ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿಗೆ ಪ್ರತಿಷ್ಠಿತ “ಯಕ್ಷ ಲೋಕದ ಮಾಸದ ಬಣ್ಣ–100” ಪ್ರಶಸ್ತಿ

ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿಗೆ ಪ್ರತಿಷ್ಠಿತ “ಯಕ್ಷ ಲೋಕದ ಮಾಸದ ಬಣ್ಣ–100” ಪ್ರಶಸ್ತಿ

        ದಾವಣಗೆರೆ: ಯಕ್ಷಗಾನದ ಬಣ್ಣದ ವೇಷದ ಪ್ರಕಾರದಲ್ಲಿ ದಂತಕಥೆ ಎಂದೇ ಪ್ರಸಿದ್ಧರಾಗಿದ್ದ ಸೌಕೂರು ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಪ್ರದಾನ ಮಾಡುವ ಪ್ರತಿಷ್ಠಿತ “ಯಕ್ಷ ಲೋಕದ ಮಾಸದ ಬಣ್ಣ–100” ಪ್ರಶಸ್ತಿಗೆ ದಾವಣಗೆರೆಯ ಕೆನರಾ ಬ್ಯಾಂಕ್ ಉದ್ಯೋಗಿ, ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಕೆ.ರಾಘವೇಂದ್ರ ನಾಯರಿ ಸಾಲಿಗ್ರಾಮ ಅವರು ಭಾಜನರಾಗಿದ್ದಾರೆ.

ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ನಾಟ್ಯ ನೃತ್ಯ ವಿದ್ಯಾ ನಿಲಯ ಟ್ರಸ್ಟ್ (ರಿ.) ಹಾಗೂ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಜನ್ಮಶತಮಾನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ನಾಟ್ಯಕ್ಷ–2026” ಸಾಂಸ್ಕೃತಿಕ ಸಂಗಮ ಸಮಾರಂಭದ ಭವ್ಯ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಸಮಿತಿಯ ಕಾರ್ಯದರ್ಶಿ ರಾಜಶೇಖರ ಸಕ್ಕಟ್ಟು ತಿಳಿಸಿದ್ದಾರೆ.

ಕೆ.ರಾಘವೇಂದ್ರ ನಾಯರಿ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿ, ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ, ಎಚ್. ಶ್ರೀಧರ ಹಂದೆ ಹಾಗೂ ಗೋವಿಂದ ಉರಾಳ ಅವರಿಂದ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದರು. ತಮ್ಮ 15ನೇ ವಯಸ್ಸಿನಲ್ಲಿ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದರಾಗಿ ಗುರುತಿಸಿಕೊಂಡ ಅವರು, 1988ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದಿಂದ ಆಯ್ಕೆಯಾದ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡಿ ನಾಡಿನ ಕಲೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಲ್ಕು ದಶಕಗಳಿಗೂ ಮೀರಿದ ಕಲಾಸೇವೆಯ ಅವಧಿಯಲ್ಲಿ ದೇಶ-ವಿದೇಶಗಳಲ್ಲಿ 500ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವ ಅವರು, ಪೌರಾಣಿಕ ಪ್ರಸಂಗಗಳ ಭೀಮ, ಧರ್ಮರಾಯ, ಅರ್ಜುನ, ಶ್ರೀರಾಮ, ಶತ್ರುಘ್ನ, ಕೀಚಕ, ಜಾಂಬವಂತ, ದೇವೇಂದ್ರ, ಈಶ್ವರ, ದುಷ್ಟಬುದ್ಧಿ, ದ್ರುಪದ ಹಾಗೂ ರುಕ್ಮಾಂಗದ, ಸತ್ರಾಜಿತ, ವೀರಭದ್ರ ಮೊದಲಾದ ವೈವಿಧ್ಯಮಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದ್ದಾರೆ.

