ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ: ಒಂದು ನೋವಿನ ಪ್ರಶ್ನೆ
ಕರ್ನಾಟಕ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗದಿರುವುದು ಮತ್ತು ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪುತ್ತಿರುವುದು ರಾಜ್ಯದ ಮಹಿಳಾ ಶಾಸಕರಲ್ಲಿ ತೀವ್ರ ನಿರಾಶೆಗೆ ಕಾರಣವಾಗಿದೆ. ಒಟ್ಟು 224 ಶಾಸಕರ ಪೈಕಿ ಕೇವಲ ಹತ್ತೇ ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಬಹುತೇಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರೂ, ಪುರುಷ ಪ್ರಾಬಲ್ಯದ ರಾಜಕೀಯ ಮತ್ತು ಜಾತಿ ಸಮೀಕರಣಗಳ ಕಾರಣದಿಂದ ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾದ ನೋವಿನ ಸಂಗತಿಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ರಾಜಕೀಯ ಮತ್ತು ಶಾಸಕಾಂಗದಲ್ಲಿ ಸಿಗುತ್ತಿರುವ ಅತ್ಯಲ್ಪ ಪಾಲು, ರಾಜಕೀಯ ಪಕ್ಷಗಳಲ್ಲಿನ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಕೇಂದ್ರ, ರಾಜ್ಯ ಸಚಿವ ಸಂಪುಟ ಹಾಗೂ ಉನ್ನತ ರಾಜಕೀಯ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಕೇವಲ ಸಾಂಕೇತಿಕವಾಗಿರದೆ, ಸಮಾನತೆಯ ತತ್ವದಡಿ ಪ್ರಮುಖ ಸ್ಥಾನಗಳನ್ನು ನೀಡಬೇಕಾದ ಅನಿವಾರ್ಯತೆಯಿದೆ.
ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ ಈಗಲೂ ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆಯಾಗಿದೆ. ನಾರಿ ಶಕ್ತಿ ವಂದನ್ ಅಧಿನಿಯಮ'ದಂತಹ ಮೀಸಲಾತಿ ಕಾಯ್ದೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ, ಅಧಿಕಾರ ಹಂಚಿಕೆಯಲ್ಲಿ ಮಹಿಳೆಯರನ್ನು ಕಡೆಗಣಿಸುವ ಪ್ರವೃತ್ತಿ ಬದಲಾಗಿಲ್ಲ. ಸೂಕ್ತ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ಅಪಾರ ಜನಬೆಂಬಲ ಹೊಂದಿದ್ದರೂ, ಸಂಪುಟ ರಚನೆಯಲ್ಲಿ ಮಹಿಳೆಯರನ್ನು ಕೇವಲ ನಿರ್ದಿಷ್ಟ ಖಾತೆಗಳಿಗೆ (ಉದಾ: ಮಹಿಳಾ ಮತ್ತು ಮಕ್ಕಳ ಕಲ್ಯಾಣ) ಮಾತ್ರ ಸೀಮಿತಗೊಳಿಸುವ ಸಂಪ್ರದಾಯವಿದೆ. ಅದಕ್ಕಾಗಿ ಇದನ್ನು ಹೋಗಲಾಡಿಸುವ ಪದ್ಧತಿ ಜಾರಿಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕ್ಷೇತ್ರ ಮರುಹಂಚಿಕೆ ಪ್ರಕ್ರಿಯೆಯ ನಂತರ ಶಾಸಕಾಂಗದಲ್ಲಿ ಮಹಿಳೆಯರಿಗೆ ಶೇಕಡಾ 33% ರಷ್ಟು ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ರಾಜಕೀಯ ವ್ಯವಸ್ಥೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಬೇಕಾಗಿದೆ. ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಷ್ಟೇ ಅಲ್ಲದೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪುಟ ಸಭೆಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದು ಪ್ರತಿಯೊಂದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ.
ಶಾಸಕಾಂಗದಲ್ಲಿ ಮಹಿಳೆಯರ ಸಂಖ್ಯೆ ಕೇವಲ 4% ರಷ್ಟಿದ್ದು, ಇದು ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಪ್ರಭಾವಿ ಮಹಿಳಾ ಶಾಸಕರು ಸಚಿವರಾಗಲು ಸಾಕಷ್ಟು ಪ್ರಯತ್ನ ನಡೆಸಿದರೂ, ಸಂಪುಟ ವಿಸ್ತರಣೆಯ ವೇಳೆ ಪುರುಷ ಮುಖಂಡರಿಗೆ ಮಣೆ ಹಾಕಲಾಗುತ್ತಿದ್ದು, ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ.
