25, 26ರಂದು ರಾಜ್ಯದಲ್ಲಿ ಎಸ್.ಐ.ಆರ್. ಮಹಾ ಸಂಪರ್ಕ ಅಭಿಯಾನ: ಎಸ್.ದತ್ತಾತ್ರಿ
ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಇದೇ ಜುಲೈ 25 ಮತ್ತು 26ರಂದು ಎಸ್.ಐ.ಆರ್ (ಮತದಾರರ ಪÀಟ್ಟಿ ಸಮಗ್ರ ಪರಿಷ್ಕರಣೆ) ಮಹಾ ಸಂಪರ್ಕ ಅಭಿಯಾನ ನಡೆಸಲಾಗುವುದು ಎಂದು ಎಸ್.ಐ.ಆರ್ ಮಹಾಭಿಯಾನದ ಸಂಚಾಲಕ ಮತ್ತು ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಲೋಗೋ ಪೋಸ್ಟರ್ ಅನ್ನು ಪ್ರಮುಖರ ಜೊತೆ ಬಿಡುಗಡೆ ಮಾಡಿದರು. ಪ್ರತಿಯೊಬ್ಬ ಪ್ರಮುಖ ಕಾರ್ಯಕರ್ತ 20 ಮನೆಗಳಿಗೆ ತೆರಳುವಂತೆ ಗುರಿ ನೀಡಿದ್ದೇವೆ. ಆ ಮನೆಯವರಿಗೆ ಫಾರ್ಮ್ ಬಗ್ಗೆ ವಿಚಾರಿಸಿ, ಬಳಿಕ ಫಾರ್ಮ್ ತುಂಬಿಸಲು ಬಿಎಲ್‍ಎ-2 ಜೊತೆ ಸಂಪರ್ಕಿಸುವ ಮೂಲಕ ರಾಜ್ಯದ ಎಲ್ಲ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ದಿನಕ್ಕೆ 10 ಮನೆಯಂತೆ ಭೇಟಿ ಮಾಡಿ, ಐದ್ಹತ್ತು ನಿಮಿಷ ಕಾಲ ಕಳೆದು ಕರಡು ಮತದಾರರ ಪಟ್ಟಿ ಬಳಿಕ ಏನು ಎಂಬ ವಿವರ ನೀಡಲು ತಿಳಿಸಿದ್ದೇವೆ. ಚುನಾವಣಾ ಆಯೋಗ ಮುಂದೆ ಕೇಳಬಹುದಾದ ದಾಖಲೆಗಳ ವಿವರವನ್ನೂ ಮತದಾರರಿಗೆ ಕೊಡಲಿದ್ದೇವೆ ಎಂದು ಹೇಳಿದರು. ಇದಕ್ಕಾಗಿ ಮ್ಯಾಪಿಂಗ್ ಕಾರ್ಯ ನಡೆದಿದೆ ಎಂದು ತಿಳಿಸಿದರು. ಲಭ್ಯ ಮಾಹಿತಿಯನ್ನು ಬಿಎಲ್‍ಎ-2 ಅವರಿಗೆ ನೀಡಲು ಸೂಚಿಸಲಾಗಿದೆ ಎಂದರು.
ಕಾರ್ಯಕರ್ತರಿಗೆ ಸಮರ್ಪಕ ತರಬೇತಿ..
ನಮ್ಮ ಪಕ್ಷದ ಎಲ್ಲ ಪ್ರಮುಖರು, ಕಾರ್ಯಕರ್ತರಿಗೆ ಎಸ್‍ಐಆರ್ ಕುರಿತಂತೆ ಕಳೆದ 6 ತಿಂಗಳಿನಿಂದ ತರಬೇತಿ ಕೊಡಲಾಗಿದೆ. ಇದಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿ, ಅವರು ಎಸ್‍ಐಆರ್ ಚಟುವಟಿಕೆ ನೋಡಿಕೊಳ್ಳಲು ತಿಳಿಸಿದ್ದೇವೆ ಎಂದು ವಿವರಿಸಿದರು.
ಮತದಾರರ ಗೊಂದಲ ನಿವಾರಿಸುವ ಪ್ರಮುಖ ಉದ್ದೇಶ..
ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವುದೇ ತಲೆಬಿಸಿಯ ಕೆಲಸ. ಅದನ್ನು ಭರ್ತಿ ಮಾಡಿ ಬಿಎಲ್‍ಒಗಳಿಗೆ ಕೊಡಬೇಕಿದೆ. ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವ ವಿಚಾರದಲ್ಲೂ ತರಬೇತಿ ಕೊಟ್ಟಿದ್ದೇವೆ. ಆದರೂ ಇದರ ವಿಚಾರದಲ್ಲಿ ಗೊಂದಲ- ಆತಂಕವಿದೆ ಎಂದು ಹೇಳಿದರು. ಮತದಾರರಿಗೆ ಮಾಹಿತಿ ಕೊಡುವ ಕೆಲಸವನ್ನು ನಾವು ಮಾಡಬೇಕಿದೆ. ಎಲ್ಲ ಮನೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ವಿಶೇಷವಾದ ಯೋಜನೆ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.
ಶಾಸಕರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ನಿರ್ದಿಷ್ಟವಾಗಿ ಕಾರ್ಯ ಜೋಡಿಸಲಿದ್ದಾರೆ. ಮತದಾರರಿಗೆ ಇರುವ ಗೊಂದಲ ನಿವಾರಣೆಯ ಪ್ರಮುಖ ಉದ್ದೇಶದಿಂದ ಈ ಅಭಿಯಾನ ನಡೆಯಲಿದೆ ಎಂದು ಹೇಳಿದರು. 224 ವಿಧಾನಸಭಾ ಕ್ಷೇತ್ರಗಳಿಗೆ ಸುಮಾರು 56 ಸಾವಿರ ಬಿಎಲ್‍ಎ-2 ಗಳನ್ನು ನೇಮಿಸಿದ್ದು, ಅದರ ವಿವರವನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿದ್ದೇವೆ. ಅದು ಅಪ್‍ಲೋಡ್ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇಡೀ ರಾಜ್ಯದಲ್ಲಿ 59,050 ಮತಗಟ್ಟೆಗಳಿವೆ. 59,050 ಬಿಎಲ್‍ಎ- 2ಗಳನ್ನು ನೇಮಿಸಲು ಸಾಧ್ಯವಿದೆ. ಅದಕ್ಕಿಂತ ಹೆಚ್ಚು ನೇಮಕ ಮಾಡಲು ಸಾಧ್ಯವಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಎಸ್.ಐ.ಆರ್ ಮಹಾಭಿಯಾನದ ಸಹ-ಸಂಚಾಲಕಿ ಶ್ರೀಮತಿ ಶ್ಯಾಮಲಾ ಹೆಚ್.ಎಸ್.ಮಹಿಳಾ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಶ್ರೀಮತಿ ರಜನಿ ಪೈ ಅವರು ಭಾಗವಹಿಸಿದ್ದರು.