ಭಗವಾನ್ ಮಹಾವೀರ ತೀರ್ಥಂಕರರ 2623 ನೇ ಜಯಂತಿ

ಭಗವಾನ್ ಮಹಾವೀರ ತೀರ್ಥಂಕರರ 2623 ನೇ ಜಯಂತಿ

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ

ಹಾಗೂ ಸ್ವಸ್ತಿಶ್ರೀ ಅಭಿನವ ಚಾರುಶ್ರೀಗಳವರ ಪ್ರಥಮ ವರ್ಷದ ಪಟ್ಟಾಭಿಷೇಕ ವರ್ಧ್ಯಂತೋತ್ಸವ ಮಹೋತ್ಸವ

ಚನ್ನರಾಯಪಟ್ಟಣ (ಶ್ರವಣಬೆಳಗೊಳ): 'ಬದುಕು ಬದುಕಲು ಬಿಡು' ಎಂಬ ಭಗವಾನ್ ಮಹಾವೀರ ತೀರ್ಥಂಕರರ ಸಂದೇಶವು 2600 ವರ್ಷಗಳಿಂದ ಇಂದಿನವರೆಗೂ ಪ್ರಚಲಿತವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಸಮಾಜಕ್ಕೆ ಅತ್ಯವಶ್ಯಕವಾಗಿದೆ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿದರು.
     ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ನಡೆದ ಅಭಿನವ ಚಾರುಶ್ರೀಗಳವರ ಪ್ರಥಮ ವರ್ಷದ ಪಟ್ಟಾಭಿಷೇಕ ವರ್ಧ್ಯಂತೋತ್ಸವ ಹಾಗೂ 2636 ನೇ ಮಹಾವೀರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಮಹಾವೀರರು 30ನೇ ವಯಸ್ಸಿನವರೆಗೆ ಯುವರಾಜರಾಗಿ ಬದುಕಿದವರು. 30 ವರ್ಷದಲ್ಲಿ ದೀಕ್ಷೆ ಪಡೆದು 12 ವರ್ಷ ತಪಸ್ಸನ್ನು ಆಚರಿಸಿ 42ನೇ ವಯಸ್ಸಿಗೆ ಕೇವಲ ಜ್ಞಾನ ಪ್ರಾಪ್ತಿಯಾಗುತ್ತದೆ. ನಂತರ 30 ವರ್ಷ ಇಡೀ ಜಗತ್ತಿಗೆ ಧರ್ಮೋಪದೇಶ ನೀಡಿ ತಮ್ಮ 72ನೇ ವಯಸ್ಸಿನಲ್ಲಿ ಅವರ ಅಷ್ಟ ಕರ್ಮಗಳು ನಾಶವಾಗಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುತ್ತಾರೆ.
     'ಬದುಕು ಬದುಕಲು ಬಿಡು' ಎಂಬ ಮಹಾವೀರರ ಕ್ರಾಂತಿ ನುಡಿಗಳು 2600 ವರ್ಷಗಳಿಂದ ಇನ್ನೂ ನೆನಪಿಸಿಕೊಳ್ಳುತ್ತೇವೆ. ನಮ್ಮಂತೆ ಇತರ ಸಮಸ್ತ ಜೀವಿಗಳನ್ನು ಬದುಕಲು ಬಿಡಬೇಕು, ಯಾರಿಗೂ ತೊಂದರೆ ನೋವನ್ನು ಮಾಡಬಾರದು ಎಂಬುದು ಈ ಮಾತಿನ ಸಾರಾಂಶ. ನಮಗೆ ಬದುಕಲು ಹಕ್ಕು ಇರುವ ಹಾಗೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ.
       ಅನೇಕಾಂತವಾದ ಇದಕ್ಕೆ ಪುಷ್ಟಿ ನೀಡುತ್ತದೆ. ಅನೇಕಾಂತವಾದ ಎಂದರೆ ಒಂದು ವಿಷಯದ ಬಗ್ಗೆ ವಿವಿಧವಾದ ದೃಷ್ಟಿಕೋನದಲ್ಲಿ ಬೇರೆ ಬೇರೆ ಭಾವನೆ ಇರುತ್ತದೆ. ಎಲ್ಲರ ಭಾವನೆಗಳನ್ನು, ಸಂಸ್ಕಾರ, ವಿಧಿ-ವಿಧಾನಗಳನ್ನು, ವಿವಿಧ ಸಂಸ್ಕೃತಿ ಆಚರಣೆ, ಸಂಪ್ರದಾಯಗಳನ್ನು ಒಪ್ಪಿಕೊಳ್ಳುವುದೇ ಅನೇಕಾಂತವಾದ ಎಂದರು.
     ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಸಂದೇಶಗಳು ಅಂದಿನಿಂದಲೂ ಇಂದಿನವರೆಗೂ ಮನುಷ್ಯ ಜೀವನಕ್ಕೆ ಪೂರಕವಾಗಿವೆ. ಶ್ರಾವಕರು ಸನ್ಯಾಸ ಜೀವನ ನಡೆಸುವುದು ಸಾಧ್ಯವಾಗದಿದ್ದರೂ, ಸಂಸಾರ ಜೀವನದಲ್ಲೇ ಮಹಾವೀರರ ದಿವ್ಯ ಸಂದೇಶಗಳನ್ನು, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
     ನಮ್ಮ ದೀಕ್ಷಾ ಗುರುಗಳಾದ ಕರ್ಮ ಯೋಗಿ ಸೃಷ್ಟಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಇಚ್ಛಾಶಕ್ತಿ ಅಪಾರವಾದದ್ದು, ಅವರ ದಿವ್ಯ ಆಶೀರ್ವಾದದಿಂದ ಕ್ಷೇತ್ರದ ಪೀಠಾಧ್ಯಕ್ಷರಾಗಿ ಶ್ರೀಮಠದ ಅಭಿವೃದ್ದಿ ಹಾಗೂ ಧರ್ಮಕಾರ್ಯ ಮಾಡಲು ಶಕ್ತಿ ತುಂಬಿದ್ದಾರೆ. ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಮಾಜ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
      ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ಸಿಂಹಾಸನ ಪೂಜೆ, ಶ್ರೀಗಳವರ ಪ್ರಥಮ ವರ್ಷದ ವಾರ್ಷಿಕ ಪಟ್ಟಾಭಿಷೇಕ ವರ್ಧಂತೋತ್ಸವ, ನಂತರ ಭಗವಾನ್ ಮಹಾವೀರ ತೀರ್ಥಂಕರರ ಮೂರ್ತಿಯನ್ನು ರಜತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಶ್ರೀಮಠದ ಆವರಣದಿಂದ ಮಂಗಲವಾದ್ಯ, ಚಿಟ್ಟಿಮೇಳ, ಚಂಡೆವಾದ್ಯ ಹಾಗೂ ನಗಾರಿ ವಾದನಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪುನಃ ಚಾವುಂಡರಾಯ ವೇದಿಕೆಯಲ್ಲಿ ಪಂಚಾಮೃತ ಅಭಿಷೇಕ ಹಾಗೂ ಭಂಡಾರ ಬಸದಿಯಲ್ಲಿ ಪರಿನಿಷ್ಕ್ರಮಣ ಕಲ್ಯಾಣ ನೆರವೇರಿಸಲಾಯಿತು.
ಪರಮಪೂಜ್ಯ ಆಚಾರ್ಯಶ್ರೀ 108 ಅಂತರ್ಮನ ಪ್ರಸನ್ನಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ಪಾವನ ಸಾನಿಧ್ಯ ವಹಿಸಿದ್ದರು.