ಕಾರು ಡಿಕ್ಕಿ: ವೃದ್ಧ ಸಾವು, ಪತ್ನಿ ಹಾಗೂ ಮೊಮ್ಮಗನಿಗೆ ಗಂಭೀರ ಗಾಯ

ಕಾರು ಡಿಕ್ಕಿ: ವೃದ್ಧ ಸಾವು, ಪತ್ನಿ ಹಾಗೂ ಮೊಮ್ಮಗನಿಗೆ ಗಂಭೀರ ಗಾಯ

ಹಲಗೂರು: ಸಮೀಪದ ಬಾಣಸಮುದ್ರ ಗೇಟ್ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ಹಾಗೂ ಮೊಮ್ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಚ್.ಬಸಾಪುರ ಗ್ರಾಮದ ಶಿವಮಾದಯ್ಯ (64) ಮೃತಪಟ್ಟವರು. ಅವರ ಪತ್ನಿ ಲಕ್ಷ್ಮಮ್ಮ ಹಾಗೂ ಮೊಮ್ಮಗ ವೆಂಕಟರಾಜು ಗಾಯಗೊಂಡಿದ್ದಾರೆ.
ಶಿವಮಾದಯ್ಯ ಅವರು ಪತ್ನಿ ಮತ್ತು ಮೊಮ್ಮಗನೊಂದಿಗೆ ಮಳವಳ್ಳಿ ಕಡೆಯಿಂದ ಸ್ಕೂಟರ್‌ನಲ್ಲಿ ತಮ್ಮ ಸ್ವಗ್ರಾಮ ಎಚ್.ಬಸಾಪುರಕ್ಕೆ ತೆರಳುತ್ತಿದ್ದಾಗ ಬಾಣಸಮುದ್ರ ಗೇಟ್ ಬಳಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಿವಮಾದಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಲಕ್ಷ್ಮಮ್ಮ ಮತ್ತು ವೆಂಕಟರಾಜು ತೀವ್ರವಾಗಿ ಗಾಯಗೊಂಡಿದ್ದಾರೆ.

 ಅಪಘಾತದಲ್ಲಿ ಕಾರು ಹಾಗೂ ಸ್ಕೂಟರ್ ಜಖಂಗೊಂಡಿವೆ.
ಗಾಯಾಳುಗಳನ್ನು ತಕ್ಷಣ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.