ಹೊಸ ಸಂಪುಟ: ಭರವಸೆಯ ಜೊತೆ ನಿರಾಶೆ...
ಡಿ.ಕೆ. ಶಿವಕುಮಾರ್ + ಜಿ. ಪರಮೇಶ್ವರ್ ನೇತೃತ್ವದ 14 ಸದಸ್ಯರ ಸಂಪುಟ ಪ್ರಾದೇಶಿಕ-ಜಾತಿ ಸಮೀಕರಣಕ್ಕೆ ಆದ್ಯತೆ ಕೊಟ್ಟಿದೆ. ಅದು ಒಳ್ಳೆಯದು. ಆದರೆ "ಲಿಂಗ ಸಮಾನತೆ"ಯ ವಿಷಯದಲ್ಲಿ ಶೂನ್ಯ. ಒಬ್ಬರೇ ಒಬ್ಬ ಮಹಿಳಾ ಶಾಸಕಿಗೆ ಸಚಿವ ಸ್ಥಾನ ಇಲ್ಲ. ಕಾರಣ ಯಾವ ಮಹಿಳಾ ಶಾಸಕರಿಗೂ ಮಂತ್ರಿಯಾಗುವ ಸೌಭಾಗ್ಯ ದೊರೆಯದಿರುವುದು ಮಹಿಳಾ ಶಾಸಕರಲ್ಲಿ ತೀವ್ರ
ನಿರಾಶೆ ಮೂಡಿಸಿರುವುದಂತೂ ಸುಳ್ಳಲ್ಲ.
ಇದಕ್ಕಿಂತ ದೊಡ್ಡ ವಿರೋಧಾಭಾಸ ಇನ್ನೊಂದಿಲ್ಲ:
ಮತ ಕೇಳುವಾಗ "ಮಹಿಳಾ ಸಬಲೀಕರಣ", "ಗೃಹಲಕ್ಷ್ಮಿ", "ಶಕ್ತಿ" ಯೋಜನೆ ಅಂತ ಹೆಸರಿಡುತ್ತೇವೆ.
ಅಧಿಕಾರ ಹಂಚುವಾಗ "ಪುರುಷರ ಕ್ಲಬ್" ಮಾಡಿಬಿಡುತ್ತೇವೆ. ಮಹಿಳೆಯರೇ ಮತಬ್ಯಾಂಕ್, ಆದರೆ ನಿರ್ಧಾರದ ಟೇಬಲ್‌ನಲ್ಲಿ ಇಲ್ಲ...
ಕಾಂಗ್ರೆಸ್ ಸರ್ಕಾರ ಬರಲು ಗ್ಯಾರಂಟಿ ಯೋಜನೆಗಳು ಕಾರಣ ಅಂತ ಎಲ್ಲರೂ ಒಪ್ಪುತ್ತೇವೆ. ಆ ಯೋಜನೆಗಳಿಂದ ನೇರ ಲಾಭ ಪಡೆದವರು 1.1 ಕೋಟಿ ಮಹಿಳೆಯರು.
ಚುನಾವಣೆಯಲ್ಲಿ ಮತ ಹಾಕಿದವರು ಅವರು.
ಆದರೆ ನೀತಿ ರೂಪಿಸುವ ಕೋಣೆಯಲ್ಲಿ ಅವರ ಧ್ವನಿ ಯಾರು? ಶೂನ್ಯ.
ಇದನ್ನೇ ಪ್ರಜಾಪ್ರಭುತ್ವ ಅಂತೀವೇ? "ಜನರಿಂದ, ಜನರಿಗಾಗಿ" ಅಂದರೆ "ಪುರುಷರಿಂದ, ಪುರುಷರಿಗಾಗಿ" ಆಗುತ್ತೆ. ಜಾತಿ-ಧರ್ಮ-ಪ್ರದೇಶ ಲೆಕ್ಕಾಚಾರ, ಆದರೆ 50% ಜನಸಂಖ್ಯೆ ಮಾಯ?
