ಗಾಂಧೀಜಿಯವರು ವಿಶ್ವದ ಶಾಂತಿದೂತ ಬಿ.ವಾಮದೇವಪ್ಪ ತೊಗಲೇರಿ
ಕುವೆಂಪು ಕನ್ನಡ ಭವನದಲ್ಲಿ ಮಹಾತ್ಮ ಗಾಂಧೀಜಿ, ಶಾಸ್ತ್ರೀಜಿ ಜನ್ಮ ದಿನಾಚರಣೆ “ಸತ್ಯವೇ ದೇವರು, ಅಹಿಂಸೆಯೇ ಶಕ್ತಿ” ಎಂಬ ಮಹಾನ್ ಸಂದೇಶವನ್ನು ಜಗತ್ತಿಗೆ ಸಾರಿದ, ಸರಳತೆಯನ್ನೇ ಜೀವನದ ಆಭರಣವನ್ನಾಗಿಸಿಕೊಂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವಿಶ್ವದ ಶಾಂತಿದೂತ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಬಣ್ಣಿಸಿದರು. ಅವರಿಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರೀರ್ವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಮಾತನಾಡುತ್ತಿದ್ದರು. ಶಾಸ್ತ್ರೀಜಿಯವರು ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಧೀರ ಪ್ರಧಾನ ಮಂತ್ರಿ ಎಂದು ವಾಮದೇವಪ್ಪ ಶ್ಲಾಘಿಸಿದರು.
ಕಾರ್ಯಕ್ರಮವು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಲೇಖಕಿಯರ ಸಂಘ ಹಾಗೂ ಕದಳಿ ಮಹಿಳಾ ವೇದಿಕೆಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿತ್ತು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧೀಜಿಯವರು ಜೀವಿಸಿದ ಕ್ರಮವೇ ನಮಗೆಲ್ಲರಿಗೂ ಸಂದೇಶ. ಅವರೊಬ್ಬ ಕೇವಲ ವ್ಯಕ್ತಿಯಲ್ಲ. ಅವರು ಚಿಂತನೆಗಳು, ಪಾಲಿಸಿದ ತತ್ವಗಳು, ಸಾರಿದ ಸಂದೇಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳತೆ ನಮಗೆಲ್ಲ ದಾರಿದೀಪ. ನೀವು ಜಗತ್ತಿನಲ್ಲಿ ಏನಾದರೂ ಬದಲಾವಣೆ ಬಯುಸುವಿರಿ ಅಂತಾದರೆ ಆ ಬದಲಾವಣೆಯ ಆದಿ ನಿಮ್ಮಿಂದಲೇ ಆರಂಭವಾಗಬೇಕು ಎಂದು ಸದಾ ಹೇಳುತ್ತಿದ್ದರು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ ಇಂದು ವಿಶ್ವದಾದ್ಯಂತ ಗಾಂಧೀಜಿಯವರ ಪ್ರತಿಮೆಗಳನ್ನು ನಿಲ್ಲಿಸಿದ್ದೇವೆ. ಅದರ ಜೊತೆಗೆ ಅವರ ಆದರ್ಶಗಳನ್ನು ಪಾಲುಸುವುದನ್ನೂ ನಿಲ್ಲಿಸಿದ್ದೇವೆ. ಇದು ಆಗಬಾರದು. ಇಡೀ ವಿಶ್ವವೇ ಗಾಂಧಿ ಅಂದರೆ ಭಾರತ, ಭಾರತ ಎಂದರೆ ಗಾಂಧಿ ಎಂದು ಭಾವಿಸಿದ್ದಾರೆ. ಅವರ ಸಂದೇಶ, ಜೀವನಕ್ರಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಪರಮೋಚ್ಛ ಗೌರವ ಎಂದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಶಿವಕುಮಾರ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಮತ್ತಿತರರು ಮಾತನಾಡಿದರು. ಸಾಹಿತಿಗಳಾದ ಸುಶೀಲಾ ಹಿರೇಮಠ ಹಾಗೂ ಜಯರಾಮನ್ ಪಿ ತಾವು ರಚಿಸಿದ ಕವನಗಳನ್ನು ವಾಚಿಸಿದರು ಮತ್ತು ಉಪನ್ಯಾಸಕಿ ಮಧು ಹಿರೇಮಠ,
ಗಿರಿಜ ಸಿದ್ದಲಿಂಗಪ್ಪ ಗೀತೆಗಾಯನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ರಾಜು, ಸಿ.ಜಿ.ಜಗದೀಶ್ ಕೂಲಂಬಿ, ಬಕ್ಕೇಶ್ ನಾಗನೂರು, ಸಿಂಗಾಪುರದ ಪರಮೇಶ್ವರಪ್ಪ, ಯೋಗೇಶಪ್ಪ, ತುಂಬಿಗೆರೆ ಹಾಲಪ್ಪ ಮೇಷ್ಟ್ರು, ಕೆ.ಜಯಣ್ಣ, ಉಜ್ಜಿನಯ್ಯ, ಚಿದಾನಂದ, ನೀಲಕಂಠಪ್ಪ, ಟಿ.ಎಸ್.ಶೈಲಜಾ, ಸುವರ್ಣ ಶಿವಮೂರ್ತಿ, ನಾಗೇಶ್ವರಿ ಆರ್.ನಾಯರಿ, ಪರಿಮಳ ಜಗದೀಶ್ ಕೂಲಂಬಿ, ನಂದಿನಿ ಕಂಬಿನೂಲು, ಶಶಿರೇಖಾ, ಪೂರ್ಣಿಮಾ ಪ್ರಸನ್ನ, ಹೆಚ್.ಎಲ್.ಶ್ರೀನಿವಾಸ್, ಸವಿತಾ, ಶಾಂತ ಮತ್ತಿತರರು ಉಪಸ್ಥಿತರಿದ್ದರು.
ಕೆ.ರಾಘವೇಂದ್ರ ನಾಯರಿ
ಗೌರವ ಕೋಶಾಧ್ಯಕ್ಷ
ಜಿಲ್ಲಾ ಕಸಾಪ, ದಾವಣಗೆರೆ
ಮೊ: 9844314543