ದಾವಣಗೆರೆಯಲ್ಲಿಯೂ ಮಲ್ಯಾಡಿ ಪ್ರಭಾಕರ ಶೆಟ್ಟಿ, ಸಾಲಿಗ್ರಾಮ ಗಣೇಶ್ ಶಣೈ, ಅನಂತ ಹೆಗಡೆ, ಹಟ್ಟಿಯಂಗಡಿ ಆನಂದ ಶೆಟ್ಟಿ, ಬೇಳೂರು ಸಂತೋಷ ಕುಮಾರ ಶೆಟ್ಟಿ, ಶಾಂತಪ್ಪ ಪೂಜಾರಿ, ನೀಲಾವರ ಭಾಸ್ಕರ ನಾಯಕ್ ಹಾಗೂ ಪ್ರದೀಪ ಕೆ.ವಿ. ಕಾರಂತ ಮೊದಲಾದ ಕಲಾವಿದರ ಒಡನಾಟದಲ್ಲಿ ಅನೇಕ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದಾರೆ.

ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ಕೆ. ರಾಘವೇಂದ್ರ ನಾಯರಿ ಅವರು ಬ್ಯಾಂಕ್ ಸೇವೆಯ ಜೊತೆಗೆ ಕಾರ್ಮಿಕ ಸಂಘಟನೆ, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸಂಘಟನೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಅವರು, ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ನ ಜಂಟಿ ಕಾರ್ಯದರ್ಶ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಎಐಟಿಯುಸಿ ಕಾರ್ಮಿಕ ಸಂಘಟನೆಯ ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ ಹಾಗೂ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿರುವ ಅವರು, ಪತ್ರಿಕೆಗಳಲ್ಲಿ ತಮ್ಮ ಅನೇಕ ಲೇಖನಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

“ನಾಟ್ಯಕ್ಷ–2026” ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಚಿತ್ರನಟ ಅರ್ಜುನ್ ಅರುಣ್, ಯಕ್ಷಗಾನ ವಿದ್ವಾಂಸ ಹಾಗೂ ಪ್ರಸಂಗಕರ್ತ ಪವನ್ ಕಿರಣಕೆರೆ, ಚಳ್ಳಕೆರೆಯ ನೃತ್ಯ ನಿಕೇತನ ಶಾಸ್ತ್ರೀಯ ನೃತ್ಯ ಮತ್ತು ಶಿಕ್ಷಣ ಸಂಸ್ಥೆಯ ಯು.ಎಸ್. ವಿಷ್ಣುಮೂರ್ತಿ ರಾವ್ ಹಾಗೂ ಸುಧಾಮೂರ್ತಿ ದಂಪತಿ, ವಿದುಷಿ ಶೈಲಜಾ ಮಧುಸೂದನ್ ರಾವ್, ನಾಗೇಶ್ವರಿ ರಾಘವೇಂದ್ರ ನಾಯರಿ, ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ ಬಂಗೇರ, ನಾಟ್ಯ ನೃತ್ಯ ವಿದ್ಯಾ ನಿಲಯ ಟ್ರಸ್ಟ್‌ನ ವಿದುಷಿ ರಕ್ಷಾ ರಾಜಶೇಖರ ಸಕ್ಕಟ್ಟು ಹಾಗೂ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಜನ್ಮಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ರಾಜಶೇಖರ ಸಕ್ಕಟ್ಟು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯಕ್ಷಗಾನ ಕಲೆಯ ಮೇಲಿನ ಅಪಾರ ಪ್ರೀತಿ, ನಿರಂತರ ಕಲಾಸೇವೆ ಹಾಗೂ ಸಾಂಸ್ಕೃತಿಕ ಸಂಘಟನೆಯಲ್ಲಿನ ಕೊಡುಗೆಯನ್ನು ಗುರುತಿಸಿ ನೀಡಲಾದ ಈ ಪ್ರಶಸ್ತಿಯು ಕೆ. ರಾಘವೇಂದ್ರ ನಾಯರಿ ಅವರ ಕಲಾ ಬದುಕಿಗೆ ಮತ್ತೊಂದು ಗೌರವದ ಗರಿ ಮೂಡಿಸಿದೆ.