ಸಂಪುಟ ರಚನೆ ವೇಳೆ 4-5 ದಿನ "ಜಾತಿ ಲೆಕ್ಕ, ಪ್ರದೇಶದ ಲೆಕ್ಕ" ಅಂತ ಚರ್ಚೆ.
ಕರ್ನಾಟಕದ 50% ಜನಸಂಖ್ಯೆ ಇರುವ ಮಹಿಳೆಯರ ಲೆಕ್ಕ ಯಾರೂ ಮಾಡಲ್ಲ.
ಹಿರಿಯ, ಸಮರ್ಥ, ಸಚಿವ ಸ್ಥಾನ ನಿಭಾಯಿಸಿದ ಅನುಭವ ಇರುವ ನಾಯಕಿಯರು ಇದ್ದರೂ "ಮೊದಲ ಪಟ್ಟಿ"ಯಲ್ಲಿ ಜಾಗ ಇಲ್ಲ. ಎರಡನೇ ಪಟ್ಟಿ ಅಂತ ಹೇಳಿ ಮುಖವಾಡ ಹಾಕಿದರೂ, ಮೊದಲ ಅವಮಾನ ಮರೆಯಲು ಆಗಲ್ಲ.
ಇದರ ಪರಿಣಾಮ ಏನು? ಅಂದರೆ,
1. ನೀತಿಯ ಕೊರತೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸುರಕ್ಷತೆ, ಆರೋಗ್ಯ ವಿಷಯದಲ್ಲಿ "ಮಹಿಳಾ ಕಣ್ಣಿನ" ನೋಟ ಇರಲ್ಲ. ಪುರುಷರೇ ನಿರ್ಧಾರ ಮಾಡಿದರೆ ಅಡುಗೆ ಮನೆಯ ಸಮಸ್ಯೆ ಗೊತ್ತಾಗಲ್ಲ.
2. ಸಂದೇಶ ತಪ್ಪಾಗುತ್ತದೆ: ರಾಜಕೀಯಕ್ಕೆ ಬರಬೇಕು ಅಂತ ಕನಸು ಕಾಣುವ ಮಹಿಳೆಯರಿಗೆ "ನಿಮಗೆ ಜಾಗ ಇಲ್ಲ" ಅಂತ ಪರೋಕ್ಷ ಸಂದೇಶ.
3. ಸಬಲೀಕರಣಕ್ಕೆ ಹಿನ್ನಡೆ: ಮತದಾನದ ಹಕ್ಕು ಕೊಟ್ಟದ್ದೇ ಸಬಲೀಕರಣ ಅಲ್ಲ. ಚುಕ್ಕಾಣಿ ಹಿಡಿಯುವ ಹಕ್ಕು ಕೊಟ್ಟಾಗ ಮಾತ್ರ ನಿಜವಾದ ಸಮಾನತೆ, ಅಲ್ಲವೇ!
ಭಾಷಣಕ್ಕೆ ಸೀಮಿತ, ಬೇಡ್ :
ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಕುರಿತಾಗಿ ರಾಜಕಾರಣಿಗಳು ದೊಡ್ಡ ದೊಡ್ಡ ಭಾಷಣಗಳನ್ನೇ ಮಾಡುತ್ತಾರೆ. ಆದ್ರೆ, ರಾಜಕಾರಣದಲ್ಲಿ ಮಹಿಳೆಯರು ಎಷ್ಟಿದ್ದಾರೆ ಎಂದು ಕೇಳಿದರೆ ನಿಜಕ್ಕೂ ನಾಚಿಕೆಯಾಗುತ್ತೆ..! ಯಾಕಂದ್ರೆ ಬೆರಳೆಣಿಕೆಯಷ್ಟು ಶಾಸಕಿಯರು ಪ್ರತಿ 5 ವರ್ಷಕ್ಕೊಮ್ಮೆ ವಿಧಾನಸಭೆ ಪ್ರವೇಶ ಮಾಡುತ್ತಾರೆ. ಅದರಲ್ಲೂ ಸ್ವತಂತ್ರ್ಯವಾಗಿ ಅಧಿಕಾರ ಚಲಾಯಿಸುವವರು ಕಡಿಮೆ.. ಕುಟುಂಬದ ಕೈಗೊಂಬೆಯಾಗಿ ಹೆಸರಿಗೆ ಮಾತ್ರ ಅಧಿಕಾರ ಹಿಡಿದಿರುವ ಮಹಿಳಾ ಜನಪ್ರತಿನಿಧಿಗಳೂ ಇದ್ದಾರೆ..! ಹೀಗಾದ್ರೆ ರಾಜಕಾರಣ ಬದಲಾಗೋದು ಹೇಗೆ?