸಮಯದ ಬಳಿಕ ಆ ಸಂಸ್ಥೆಯನ್ನು ಬಿಟ್ಟು "ಬೆಂಗಳೂರು ಯೂನಿಯನ್" ಎಂಬ ನಾಟಕ ಸಂಸ್ಥೆಯನ್ನು ಸೇರಿದರು. ಈ ಸಂಸ್ಥೆ ಒಡೆದು ಹೋಯಿತು.

ವರದಾಚಾರ್ಯರು 1902 ರಲ್ಲಿ ತಾವೇ "ಮೈಸೂರು ರತ್ನಾವಳಿ ನಾಟಕ ಸಭಾ" ವನ್ನು ಸ್ಥಾಪಿಸಿ ನಾಟಕ ಪ್ರದರ್ಶನವನ್ನು ಆರಂಭಿಸಿದರು. ತಮ್ಮ ಜೀವಮಾನ ಪರಿಯಂತ ಕನ್ನಡ ರಂಗಭೂಮಿಗೆ ಸೇವೆ ಸಲ್ಲಿಸಿದರು. ವರದಾಚಾರ್ಯರದು ತುಂಬಾ ಆಕರ್ಷಕ ವ್ಯಕ್ತಿತ್ವ.  ನೋಡಿದೊಡನೆ ಗೌರವ ಮೂಡಿಸುವಂತಹ ಗಂಭೀರ ರೂಪ. ಅವರ ನಡೆ ನುಡಿಗಳ ಠೀವಿಯೂ ಅಷ್ಟೆ. ರಾಜಪಾತ್ರಗಳು ಅವರಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದ್ದುವು. ಅಂತೆ ಅವರು ರಾಜ ಪಾತ್ರಗಳನ್ನೇ ಹೆಚ್ಚಾಗಿ ಅಭಿನಯಿಸುತ್ತಿದ್ದರು. ಒಮ್ಮೆ ಅವರ ದುಷ್ಯಂತ ಚಕ್ರವರ್ತಿಯ ಪಾತ್ರವನ್ನು ನೋಡಿದ ಉತ್ತರ ಭಾರತದ ಇಬ್ಬರು ರಾಜರು "ರಾಜವಂಶದಲ್ಲಿ ಹುಟ್ಟಿದವರಿಗೆ ಕೂಡ ಅವರ ನಡೆ-ನುಡಿ ಹೇಗಿರಬೇಕೆಂಬುದನ್ನು ತಿಳಿಸಿಕೊಡುವ ರೀತಿಯಲ್ಲಿ ಈತ ದುಷ್ಯಂತ ಪಾತ್ರವನ್ನು ವಹಿಸಿದ್ದಾರೆ" ಎಂದು ತಮ್ಮ ಮೆಚ್ಚುಗೆ ಸೂಚಿಸಿದರು.

ವರದಾಚಾರ್ಯರು ರಾವಣ, ಶಿಶುಪಾಲ, ಹಿರಣ್ಯಕಶಿಪು ಮುಂತಾದ ವೀರರಸ ಪ್ರಧಾನ ಪಾತ್ರಗಳನ್ನು ಪ್ರೇಕ್ಷಕರ ಮೈನವಿರೇಳುವಂತೆ ಅಭಿನಯಿಸುತ್ತಿದ್ದರು. ಹಾಗೆಯೇ ಪ್ರೇಕ್ಷಕರ ಕಣ್ಣಲ್ಲಿ ನೀರು ಇಳಿಯುವಂತೆ ಹರಿಶ್ಚಂದ್ರನ ಪಾತ್ರವನ್ನು ಅಭಿನಯಿಸುತ್ತಿದ್ದರು. ಅವರ ಅಭಿನಯ ಅತ್ಯಂತ ವಿಶಿಷ್ಟವಾಗಿತ್ತು 1919ರಲ್ಲಿ ಮೈಸೂರಿಗೆ ಬಂದಿದ್ದ ವಿಶ್ವಕವಿ ರವೀಂದ್ರನಾಥ ಠಾಕೂರರು "ಪ್ರಹ್ಲಾದ ಚರಿತ್ರೆ" ನಾಟಕದಲ್ಲಿ ಅವರ ಅಭಿನಯವನ್ನು ನೋಡಿ ಸ್ವತಃ ಹಿರಣ್ಯಕಶಿಪು ಈ ನಾಟಕದಲ್ಲಿ ಪಾತ್ರವಹಿಸಿದ್ದರೂ ವರದಾಚಾರ್ಯರಂತೆ ಹಿರಣ್ಯಕಶಿಪು ಪಾತ್ರವನ್ನು ಅಭಿನಯಿಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ಲಾಘಿಸಿದರು. ತಾವು ವಹಿಸುವ ಪಾತ್ರದ ವಿವಿಧ ಭಾಗಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆ ಪಾತ್ರದಲ್ಲಿ ತನ್ಮಯರಾಗಿ ಅಭಿನಯಿಸುವ ಕಲಾಪ್ರತಿಭೆ ಅವರಲ್ಲಿತ್ತು. ಅವರ ಮೋಹಕ ಸಂಗೀತ ಪಾತ್ರ ಪೋಷಣೆಗೆ ನೆರವಾಗುತ್ತಿತ್ತು. ನಾಟಕದ ಸನ್ನಿವೇಶಕ್ಕೆ ಸರಿಹೊಂದುವಂತೆ ,ರಸಪ್ರಚೋದಕವಾಗಿರುವಂತೆ ಅವರು ಹಾಡುತ್ತಿದ್ದರು. ನಾಟಕದ ಮಿತಿಯಲ್ಲಿ ಹಾಡುಗಾರಿಕೆ ಹೇಗಿರಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದರು. ಅಂತ ಹಾಡುಗಾರಿಕೆಯ ಶೈಲಿಯನ್ನು ರೂಪಿಸಿದರು. ಹಾಡಿದಾಗ ಪ್ರೇಕ್ಷಕರು ಅದರಿಂದ ಮುಗ್ಧರಾಗುತ್ತಿದ್ದರು. ಅವರ ಹಾಡುಗಾರಿಕೆ ಜನಸಾಮಾನ್ಯರಿಗೆ ಮೆಚ್ಚುಗೆ ಆಗುತ್ತಿದ್ದಂತೆ, ಸಂಗೀತ ವಿದ್ವಾಂಸರಿಗೂ ಪ್ರಿಯವಾಗಿತ್ತು. ಶಾಸ್ತ್ರ ನಿಯಮಗಳನ್ನು ಬಿಡದೆ ಜನಸಾಮಾನ್ಯರಿಗೂ ಪ್ರಿಯವಾಗುವಂತೆ ಹಾಡುವ ಕಲೆ ಅವರಿಗೆ ಸಿದ್ಧಿಸಿತ್ತು.

