ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ೨೯ನೆಯ ಸಾಹಿತ್ಯ ಪಯಣ ಹೆಜ್ಜೆ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ೨೯ನೆಯ ಸಾಹಿತ್ಯ ಪಯಣ ಹೆಜ್ಜೆ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ೨೯ನೆಯ ಸಾಹಿತ್ಯ ಪಯಣ ಹೆಜ್ಜೆ

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯದ ನೂರಾರು ಸುಪ್ತ ಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಸಿ.ಗೀತಾ ಅಭಿಪ್ರಾಯಪಟ್ಟರು. ಅವರು ಹಾಸನದ ಶಾಂತಿನಗರದ ಕವಯಿತ್ರಿ ಎಚ್.ಬಿ.ಚೂಡಾಮಣಿ ಅವರ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಹಮ್ಮಿಕೊಂಡಿದ್ದ ೨೯ ನೆಯ ಸಾಹಿತ್ಯ ಪಯಣ ಹೆಜ್ಜೆ ಹಾಗೂ ಮಾರುತಿ ಬೇಲೂರು ಅವರ "ಪ್ರೇಮ ವೀಣೆ" ಕೃತಿ ವಿಮರ್ಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ತಾಲ್ಲೂಕು ಘಟಕ ಮಕ್ಕಳ ಕಥಾ ಕಮ್ಮಟ, ಪುಸ್ತಕ ವಿಮರ್ಶೆ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ದಸರಾ ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮ ಹೀಗೆ ಹತ್ತು ಹಲವು ಮೌಲ್ಯಭರಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕವಿಗಳ ಕ್ಷೇತ್ರ ಭೇಟಿ, ಕಾವ್ಯ ಕಮ್ಮಟ, ಸಾಹಿತ್ಯ ಶಿಬಿರ, ಸಾಹಿತ್ಯ ಸಮ್ಮೇಳನಗಳಂತಹ ಮಹತ್ತರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಸಾಹಿತ್ಯ ಎನ್ನುವುದು ಸರ್ವರ ಹಿತವನ್ನು ಬಯಸುವುದೇ ಆಗಿದೆ. ಇಂತಹ ಸಾಹಿತ್ಯ ಗೋಷ್ಠಿಗಳು ನಮ್ಮಲ್ಲಿನ ಮಾನಸಿಕ ಒತ್ತಡವನ್ನು ದೂರಮಾಡಿ ಮನೋಲ್ಲಾಸವನ್ನು ನೀಡುತ್ತದೆ. ನಾವಿಲ್ಲಿ ಸೇರುವ ಎರಡ್ಮೂರು ಗಂಟೆಗಳಲ್ಲಿ ಎಲ್ಲಾ ಜಂಜಾಟಗಳನ್ನು ಮರೆತು ಮಕ್ಕಳಾಗಿಬಿಡುತ್ತೇವೆ ಎಂದರು.

ಕೃತಿ ವಿಮರ್ಶೆ: ಯುವ ಕವಿ ನಿರಂಜನ್ ಎ.ಸಿ. ಬೇಲೂರು ಕವಿ ಮಾರುತಿ ಬೇಲೂರು ಅವರ "ಪ್ರೇಮ ವೀಣೆ" ಕೃತಿ ಕುರಿತು ಮಾತನಾಡಿ "ಪ್ರೇಮ ವೀಣೆ" ಎಂಬ ಶೀರ್ಷಿಕೆ ನೋಡಿದ ತಕ್ಷಣ ಪ್ರೇಮ ಕವಿತೆಗಳ ಸಂಕಲನ ಅಂತ ಅನ್ನಿಸುತ್ತದೆ ಆದರೆ ಇವರ ಕೃತಿಯಲ್ಲಿ ಎಲ್ಲಾ ಕವಿತೆಗಳು ಕೂಡ ಸಮಾಜಿಕ ಕಳಕಳಿಯುಳ್ಳ ಕವಿತೆಗಳು , ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿದ್ದಾರೆ. ಬರೆಯುವ ಕವಿತೆಗಳು ಎಷ್ಟು ಜೀವಂತವಾಗಿರಬೇಕು ಅಂದರೆ ಮಲ್ಲಿಗೆ ಬಳ್ಳಿಯಂತೆ ಹಬ್ಬುತ್ತಿರಬೇಕು , ಓದುಗರ ಮನಸ್ಸಿನಲ್ಲಿ ಸದಾ ಉಳಿದುಕೊಳ್ಳುವಂತಿರ ಬೇಕು, ಸಂಸ್ಕೃತ ಕವಿಯೋಬ್ಬರ ಪ್ರಕಾರ , ಕಾವ್ಯವಾಗಲಿ , ಬಾಣವಾಗಲಿ ಓದುಗನ ಹೃದಯವನ್ನು ಕಂಪಿಸುತ್ತಾ , ನಾಟದಿದ್ದರೆ ಅದೆಂಥ ಬಾಣ! ಅದೆಂಥ ಕಾವ್ಯ? ಹಾಗೆಯೇ ಮಾರುತಿ ದೊಡ್ಡಕೋಡಿಹಳ್ಳಿ ಅವರ ಪ್ರೇಮ ವೀಣೆ ಕವನ ಸಂಕಲನದ ಎಲ್ಲಾ ಕವಿತೆಗಳು ಕೂಡ ಓದುಗನ ಹೃದಯವನ್ನು ಕಂಪಿಸಿದೆ ಎಂದರು.