ರಾಜಕಾರಣದಲ್ಲಿ ಮೊದಲಿಗೆ ಎದ್ದು ಕಾಣೋದು ಪುರುಷ ಪ್ರಧಾನವಾದ ತೋಳ್ಬಲದ ರಾಜಕಾರಣ. ಎಲ್ಲಕ್ಕಿಂತಾ ಹೆಚ್ಚಾಗಿ ಅಪರಾಧಿ ಹಿನ್ನೆಲೆ ಇರುವವರು ರಾಜಕೀಯ ಪ್ರವೇಶ ಮಾಡುವ ಕಾರಣ, ಮಹಿಳೆಯರಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ. ಇನ್ನು ಭ್ರಷ್ಟರು ಹಾಗೂ ಸ್ತ್ರೀ ದ್ವೇಷಿಗಳು ರಾಜಕೀಯದ ಆಯಕಟ್ಟಿನ ಸ್ಥಳದಲ್ಲಿ ಇದ್ದರೆ ಮಹಿಳೆಯರಿಗೆ ಅವಕಾಶ ಸಿಗೋದಾದ್ರೂ ಹೇಗೆ? ಮನೆಯಲ್ಲೇ ಹೆಣ್ಣಿಗೆ ಗೌರವ ಕೊಡದ ಜನಪ್ರತಿನಿಧಿಯೊಬ್ಬ ಒಂದು ವೇಳೆಗೆ ಅನಿವಾರ್ಯವಾಗಿ ಆಕೆಗೆ ಅಧಿಕಾರ ನೀಡಬೇಕಾಗಿ ಬಂದರೂ ತನ್ನ ಕುಟುಂಬದಿಂದಲೇ ಓರ್ವ ಮಹಿಳೆಯನ್ನು ಚುನಾವಣೆಗೆ ನಿಲ್ಲಿಸಿ ಹಿಂಬಾಗಿಲ ಮೂಲಕ ತಾನೇ ಅಧಿಕಾರ ಚಲಾಯಿಸುತ್ತಾನೆ. ಈ ಮೂಲಕ ಹೆಸರಿಗೆ ಮಾತ್ರ ಜನ ಪ್ರತಿನಿಧಿ ಆಗುವ ಮಹಿಳೆ, ಪುರುಷ ರಾಜಕಾರಣದ ಕೈಗೊಂಬೆ ಆಗಿಬಿಡ್ತಾಳೆ. ಇನ್ನು ಮಹಿಳೆಯರು ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಡಿ ಕೆಲಸ ಮಾಡುವ ಸಂದರ್ಭದಲ್ಲಿ ಸಮುದಾಯದ ಜೊತೆ ಬೆರೆಯುವ ವಿಚಾರದಲ್ಲಿ ಹಲವು ಅಡೆತಡೆಗಳು ಇರುತ್ತವೆ. ಮಹಿಳಾ ಜನಪ್ರತಿನಿಧಿಗಳ ಗ್ಲಾಮರ್‌ಗೇ ಹೆಚ್ಚು ಪ್ರಾಧಾನ್ಯತೆ ನೀಡುವ ಪುರುಷರು ಒಂದು ಹಂತದಲ್ಲಿ ಅವರ ವ್ಯಕ್ತಿತ್ವ ಹನನದಂಥಾ ಹೇಯ ಹಾಗೂ ಅತಿರೇಕಕ್ಕೂ ಕೈ ಹಾಕುತ್ತಾರೆ.ಈ ನಿಟ್ಟಿನಲ್ಲಿ ಮಹಿಳೆಯರ ಬದುಕನ್ನ ಇನ್ನಷ್ಟು ಹಸನು ಮಾಡೋ ಕೆಲಸ ಬಾಕಿ ಉಳಿದಿದೆ.. ಇವೆಲ್ಲಾ ವಿಚಾರಗಳನ್ನ ಶಾಸನ ಸಭೆಗಳಲ್ಲಿ ಚರ್ಚಿಸಬೇಕು, ಅಂದ್ರೆ, ಪುರುಷರ ನಿಯಂತ್ರಣ ಇಲ್ಲದ ಮಹಿಳೆಯರು ಶಾಸನ ಸಭೆಗೆ ಬರಬೇಕು, ಸಮಾಜ ಬದಲಾಗಬೇಕು ಅಂದ್ರೆ ಕ್ರಾಂತಿ ಮಾಡಬೇಕಾಗಿಲ್ಲ. ನಮ್ಮ ಮನಸ್ಥಿತಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡ್ರೆ ಸಾಕು. ನಮ್ಮದೇ ಮನೆಯಲ್ಲಿ ಮಗಳಿಗೆ, ಹೆಂಡತಿಗೆ, ಅಮ್ಮನಿಗೆ, ಅಕ್ಕ-ತಂಗಿಗೆ ಕೊಡ್ತಿರುವ ಸ್ಥಾನಮಾನ ಏನು ಅನ್ನೋದನ್ನ ನಾವೇ ವಿಶ್ಲೇಷಣೆ ಮಾಡಿಕೊಂಡರೆ ಸಾಕು.. ಮನಸ್ಸು ಬದಲಾದರೆ, ಮನೆಗಳ ವಾತಾವರಣ ಬದಲಾಗುತ್ತೆ, ಸಮಾಜ ಬದಲಾಗುತ್ತೆ.. ಇಷ್ಟೆಲ್ಲಾ ಆದ ಮೇಲೆ ರಾಜಕೀಯ ಬದಲಾಗದೇ ಇರುತ್ತಾ..? ಖಂಡಿತವಾಗಿಯೂ ಬದಲಾಗಬಹುದು.....
ಆಶಯ ಮಾತು - ಸರ್ಕಾರಕ್ಕೆ ವಿನಂತಿ :
ಸರ್, ಇದು "ಪ್ರಾಥಮಿಕ ಸಂಪುಟ" ಅಂತ ಹೇಳ್ತಿದ್ದೀರಿ. ಒಳ್ಳೆಯದು.
ಮುಂದಿನ ವಿಸ್ತರಣೆಯಲ್ಲಿ ಕನಿಷ್ಠ 2-3 ಮಹಿಳಾ ಸಚಿವರಿಗೆ ಸ್ಥಾನ ಕೊಡಿ.
ಅದೂ "ಮಹಿಳಾ ಮತ್ತು ಮಕ್ಕಳ ಕಲ್ಯಾಣ" ಖಾತೆ ಮಾತ್ರ ಖಂಡಿತವಾಗಿಯೂ ಸೀಮಿತ ಮಾಡಬೇಡಿ.
ಹಣಕಾಸು, ಗೃಹ, ಆರೋಗ್ಯ, ಶಿಕ್ಷಣ - ಪ್ರಭಾವಿ ಖಾತೆ ಕೊಡಿ. ಕೊಟ್ಟರೆ ಉತ್ತಮ.
ಅದಕ್ಕಾಗಿಯೇ ಬಸವಣ್ಣನವರು ಹೇಳಿದರು: "ಸ್ತ್ರೀ-ಪುರುಷ ಸಮಾನತೆ". ಆ ತತ್ವವನ್ನು ಕಾಗದದಲ್ಲಿ ಬರೆಯುವುದಲ್ಲ, ಸಂಪುಟದಲ್ಲಿ ತೋರಿಸಬೇಕು. ಅಂದಾಗಲೇ ಮಾತ್ರ ನಾವೆಲ್ಲರೂ ಮಹಿಳಾ ಸಮಾನತೆ ಬಗ್ಗೆ ಮಾತನಾಡಲು ಸಾಧ್ಯ.
ಕೊನೆಯ ಮಾತು: ರಾಜ್ಯದಲ್ಲಿ
"ಮಹಿಳೆ CM ಆಗುವುದು ಯಾವ ಪಕ್ಷ ಬಂದರೂ ಅನುಮಾನ" -
ರಾಜಕೀಯ ಸಬಲೀಕರಣ = ಮತದಾನದ ಹಕ್ಕು + ಆಡಳಿತದ ಪಾಲು.
ಎರಡನೇದಿಲ್ಲದೆ ಮೊದಲನೆಯದು ಅಪೂರ್ಣ.
ಹೈಕಮಾಂಡ್, ರಾಜ್ಯ ನಾಯಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿ. ಮಹಿಳೆಯರಿಗೆ ನ್ಯಾಯ ಸಿಗಲಿ.
---
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು,ಬೀದರ ಜಿಲ್ಲೆ
What's Your Reaction?