ವರದಾಚಾರ್ಯರು ರಂಗಭೂಮಿಯನ್ನು ಪ್ರವೇಶಿಸಿದಾಗ ರಂಗತಂತ್ರ ಅಷ್ಟಾಗಿ ಬೆಳೆದಿರಲಿಲ್ಲ. ಅದನ್ನು ಬೆಳೆಸಿ ನಾಟಕ ಪ್ರಯೋಗವನ್ನು ರಮ್ಯವು, ಆಕರ್ಷಕವು ಆಗುವಂತೆ ಮಾಡಿದ ಕೀರ್ತಿ ವರದಾಚಾರ್ಯರಿಗೆ ಸಲ್ಲುತ್ತದೆ. ಅವರು ಸುಪ್ರಸಿದ್ಧ ಪಂಡಿತ ನಾಟಕಕಾರಿಂದ ನಾಟಕಗಳನ್ನು ಬರೆಸುತ್ತಿದ್ದರು. ಹಾಗೆ ಬರೆಸಿದ ನಾಟಕಗಳನ್ನು ಸೂಕ್ಷ್ಮವಾಗಿ ಪರಿಪರಿಶೀಲಿಸಿ ಅವನ್ನು ರಂಗ ಪ್ರಯೋಗಕ್ಕೆ ಅಳವಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನಾಟಕ ಬರೆದ ವಿದ್ವಾಂಸರಿಗೆ ಉಪಯುಕ್ತವಾದ ಸಲಹೆಗಳನ್ನು ಕೊಟ್ಟು ಅವರ ಬರವಣಿಗೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಸುತ್ತಿದ್ದರು. ಯಾವುದೇ ಕೃತಿಯನ್ನು ತಮಗೆ ಸಮರ್ಪಕವಾಗಿ ತೋರುವವರೆಗೂ ರಂಗ ಪ್ರಯೋಕೆ ತೆಗೆದುಕೊಳ್ಳುತ್ತಿರಲಿಲ್ಲ. ಆಚಾರ್ಯರೇ ಕೆಲವು ನಾಟಕಗಳನ್ನು ಬರೆದದ್ದು ಉಂಟು. ವರದಾಚಾರ್ಯರ ಅಭಿನಯ ಶಕ್ತಿ ಅಸಮಾನ್ಯವಾದದ್ದು ಪಾತ್ರಗಳ ಅಂತರಂಗದ ಸಂಕೀರ್ಣ ಭಾವಗಳನ್ನು ಅವರು ತಮ್ಮ ಅಭಿನಯದಲ್ಲಿ ಎತ್ತಿ ತೋರಿಸುತ್ತಿದ್ದರು. ವರದಾಚಾರ್ಯರ ಅಭಿನಯ ಕೌಶಲವನ್ನು ಕನ್ನಡ ರಂಗಭೂಮಿಯ ಮುನ್ನಡೆಗಾಗಿ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಮೆಚ್ಚಿದ ಮೈಸೂರಿನ ಜನತೆ 1910 ರಲ್ಲಿ " ವರನಟ" ಎಂಬ ಬಿರುದನ್ನು ರತ್ನ ಖಚಿತ ತೋಡವನ್ನು, ಬಿನ್ನವತ್ತಳೆಯನ್ನು ಅವರಿಗೆ ಅರ್ಪಿಸಿ ಗೌರವಿಸಿತು. ವರದಾಚಾರ್ಯರಿಗೆ ದೊರೆತ ಸಾರ್ವಜನಿಕ ಗೌರವಗಳು ಪದಕಗಳು ಅನೇಕ.