ಗೌರವ ಸನ್ಮಾನ: ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶ್ರೀ ವಾಲ್ಮೀಕಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕ ಜಿ.ಓ.ಮಹಾಂತಪ್ಪ ಹಾಗೂ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಂಘಟಕಿ, ಭೀಮ ವಿಜಯ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಭವ್ಯ ನಾಗರಾಜ್ ಅವರುಗಳನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗೌರವ ಉಪಸ್ಥಿತಿ: ವೇದಿಕೆಯಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕೇಂದ್ರ ಸಮಿತಿಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಪ್ರಾಯೋಜಕಿ ಎಚ್.ಬಿ.ಚೂಡಾಮಣಿ ಹಾಗೂ ವೀರಶೆಟ್ಟಿ ದಂಪತಿಗಳು, ಗೈಡ್ ಲೀಡರ್ ಎಚ್.ಜಿ. ಕಾಂಚನಮಾಲಾ, ಪ್ರೇಮ ವೀಣೆ ಕೃತಿಕತ್ರೃ ಮಾರುತಿ ದೊಡ್ಡ ಕೋಡಿಹಳ್ಳಿ, ವಿಜ್ಞಾನ ಬರಹಗಾರ ಅಹಮದ್ ಹಗರೆ, ಲೇಖಕಿ ಕೆ.ಟಿ.ಜಯಶ್ರೀ, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕವಿಗೋಷ್ಠಿ ಮತ್ತು ಸಂವಾದ: ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ ಲಲಿತಾ ಎಸ್, ಎಂ.ಮಂಜುನಾಥ್, ಎಚ್.ಎನ್.ಭಾರತಿ, ಧರ್ಮರಾಜ್ ಶಾಂತಿನಗರ , ಪಲ್ಲವಿ ಬೇಲೂರು, ಧರ್ಮ ಕೆರಲೂರು, ಗಿರಿಜಾ ನಿರ್ವಾಣಿ, ರೇಖಾ ಪ್ರಕಾಶ್, ಪದ್ಮಾವತಿ ವೆಂಕಟೇಶ್, ಅಶ್ವಿನಿ ಪಿ.ರಘು, ಎಚ್.ಬಿ.ಚೂಡಾಮಣಿ, ಮಾರುತಿ ಕೆ.ಬಿ.ದೊಡ್ಡಕೋಡಿಹಳ್ಳಿ, ಪ್ರಮೀಳಾ, ಶೈಲಜಾ ಕೆ.ಕೆ, ಎಚ್.ಎಸ್.ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೇಂದ್ರ ಸಮಿತಿಯ ನಾಗರಾಜ್ ದೊಡ್ಡಮನಿ ಸ್ವಾಗತಿಸಿದರು, ಎಚ್.ಎಸ್. ಬಸವರಾಜ್ ನಿರೂಪಿಸಿದರು, ಕವಯಿತ್ರಿ ಪಲ್ಲವಿ ಬೇಲೂರು ಪ್ರಾರ್ಥಿಸಿದರು, ಶಿಕ್ಷಕಿ ಕೆ.ವಿ.ಕವಿತ ವಂದಿಸಿದರು.