ಗ್ರಾಮೀಣ ಸ್ತ್ರೀ ಬದುಕಿನಲ್ಲಿ ಆಧುನಿಕ ಸ್ಪರ್ಶದ "ಹುಡುಕಾಟ"

ಗ್ರಾಮೀಣ ಸ್ತ್ರೀ ಬದುಕಿನಲ್ಲಿ ಆಧುನಿಕ ಸ್ಪರ್ಶದ  "ಹುಡುಕಾಟ"

ಶ್ರೀಮತಿ ಕುಸುಮ ರವರ ಮೂರನೇ ಕಥಾ ಸಂಕಲನ "ಹುಡುಕಾಟ" ಓದಿದೆ. ಈ ಹಿಂದೆ ಅವರು ಪ್ರಕೃತಿ ಮತ್ತು ಅಂತರಂಗ ಎಂಬ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. "ಪ್ರಕೃತಿ" ಕಥಾ ಸಂಕಲನಕ್ಕೆ ಗಂಗಾವತಿಯ ಕನ್ನಡ ಸಂಘದಿಂದ "ಗಂಡುಗಲಿ ಕುಮಾರರಾಮ ಪ್ರಶಸ್ತಿ"ಯನ್ನು ಪಡೆದಿದ್ದಾರೆ. ಕುಸುಮ ರವರು ಮೂಲತಃ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲೂಕಿನ, ಅಬ್ಬೂರು ಗ್ರಾಮದವರು. ರೈತಾಪಿ ಕುಟುಂಬದಲ್ಲಿ ಬೆಳೆದು ಬಂದಿದ್ದರಿಂದ ಇವರ ಎಲ್ಲಾ ಕಥೆಗಳಲ್ಲೂ ಹಳ್ಳಿಯ ಕುಟುಂಬದ ಜನಜೀವನದ ನೋವು ನಲಿವು ಸಂಕಟಗಳ ವಿದ್ಯಮಾನಗಳನ್ನು ವಿಶಿಷ್ಟ ಶೈಲಿಯಲ್ಲಿ ದಾಖಲಿಸುವುದನ್ನು ನಾವು ಈ ಕಥೆಗಳಲ್ಲಿ ಕಾಣುತ್ತೇವೆ. ಹಳ್ಳಿಗಾಡಿನ ಬದುಕು ಬದಲಾಗುತ್ತಿರುವ ಸಂದರ್ಭದಲ್ಲಿ ಆಧುನಿಕತೆಗೆ ಹೊಂದಿಕೊಳ್ಳುವ ಹೆಣ್ಣು ಮಕ್ಕಳ ಬಿಕ್ಕಟ್ಟುಗಳನ್ನು ಇಲ್ಲಿನ ಕಥೆಗಳು ನಮ್ಮ ಮುಂದೆ ತೆರೆದಿಡುತ್ತವೆ. ಇಲ್ಲಿನ ಕಥೆಗಳಲ್ಲಿ ಪ್ರೀತಿ, ಆದರ್ಶ, ಮೋಸ, ಮೂಢನಂಬಿಕೆ, ಜಾತಿ, ವರದಕ್ಷಿಣೆ ಹೀಗೆ ಅನೇಕ ವಿವಿಧ ಚಿತ್ರಣಗಳನ್ನು ತಮ್ಮ ಕಥೆಗಳ ಮೂಲಕ "ಹುಡುಕಾಟ" ಎಂಬ ಕಥಾ ಸಂಕಲನದಲ್ಲಿ ಮೂಡಿಸಿದ್ದಾರೆ.

ಈ ಕಥಾ ಸಂಕಲನದಲ್ಲಿ  ಹುಡುಕಾಟ, ಪ್ರಕೃತಿ, ಚಿಗುರು, ಸಂಬಂಧ, ಬಾಂಧವ್ಯ, ಅಂತರಂಗ, ತಳಮಳ, ಅವ್ವ ಹೀಗೆ ಒಟ್ಟು ಎಂಟು ಕಥೆಗಳಿವೆ.

ಮೊದಲನೇ ಕಥೆ "ಹುಡುಕಾಟ" ಈ ಕಥೆಯಲ್ಲಿ ಸಂಸಾರದಲ್ಲಿ ಗಂಡ ಹೆಂಡತಿಯ ಹೊಂದಾಣಿಕೆಯನ್ನು ಕುಸುಮ ರವರು ಚೆನ್ನಾಗಿ ದಾಖಲಿಸುತ್ತಾ ಹೋಗಿರುವುದನ್ನು ಕಾಣಬಹುದು. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣು ತನ್ನ ಗಂಡನ ಮನೆಯಲ್ಲಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದರ ಜೊತೆಗೆ, ಗಂಡನ ನಡವಳಿಕೆ ಆತನ ಆಗು-ಹೋಗುಗಳ ಕಡೆಗೂ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಅದಕ್ಕೆ ಸರಿಯಾಗಿ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಮತ್ತು ಅನುಸರಿಸುವಲ್ಲಿ ಹೆಂಡತಿಯು ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದನ್ನು  ಪರಿಗಣಿಸುತ್ತಾಳೆ. ಇದನ್ನು ತಾನು ನಿಭಾಯಿಸಿಕೊಳ್ಳುವ ಕಲೆಗಾರಿಕೆಯಲ್ಲಿ ಆಕೆ ಯಶಸ್ವಿಯಾಗಬೇಕಾಗುತ್ತದೆ. ತನ್ನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ತೊಡಗಿಕೊಳ್ಳುವುದು ಸಹಜವೇ ಸರಿ. ಪುರುಷ ಪ್ರಧಾನ ಸಮಾಜದಲ್ಲಿ ಗಂಡ ಹೆಂಡತಿ ಇಬ್ಬರೂ ಅರ್ಥ ಮಾಡಿಕೊಳ್ಳುವಲ್ಲಿ ಬಹುಪಾಲು ಆಯುಷ್ಯವನ್ನು ಕಳೆದುಕೊಂಡಿರುತ್ತಾರೆ. ಕೊನೆಗೆ ಗಂಡನಿಗೆ ಹೆಂಡತಿಯ ಸ್ವಾತಂತ್ರ್ಯದ ಬಗ್ಗೆ ಚಿಂತಿಸುವ, ಆಕೆಯ ಕಷ್ಟ ಸುಖದ ಬಗ್ಗೆ ಚಿಂತನೆ ಮಾಡುವ ಸಂದರ್ಭವನ್ನು ಕಥೆ ನೈಜವಾಗಿ ಕಟ್ಟಿಕೊಡುತ್ತದೆ.

ಎರಡನೇ ಕಥೆ "ಪ್ರಕೃತಿ" ಕಥೆಯು ರೈತಾಪಿ ಕುಟುಂಬದ ಸಂಪ್ರದಾಯದಲ್ಲಿ ಬೆಳೆದು ಬಂದ ಹೆಣ್ಣೊಬ್ಬಳು ತನ್ನ ತವರಿಗೆ ಬಾಣಂತಿಯಾಗಿ ಬಂದಾಗ, ಮನೆಯ ಮುಂದಿನ ಜಗಲಿಯಲ್ಲಿ ಕುಳಿತು ನಡೆಸುವ ಹಳ್ಳಿಯ ಜನರ ವಿದ್ಯಾಮಾನಗಳನ್ನು ಒಳಗೆ ನಾಲ್ಕು ಗೋಡೆಗಳ ನಡುವೆ ತೊಟ್ಟಿಲ ಕಂದನ ಜೊತೆ ಇದ್ದು ಆಲಿಸುವ ಮೂಲಕ, ತನ್ನ ಅಮ್ಮನ ಜೊತೆ ಅವುಗಳನ್ನು ತೋಡಿಕೊಂಡು ವ್ಯವಸ್ಥೆಯ ಅರಿವನ್ನು ಪಡೆದುಕೊಳ್ಳುವ ಪ್ರಕೃತಿ ಕಥೆ ಕುಸುಮ ರವರ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಅರಣ್ಯ ಒತ್ತುವರಿಯ ಮೂಲಕ ಇನ್ನಷ್ಟು ಆಸ್ತಿ ಮಾಡಿಕೊಳ್ಳುವ ಹಳ್ಳಿಗರ ಆಸೆಗೆ, ಮೂಗರ್ಜಿಯಿಂದ ತನಿಖೆಯಾಗಿ ಕೊನೆಗೆ ಅದು ದಕ್ಕದೆ ಆ ಜಾಗಗಳಲ್ಲಿ ಅರಣ್ಯ ಇಲಾಖೆ ನೀಡುವ ಸಸಿಗಳನ್ನು ನೆಡುವುದರ ಮೂಲಕ ಕಥೆ ಕೊನೆಯಾಗುತ್ತದೆ. ಮನುಷ್ಯನ ದುರಾಸೆಗೆ ಪ್ರಕೃತಿ ಹಾಳಾಗಬಾರದು, ಪ್ರಕೃತಿಯ ನಾಶ ಅಪರಾಧ, ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು ಎನ್ನುವ ಸಂದೇಶವನ್ನು ಈ ಕಥೆ ನಮ್ಮಲ್ಲಿ ಮೂಡಿಸುತ್ತದೆ.

