ಒನಕೆ ಓಬವ್ವ ಧೈರ್ಯ ಮತ್ತು ಸಾಹಸ ಮಹಿಳೆಯರಿಗೆ ಸದಾ ಪ್ರೇರಣೆ: ಇಒ ನಾಗಮಣಿ
ಭಾಗ್ಯನಗರ: ದೇಶದ ರಕ್ಷಣೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರವನಿತೆ ಒನಕೆ ಓಬವ್ವ ಅವರ ಧೈರ್ಯ, ಸಾಹಸ ಮತ್ತು ತ್ಯಾಗ ಇಂದಿನ ಮಹಿಳೆಯರಿಗೆ ಮಾದರಿಯಾಗಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
19ನೇ ಶತಮಾನದಲ್ಲಿ ಚಿತ್ರದುರ್ಗದ ಕೋಟೆಯನ್ನು ಮದಕರಿ ನಾಯಕ ಆಳುತ್ತಿದ್ದ ಸಂದರ್ಭದಲ್ಲಿ, ಕೋಟೆಯ ಕಾವಲುಗಾರನಾಗಿದ್ದ ಕಹಳೆ ಮದ್ದಹನುಮಪ್ಪ ಅವರ ಪತ್ನಿ ಒನಕೆ ಓಬವ್ವ, ಹೈದರಾಲಿಯ ಸೈನಿಕರು ಕೋಟೆಯ ಮೇಲೆ ದಾಳಿ ಮಾಡಿದಾಗ ಕೈಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ಶತ್ರು ಸೈನಿಕರನ್ನು ಎದುರಿಸಿ ವೀರಾವೇಶದಿಂದ ಹೋರಾಡಿದರು. ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅವರ ಸಾಹಸ ಚಿತ್ರದುರ್ಗದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಒನಕೆ ಓಬವ್ವ ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಗೌರವಿಸಲಾಗುತ್ತದೆ. ಶತ್ರು ಸೈನಿಕರು ಕೋಟೆಯೊಳಗೆ ಪ್ರವೇಶಿಸಲು ಬಳಸಿದ ಕಿಂಡಿಯನ್ನು ಇಂದಿಗೂ 'ಒನಕೆ ಓಬವ್ವನ ಕಿಂಡಿ' ಎಂದು ಕರೆಯಲಾಗುತ್ತದೆ. ಕನ್ನಡ ನಾಡಿನ ಮಹಿಳೆಯರ ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಓಬವ್ವ ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಮೋಹನ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಬಿ.ಸಿ.ಎಂ. ಇಲಾಖೆ ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಮಂಜುಳಾ,ಕೈಗಾರಿಕಾ ಇಲಾಖೆ ಬಾಬು,ಮುಖ್ಯ ಭಾಷಣಕಾರ ಚಂದ್ರಶೇಖರ, ಛಲವಾದಿ ಸಮುದಾಯದ ಅಧ್ಯಕ್ಷ ರಾಮಚಂದ್ರ, ಇಂದುಕೂರೋಲ್ಲಪಲ್ಲಿ ಕೃಷ್ಣಪ್ಪ, ಶಿವಪ್ಪ, ರಾಮಪ್ಪ, ರಮೇಶ್, ನಾಗರಾಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು...