" ಶ್ರೀರಾಮ ಸಮರ್ಪಣಾ ಮೆರವಣಿಗೆ ಹಾಗೂ ದೀಪಾರಾಧನಾ" ಕಾರ್ಯಕ್ರಮ

" ಶ್ರೀರಾಮ ಸಮರ್ಪಣಾ ಮೆರವಣಿಗೆ ಹಾಗೂ ದೀಪಾರಾಧನಾ" ಕಾರ್ಯಕ್ರಮ

" ಶ್ರೀರಾಮ ಸಮರ್ಪಣಾ ಮೆರವಣಿಗೆ ಹಾಗೂ ದೀಪಾರಾಧನಾ" ಕಾರ್ಯಕ್ರಮ

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯದ ಹಿನ್ನೆಲೆಯಲ್ಲಿ ಸಾಗತವಳ್ಳಿ ಗ್ರಾಮದಲ್ಲಿ ಮೆರವಣಿಗೆ ಹಾಗೂ ದೀಪಾರತಿ ಕಾರ್ಯಕ್ರಮ ನೆರವೇರಿತು. ಗ್ರಾಮದ ಪ್ರತೀ  ಮನೆಯ ಮುಂದೆ ರಂಗೋಲಿ ಚಿತ್ತಾರವನ್ನು ಬಿಡಿಸಿ ,ತಳಿರು ತೋರಣವನ್ನು ಹಾಗೂ ಕೇಸರಿ ಧ್ವಜಗಳನ್ನು ಕಟ್ಟಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಬ್ರಾಹ್ಮೀ ಮುಹೂರ್ತದಿಂದಲೇ ಗ್ರಾಮದ ಅಧಿ ದೇವತೆ ಶ್ರೀ ಲಕ್ಷ್ಮೀನಾರಾಯಣ ದೇಗುಲದಲ್ಲಿ ಪ್ರಧಾನ ಅರ್ಚಕ ಶ್ರೀ ಎಸ್. ವಿ. ದತ್ತಾತ್ರೇಯ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಗೋಧೂಳಿ ಸಮಯದಲ್ಲಿ ಗ್ರಾಮದಾದ್ಯಂತ ಭಗವಾನ್ ಶ್ರೀ ರಾಮಚಂದ್ರನ ಭಾವಚಿತ್ರವನ್ನು ಹಿಡಿದು ಮೆರವಣಿಗೆ ಮಾಡಲಾಯಿತು. ತಮ್ಮ ತಮ್ಮ ಮನೆಯ ಮುಂದೆ ಸುಮಂಗಲಿಯರು ರಂಗೋಲಿ ಚಿತ್ತಾರವನ್ನು ಬಿಡಿಸಿ ಪ್ರಭು ಶ್ರೀರಾಮಚಂದ್ರನ ಭಾವಚಿತ್ರಕ್ಕೆ ದೀಪ ಆರತಿ ಬೆಳಗುವುದರೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಜೊತೆಗೆ ಸಂಗೀತ ಗುರುಗಳಾದ ಶ್ರೀ ಎಸ್ .ವಿ .ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಂಗೀತ ಉಪಕರಣಗಳೊಂದಿಗೆ ಭಜನಾ ಕಾರ್ಯಕ್ರಮವೂ ಕೂಡ ಮೇಳೈಸಿತು. ಸಂಜೆ ಸಾಗತವಳ್ಳಿ ಬ್ರಾಹ್ಮಣ ಮಹಾಸಭಾ ಹಾಗೂ  ಶ್ರೀರಾಮ ಭಜನಾ ಮಂಡಳಿಯ ಸಹಯೋಗದಲ್ಲಿ  ಗೀತ ಗಾಯನ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಈ ಸಂದರ್ಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಕೀಲ ಶ್ರೀ ಎಸ್ .ಆರ್ .ಶ್ರೀನಿವಾಸ್ ವಹಿಸಿದ್ದರು. ಮುಖ್ಯ ಅತಿಥಿಗಳ ಸ್ಥಾನ ಅಲಂಕರಿಸಿದ್ದ ಶ್ರೀ ಕೆ .ವಿ. ಸುಬ್ರಹ್ಮಣ್ಯ ಹಾಗೂ ಶ್ರೀ ಕೆರಗೋಡಿ ಜಗದೀಶ್ ಮಾತನಾಡಿ ನಾವೆಲ್ಲ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ತತ್ವ ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ  ಕು: ಯಶಸ್ವಿನಿ ಹಾಗೂ ಕು: ಇಂಚರ ಪ್ರಾರ್ಥಿಸಿದರೆ, ಶ್ರೀ  ಶ್ರೀನಿವಾಸ್ ಸ್ವಾಗತಿಸಿದರು. ಶ್ರೀ ಎಸ್. ವಿ. ನಾಗೇಶ್ ಗುಡಿಗೌಡ  ಅವರು ವಂದಿಸಿದರು .ಡಾ:ಎಸ್ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಶ್ರೀರಾಮ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.