ಮೂರನೇ ಕಥೆ "ಚಿಗುರು" ವೈಧವ್ಯದ ಯಾತನೆಯನ್ನು ಅನುಭವಿಸುತ್ತಿರುವ ಜೀವಗಳು ಮತ್ತೆ ಬದುಕಿನ ಕಡೆ ಮುಖ ಮಾಡುವುದನ್ನು ಈ ಕಥೆ ಚಿತ್ರಿಸುತ್ತದೆ. ಅಕ್ಕ ವಸುಂದರಾ ಮತ್ತು ಭಾವ ಸೇರಿ; ಹೆಂಡತಿಯನ್ನು ಕಳೆದುಕೊಂಡ ಮೇಷ್ಟ್ರುಗೆ ಮತ್ತೆ ಬದುಕಿನ ಆಶಾಕಿರಣ ಮೂಡಿಸುವ ಮೂಲಕ ಬಾಂಧವ್ಯ ಕಲ್ಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದು ಹೆಣ್ಣಿಗೆ ಒಂದು ಗಂಡು ಅಥವಾ ಒಂದು ಗಂಡಿಗೆ ಒಂದು ಹೆಣ್ಣು ಅವಶ್ಯಕತೆ ಇದೆ. ಇದೇ ಸರಿಯಾದ ಮಾರ್ಗ ಎಂಬುದು ಕಥೆಯು ಮನವರಿಕೆ ಮಾಡಿಕೊಡುತ್ತದೆ.

ನಾಲ್ಕನೇ ಕಥೆ "ಸಂಬಂಧ" ವರದಕ್ಷಿಣೆ ಆಸೆಗಾಗಿ ಸೊಸೆ ಆಗಬೇಕಾಗಿದ್ದ ಹೆಣ್ಣನ್ನು ತಿರಸ್ಕರಿಸಿ, ಬೇರೊಂದು ಹೆಣ್ಣನ್ನು ತರಬೇಕೆಂದು ತೀರ್ಮಾನಿಸುವ ನಾಗತ್ತೆಯ ಕಥೆಯಾಗಿದೆ. ಇಲ್ಲಿ ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಮಾಡುವ ದ್ರೋಹ. ನಾಗತ್ತೆ ಗಂಡ ಇದನ್ನು ಧಿಕ್ಕರಿಸುತ್ತಾನೆ. ಹೆಣ್ಣಿಗೆ ಮೋಸವಾಗುವುದನ್ನು ಆತ ಸಹಿಸುವುದಿಲ್ಲ. ಆಧುನಿಕತೆಯ ದಾರಿಯಲ್ಲಿ ಮಗನ ವಿದ್ಯಾಭಾಸಕ್ಕೆ ಬೆಲೆಕಟ್ಟಲು ಹೊರಡುವ ತಾಯಿ. ಮತ್ತೊಂದು ಹೆಣ್ಣಿಗೆ ಅನ್ಯಾಯವಾಗುತ್ತಿದೆ ಎಂಬ ಅರಿವಾಗದಿರುವುದು ವಿಪರ್ಯಾಸವೇ ಸರಿ. ಕೊನೆಗೆ ನಾಗತ್ತೆ ಅನುಭವಿಸಿದ ಯಾತನೆಯನ್ನು ಮತ್ತು ಕೊನೆಗೆ ಮೋಸ ಹೋದ ಹೆಣ್ಣೇ ನಾಗತ್ತೆಯ ಆರೈಕೆ ಮಾಡುವುದನ್ನು ಕತೆ ತಿಳಿಸುವ ಮೂಲಕ ಸಂಬಂಧ ಅನ್ನೋದೇ ದೊಡ್ಡದು ಎಂಬುದನ್ನು ಸತ್ಯವಾಗಿಸುತ್ತದೆ. ಹಣ ಬರುತ್ತದೆ ಹೋಗುತ್ತದೆ ಆದರೆ ಸಂಬಂಧ ಶಾಶ್ವತವಾಗಿರುತ್ತದೆ ಎಂದು ಕಥೆ ತಿಳಿಸುತ್ತದೆ.

