ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಅದ್ದೂರಿ ಸ್ವಾತಿ ನಕ್ಷತ್ರ ಪೂಜೆ

ಕೆಜಿಎಫ್ : ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿರುವ ಕೆಜಿಎಫ್ ನಗರವು, ಇತ್ತೀಚೆಗೆ ನಾನಾ ರೀತಿಯ ಆಚರಣೆಗಳ ಮೂಲಕ ಹೊಸ ದಿಕ್ಕು ತೋರಿಸುತ್ತಿದೆ. ಇದೇ ಹಿನ್ನಲೆಯಲ್ಲಿ ನಾಳೆ ಗುರುವಾರದ ಸ್ವಾತಿ ನಕ್ಷತ್ರದ ವಿಶೇಷ ಪೂಜೆ ಕೆಜಿಎಫ್‌ನ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತಿ ಭಾವಪೂರ್ಣವಾಗಿ, ಶ್ರದ್ಧೆ,ಸಂಯಮದ ಸಮ್ಮಿಲನವಾಗಿ ಆಯೋಜಿಸಲಾಗಿದೆ.
ಸ್ವಾಮಿನಾಥ ಪುರಂ, ಕೋರಮಂಡಲ್ ಓಟ್ ಲೈನ್ ಪ್ರದೇಶದಲ್ಲಿರುವ ಈ ಪ್ರಸಿದ್ಧ ದೇವಾಲಯದಲ್ಲಿ, ಬೆಳಿಗ್ಗೆ 9 ಗಂಟೆಯಿಂದ, ಲಕ್ಷ್ಮೀನಾರಾಯಣ ಹೋಮ, ಮಹಾ ಅಭಿಷೇಕ, ವೇದಘೋಷದ ನಡುವೆ ಮಹಾ ಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಈ ಕಾರ್ಯಕ್ರಮಗಳು ಆಧ್ಯಾತ್ಮಿಕ ಶಾಂತಿ, ಮನಸ್ಸಿನ ಶುದ್ಧತೆ ಹಾಗೂ ದೇವರ ಕೃಪೆ ಪಡೆಯುವ ಉದ್ದೇಶದಿಂದ ಬೃಹತ್ ಮಟ್ಟದಲ್ಲಿ ನಡೆಯಲಿವೆ.
ಪೂಜಾ ವಿಧಿವಿಧಾನಗಳನ್ನು ನಿಪುಣ ಋತ್ವೀಕರು ನಿಷ್ಠೆಯಿಂದ ನೆರವೇರಿಸಲಿದ್ದು, ಈ ಪೂಜೆಯನ್ನು ಕೇವಲ ಆಚರಣೆಯಾಗಿ ನೋಡದೆ, ದೇವರ ಸಾನ್ನಿಧ್ಯವನ್ನು ಪಡೆದುಕೊಳ್ಳುವ ಅವಕಾಶವೆಂದು ದೇಗುಲದ ಆಡಳಿತ ಮಂಡಳಿಯವರು ಸೂಚಿಸಿದ್ದಾರೆ. ಭಕ್ತರಿಗಾಗಿ ಮಧ್ಯಾಹ್ನ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.
ಈ ಮಹಾ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗಾಗಿ ಧರ್ಮಾಧಿಕಾರಿ ಶ್ರೀ ಮಹೇಂದ್ರನ್ ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ನಿರಂತರ ಶ್ರಮವಹಿಸಿದ್ದಾರೆ. ಸ್ವಾತಿ ನಕ್ಷತ್ರವು ಭಕ್ತ ಪ್ರಹ್ಲಾದ ಹಾಗೂ ನರಸಿಂಹ ಅವತಾರದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ, ಈ ದಿನದ ಪೂಜೆ, ಹೋಮ, ಜಪ, ತಪಸ್ಸುಗಳು ಅತ್ಯಂತ ಫಲಪ್ರದವಾಗುತ್ತವೆ ಎನ್ನುವುದು ಆಸ್ತಿಕರ ನಂಬಿಕೆ. ಈ ನಕ್ಷತ್ರದಲ್ಲಿ ಮಾಡಿದ ಪೂಜೆಗಳು ಕುಲದೋಷ ಪರಿಹಾರ, ಧೃಷ್ಟಿ ಶಾಂತಿ ಹಾಗೂ ಸಂಕಟ ನಿವಾರಣೆಗೆ ಶಕ್ತಿಯುತವಾಗಿವೆ. ಪೂಜಾ ಕಾರ್ಯಕ್ರಮದ ಮೂಲಕ ಭಕ್ತರು ದೇವರ ಸ್ಮರಣೆಯಲ್ಲಿ ತೊಡಗಿ, ತಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಕೃಪೆ ಅನುಭವಿಸಬಹುದು ಎಂಬ ನಂಬಿಕೆ ಇದೆ. ಈ ಕಾರ್ಯಕ್ರಮವು ಧಾರ್ಮಿಕ ಸಂಸ್ಕೃತಿಗೆ ಉತ್ತೇಜನ ನೀಡುವ ಜ್ಞಾಪಕವಾಗಲಿದೆ. ಆದುದರಿಂದ ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ದೇಗುಲದ ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ.
What's Your Reaction?