ಕುಂಭಕೋಣ, ಮಧುರೆ, ತಿರುಚಿನಾಪಳ್ಳಿ, ಮಂಗಳೂರು, ಉಡುಪಿ ಮುಂತಾದ ಕಡೆಗಳಲ್ಲೆಲ್ಲಾ ವರದಾಚಾರ್ಯರು ಸಂಚರಿಸಿ ತಮ್ಮ ನಾಟಕಗಳನ್ನು ಪ್ರದರ್ಶಿಸಿದರು. ತಿರುಚಿನಾಪಳ್ಳಿಯ ಕಲಾಭಿಮಾನಿಗಳು ಶ್ರೀಮತಿ ಆನಿ ಬೆಸೆಂಟರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಅವರಿಗೆ "ನಾಟಕ ಶಿರೋಮಣಿ" ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ವರದಾಚಾರ್ಯರು ನಿರಾಡಂಬರ ಜೀವಿ; ಬಹು ಉದಾರಿ. ಕಷ್ಟ ಸ್ಥಿತಿಯಲ್ಲಿದ್ದ ಅನೇಕರಿಗೆ ಅವರು ಧಾರಾಳವಾಗಿ ಧನ ಸಹಾಯ ಮಾಡಿದರು. ತಮ್ಮ ನಾಟಕ ಸಂಘದಲ್ಲಿ ಪಾತ್ರವಹಿಸುತ್ತಿದ್ದ ಬಾಲ ನಟರನ್ನು ತಮ್ಮ ಮಕ್ಕಳಂತೆ ಪೋಷಿಸಿದರು. ಅವರ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡಿದರು. ಅನೇಕ ಧರ್ಮ ಕಾರ್ಯಗಳಿಗಾಗಿ ದಾನ ಮಾಡಿದರು. ಅತಿ ಔದಾರ್ಯ ಅವರ ಒಂದು ದೋಷವಾಯಿತು. ಇದರ ಪರಿಣಾಮವಾಗಿ ಕೊನೆಗಾಲದಲ್ಲಿ ಆರ್ಥಿಕ ದುಸ್ಥಿತಿಗೆ ಸಿಕ್ಕಿಬಿದ್ದರು ರತ್ನಾವಳಿ ನಾಟಕ ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ಕಷ್ಟವಾಯಿತು. ಶಾರದಾ ಸಂಸ್ಥೆಯನ್ನು ನಡೆಸಿಕೊಂಡು ಶಾರದಾ ಥಿಯೇಟರ್ಸ್ ಕಂಪನಿಯ ಮೂಲಕ ತಮ್ಮ ರಂಗ ಚಟುವಟಿಕೆಗಳನ್ನು ಪುನರಾರಂಭಿಸಿದರು. ಆದರೆ ಈ ಪ್ರಯತ್ನ ಫಲಕಾರಿಯಾಗಲಿಲ್ಲ. ಮತ್ತೆ ರತ್ನಾವಳಿ ನಾಟಕ ಸಂಸ್ಥೆಯನ್ನು ಪುನರುಜ್ಜೀವಿಸುವ ಪ್ರಯತ್ನ ನಡೆಸಿದರು. ಅದು ಅಷ್ಟೇನೂ ಯಶಸ್ವಿಯಾಗಲಿಲ್ಲ. ಈ ಹೊತ್ತಿಗೆ ಅವರ ಆರೋಗ್ಯವು ಕೆಟ್ಟಿತು. ಆಸ್ಪತ್ರೆ ಸೇರಬೇಕಾಯಿತು. ವರದಾಚಾರ್ಯರು ಕಾಯಿಲೆಯಿಂದ 1926 ಏಪ್ರಿಲ್ 4ರಂದು ಭಾನುವಾರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀರಿಕೊಂಡರು. ಅವರ  ಬ ಸ್ಮಶಾನ ಯಾತ್ರೆಯಲ್ಲಿ ಅಸಂಖ್ಯಾತ ಕಲಾಭಿಮಾನಿಗಳು ಭಾಗವಹಿಸಿ ತಮ್ಮನ್ನು ಅಗಲಿದ ಪ್ರಿಯ ನಟನಿಗೆ ಅಂತಿಮ ಗೌರವ ಸಲ್ಲಿಸಿದರು.


ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ:9739758558