ಐದನೇ ಕಥೆ "ಬಾಂಧವ್ಯ" ಈ ಕಥೆ ಗಿರಿಯಮ್ಮಜ್ಜಿಯ ಬದುಕಿನ ಕಥೆಯನ್ನು ಹೇಳುತ್ತದೆ. ಇಲ್ಲಿ ಬರುವ ಪಾತ್ರಗಳಾದ ರಾಮ್ ಸಿಂಗ್, ಗೋಪಾಲ್ ಸಿಂಗ್, ಮೈನಾ, ನಾಗಮ್ಮ, ಮಂಚಮ್ಮ, ತುಂಗಕ್ಕ ಪ್ರತಿಯೊಂದು ಸರಿಯಾದ ಸಂದರ್ಭಕ್ಕೆ ಕಥೆಯಲ್ಲಿ ಒಗ್ಗಿಕೊಂಡಿರುವುದು ಕಥೆಗಾರ್ತಿ ಕುಸುಮ ರವರ ವಿಶಿಷ್ಟ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಮೈನಾ, ಗಿರಿಯಮ್ಮಜ್ಜಿಯ ಕಥೆ ಕೇಳಲು ಅವರ ಮನೆ ಹತ್ತಿರ ಬಂದಾಗ ಆಕೆ ಬಾಲ್ಯದ ನೆನಪುಗಳನ್ನು ತಂದುಕೊಳ್ಳುವುದರ ಮೂಲಕ ಓದುಗರಲ್ಲಿ ಬಾಲ್ಯದ ನೆನಪುಗಳು ಸಹಜವಾಗಿ ಮೂಡುವಂತೆ ಮಾಡುತ್ತಾರೆ.  ಮಕ್ಕಳಿಲ್ಲದವರಿಗೆ ಮಕ್ಕಳ ಮೇಲಿನ ಪ್ರೀತಿ ಎಷ್ಟು ಗಾಢವಾಗಿರುತ್ತದೆ ಎನ್ನುವುದಕ್ಕೆ ಗಿರಿಯಮ್ಮಜ್ಜಿಗೆ ಇದ್ದ ಮಕ್ಕಳ ಮೇಲಿನ ಪ್ರೀತಿಯನ್ನು ಇಲ್ಲಿ ಕಾಣಬಹುದು. ಗಿರಿಯಮ್ಮಜ್ಜಿ ಮೋಸವಾದರೂ ತಾಳ್ಮೆಯಿಂದ, ಸಮಾಧಾನ ಚಿತ್ರದಿಂದ, ಯಾಂತ್ರಿಕವಾಗಿ ಬದುಕು ಸಾಗಿಸಲೇಬೇಕಾಗುವ ಪರಿ ನಿಜಕ್ಕೂ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಮೋಸ ಮಾಡಿದವರು,ಮೋಸಕ್ಕೆ ಒಳಗಾದವರು, ಯಾರೂ ಇಲ್ಲಿ ಉಳಿಯುವುದಿಲ್ಲ. ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕಥೆಯೊಳಗೊಂದು ಕತೆ ಹುಟ್ಟಿಕೊಳ್ಳುವ ರೀತಿಯಲ್ಲಿ ಕುಸುಮಾ ರವರು ಈ ಕಥೆಯನ್ನು ಕಟ್ಟಿಕೊಟ್ಟಿರುವುದು ನಿಜಕ್ಕೂ ಅದ್ಭುತವಾಗಿದೆ.

ಆರನೇ ಕಥೆ "ಅಂತರಂಗ" ಈ ಕಥೆಯಲ್ಲಿ ಅತ್ತೆ ಸೊಸೆಯರ ಸಂಬಂಧದಲ್ಲಿ ನಡೆಯುವ ಬದುಕಿನ ಪ್ರಸಂಗವನ್ನು ಕುಸುಮ ರವರು ಲೀಲಾ ಜಾಲವಾಗಿ ಬರೆದುಕೊಂಡು ಹೋಗಿದ್ದಾರೆ.  ಅವರ ಈ ಕಥೆ ಓದುತ್ತಿದ್ದರೆ ಸಂಭಾಷಣೆ ಮಾಡಿದಂತಾಗುತ್ತದೆ. ಆಧುನಿಕತೆಯ ಕಡೆ ಮುಖ ಮಾಡುವ ಬದುಕಿನ ವಿದ್ಯಮಾನಗಳು ಇಲ್ಲಿ ನಮ್ಮೊಂದಿಗೆ ತೆರೆದುಕೊಳ್ಳುತ್ತವೆ. ಮಣ್ಣಿನ ಮಡಿಕೆಯ ಮಾರಾಟದಿಂದ ಜೀವನ ಸಾಗಿಸುವುದು ಎಷ್ಟು ಕಷ್ಟ ಎಂಬುದನ್ನು ಮತ್ತು ಮಣ್ಣಿನ ಮಡಿಕೆ ಮಾಡುವ ಕಲೆಯ ಕುರಿತು ಬರೆಯುವ ಕುಸುಮ ರವರು ಮುತ್ತಣ್ಣ ಮತ್ತು ನರಸಕ್ಕನ ಕುಟುಂಬ ಹಾಗೂ ಗೋವಿಂದಣ್ಣನ ಕುಟುಂಬದ ಜೀವನ ಚಿತ್ರಣವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತಾರೆ. ಜೊತೆ ಜೊತೆಗೆ ಸರಸು ಮತ್ತು ಕಮಲಳ ಸ್ನೇಹ ಮತ್ತು ಸರಸುವಿನ ಅತ್ತೆಯ ನಡುವಳಿಕೆಯನ್ನು ಕಥೆ ಚೆನ್ನಾಗಿ  ಆ ಪ್ರದೇಶದ ಭಾಷೆಯ ಸೊಗಡಿನಿಂದ ಹೇಳುತ್ತಾ ಹೋಗುವುದು ಒಂದು ವಿಶೇಷವೇ ಸರಿ.

ಏಳನೇ ಕಥೆ "ತಳಮಳ"  ತಾಯಕ್ಕನ ಬದುಕಿನ ಚಿತ್ರಣವನ್ನು ಈ ಕಥೆ ತಿಳಿಸುತ್ತದೆ. ಬದುಕನ್ನು ಸರಿಯಾಗಿ ಕಟ್ಟಿಕೊಳ್ಳದಿದ್ದರೆ ಅಥವಾ ಬೇಜವಾಬ್ದಾರಿಯ ಗಂಡನೊಂದಿಗೆ ಬದುಕು ಸವೆಸುವುದೆಂದರೆ ಹರಸಾಹಸವೇ ಸರಿ. ಬಾಲ್ಯ ಮತ್ತು ಯೌವನದಲ್ಲಿ ತಪ್ಪಿದ ದಾರಿಯಲ್ಲಿ ನಡೆಯುವ ಗಂಡಸು ಮತ್ತೆ ಸರಿಯಾದ ದಾರಿಯಲ್ಲಿ ನಡೆಯುವುದು ಅಪರೂಪವೇ ಸರಿ. ಗಂಡನಾದವನು ಮನೆಯ ಬದುಕಿನ ಜವಾಬ್ದಾರಿಯಿಂದ ಹೊರಗುಳಿದರೆ, ಅಲ್ಲಿ ಹೆಂಡತಿ ಏನು ಮಾಡಲು ಸಾಧ್ಯ? ಆಕೆ ತನ್ನ ಮಕ್ಕಳಿಗಾಗಿ, ಅವರ ಬದುಕಿಗಾಗಿ ಶ್ರಮಿಕಳಾಗಿ ನಿಲ್ಲಬೇಕಾಗುತ್ತದೆ. ಇದು ಅನಿವಾರ್ಯವೂ ಕೂಡ. ಕೆಲವು ಕುಟುಂಬಗಳಲ್ಲಿ ಇದನ್ನು ನಾವು ಈಗಲೂ ಕಾಣುತ್ತೇವೆ. ಇಷ್ಟಾದರೂ ಕೆಟ್ಟ ಗಂಡನ ಬದಲಾವಣೆಗೆ  ಅವಳು ಅವಕಾಶ ತೋರಿಸುವುದು ಔದಾರ್ಯವೇ ಸರಿ.

ಎಂಟನೇ ಕಥೆ "ಅವ್ವ" ಈ ಕಥೆಯಲ್ಲಿ ಮಗಳು ತಾಯಿಯನ್ನು ನೋಡುವ ದೃಷ್ಟಿಕೋನ, ಸಂಬಂಧಗಳ  ಎಳೆಗಳನ್ನು ಬಿಚ್ಚಿಡುತ್ತಾ, ತಾಯಿ ಮಗಳ ಆರ್ದ್ರ ಕರುಳಿನ ಸಂಬಂಧದ ನಿರಂತರತೆಯನ್ನು ಕಾಡುವ ಪರಿ ಸೊಗಸಾಗಿದೆ. ಆಶಾಳ ಅವ್ವ ಗಂಡನನ್ನು ಕಳೆದುಕೊಂಡು ಮಕ್ಕಳನ್ನು ಸಾಕಿ ಮದುವೆ ಮಾಡಿ ಮೊಮ್ಮಕ್ಕಳು ನೋಡಿರುತ್ತಾಳೆ. ಇಂತಹ ದೊಡ್ಡ ಅವಿಭಕ್ತ ಕುಟುಂಬ ವಿಘಟನೆ ಸಂದರ್ಭದಲ್ಲಿ ಆಕೆಯನ್ನು ಕುಗ್ಗಿಸಿ ಬಿಡುತ್ತದೆ. ಈ ಕಥೆಯಲ್ಲಿ ಅವಿಭಕ್ತ ಕುಟುಂಬದ ನೋವು ನಲಿವುಗಳನ್ನು ಕುಸುಮ ರವರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. 

ಹೆಣ್ಣು ಜೀವನ್ಮುಖಿಯಾಗಿ, ಆಶಾವಾದಿಯಾಗಿ, ಬದಲಾವಣೆಗಾಗಿ ಕಾಯುವ, ದುಡಿಮೆಯ ಜೊತೆಗೆ ಜವಾಬ್ದಾರಿ  ನಿಭಾಯಿಸುವುದನ್ನು ಇಲ್ಲಿನ ಎಲ್ಲಾ ಕಥೆಗಳಲ್ಲಿ ನಾವು ಕಾಣಬಹುದು. ಈ ದಿಸೆಯಲ್ಲಿ ಕಥೆಗಾರ್ತಿ ಕುಸುಮಾ ರವರು ಇನ್ನಷ್ಟು ಕಥೆಗಳನ್ನು ಬರೆದು ಪ್ರಕಟಿಸಲಿ ನಾವು ಓದುವಂತಾಗಲಿ ಎನ್ನೋಣವೇ.

ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -೫೬೦೦೫೬
ಮೊಬೈಲ್ ನಂ: 9739758558