ಆರೋಗ್ಯಪೂರ್ಣ ಹಾಗೂ ಸುರಕ್ಷಿತ ಭಾರತದೊಂದಿಗೆ ವಿಶ್ವಕಲ್ಯಾಣಕ್ಕಾಗಿ : ಶ್ರೀ ಮಹಾಧನ್ವಂತರಿ ಯಾಗ, ಉಡುಪಿ

ಆರೋಗ್ಯಪೂರ್ಣ ಹಾಗೂ ಸುರಕ್ಷಿತ ಭಾರತದೊಂದಿಗೆ ವಿಶ್ವಕಲ್ಯಾಣಕ್ಕಾಗಿ : ಶ್ರೀ ಮಹಾಧನ್ವಂತರಿ ಯಾಗ, ಉಡುಪಿ

ಆರೋಗ್ಯಪೂರ್ಣ ಹಾಗೂ ಸುರಕ್ಷಿತ ಭಾರತದೊಂದಿಗೆ ವಿಶ್ವಕಲ್ಯಾಣಕ್ಕಾಗಿ : ಶ್ರೀ ಮಹಾಧನ್ವಂತರಿ ಯಾಗ, ಉಡುಪಿ

 

ವಿಶ್ವಕಲ್ಯಾಣಕ್ಕಾಗಿ ಯಜ್ಞ-ಯಾಗಾದಿಗಳನ್ನು ಕೈಗೊಳ್ಳುವ ಸನಾತನ ಧರ್ಮದ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಪವಿತ್ರವಾಗಿದೆ. ಯಜ್ಞವು ಸನಾತನ ಸಂಸ್ಕೃತಿಯ ಒಂದು ಪ್ರಮುಖ ಅಂಗವಾಗಿದ್ದು, ಸಮಾಜಕ್ಕೆ ಯಜ್ಞಗಳ ಲಾಭವು ದೊರೆಯಬೇಕೆಂಬ ಸದುದ್ದೇಶದಿಂದ ಹಲವು ಸಂತರ ಅವಿಶ್ರಾಂತ ಪ್ರಯತ್ನ ಮಾಡುತ್ತಿದ್ದಾರೆ. ಅವರ ಅಪಾರ ಪ್ರಯತ್ನಗಳಿಂದಾಗಿಯೇ ಈ ಯಜ್ಞಸಂಸ್ಕೃತಿಯು ಇಂದಿಗೂ ಸಜೀವವಾಗಿದೆ. ಇಂದು ಇಡೀ ವಿಶ್ವವೇ ಮತ್ತೊಂದು ಮಹಾಯುದ್ಧದ ಹೊಸ್ತಿಲಿನಲ್ಲಿ ನಿಂತಿದ್ದು, ಅಣ್ವಸ್ತ್ರ ಯುದ್ಧದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಯುದ್ಧದ ಸಮಯದಲ್ಲಿ ಸೈನಿಕರಷ್ಟೇ ಅಲ್ಲದೆ, ಜನಸಾಮಾನ್ಯರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಮುಂದಿನ ಕಾಲಘಟ್ಟವು ಭೀಕರವಾಗಿದ್ದು, ಅದು ವಿಶ್ವ ಮಹಾಯುದ್ಧ, ನೈಸರ್ಗಿಕ ವಿಕೋಪಗಳು ಹಾಗೂ ಸಾಂಕ್ರಾಮಿಕ ರೋಗಗಳ ಕಾಲವಾಗಿರಲಿದೆ. ಇಂತಹ ಯುದ್ಧೋನ್ಮುಖ ಹಾಗೂ ಆಪತ್ಕಾಲದ ಪರಿಸ್ಥಿತಿಯಲ್ಲಿ ಸಮಾಜದ ಕಲ್ಯಾಣ ಮತ್ತು ರಕ್ಷಣೆಗಾಗಿ ಕೇವಲ ಲೌಕಿಕವಷ್ಟೇ ಅಲ್ಲದೆ, ಆಧ್ಯಾತ್ಮಿಕ ಬೆಂಬಲವೂ ಅತ್ಯಂತ ಅವಶ್ಯಕವಾಗಿದೆ. ಇದೇ ವಿಶಾಲ ಉದ್ದೇಶದಿಂದ, ಮುಂದಿನ ದಿನಗಳಲ್ಲಿ ಆರೋಗ್ಯಪೂರ್ಣ ಹಾಗೂ ಸುರಕ್ಷಿತ ಭಾರತವನ್ನು ರೂಪಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಕ್ಷೇತ್ರ ಉಡುಪಿಯಲ್ಲಿ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ಭವ್ಯವಾಗಿ ಆಯೋಜಿಸಲಾಗಿದೆ.

ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ಮಾಡುವ ಸಾಧನೆಗಿಂತ ಅನೇಕ ವ್ಯಕ್ತಿಗಳು ಅಂದರೆ ಇಡೀ ಸಮಾಜವು ಒಗ್ಗೂಡಿ ಮಾಡುವ ಸಾಮೂಹಿಕ ಸಾಧನೆಯು ಹೆಚ್ಚು ಫಲಪ್ರದ ಹಾಗೂ ದೀರ್ಘಕಾಲಿಕ ಪ್ರಯೋಜನವನ್ನು ನೀಡುತ್ತದೆ. ಈ ತತ್ತ್ವವನ್ನು ಅರಿತು ಸನಾತನ ಸಂಸ್ಥೆಯು ಸಮಷ್ಟಿ ಕಲ್ಯಾಣಕ್ಕಾಗಿ ದೇಶಾದ್ಯಂತ ಇದು ವರೆಗೆ ೧೩೦೦ ಕ್ಕೂ ಹೆಚ್ಚು ಯಜ್ಞ-ಅನುಷ್ಠಾನಗಳನ್ನು ನೆರವೇರಿಸಿದೆ. ಇವುಗಳಲ್ಲಿ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ, ಉಚ್ಛಿಷ್ಟ ಗಣಪತಿ ಯಜ್ಞ, ಚಂಡೀಯಾಗ, ಧನ್ವಂತರಿ ಯಾಗ, ಸಂಜೀವಿನಿ ಹೋಮ ಹಾಗೂ ಪಂಚಮಹಾಭೂತ ಯಾಗದಂತಹ ವಿಶಿಷ್ಟ ಅನುಷ್ಠಾನಗಳು ಸೇರಿವೆ. ಮೇ ೨೦೨೫ ರಲ್ಲಿ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅಖಿಲ ಮಾನವಕುಲದ ಕಲ್ಯಾಣಕ್ಕಾಗಿ ‘ಶ್ರೀ ಮಹಾಧನ್ವಂತರಿ ಯಾಗ’ ಹಾಗೂ ಭಾರತದ ರಕ್ಷಣೆಗಾಗಿ ಶತಚಂಡಿ ಯಜ್ಞವನ್ನು ಆಯೋಜಿಸಲಾಗಿತ್ತು. ಈ ಮಹೋತ್ಸವಕ್ಕೆ ದೇಶ-ವಿದೇಶಗಳ ಸಂತ-ಮಹಂತರೊಂದಿಗೆ ೩೦ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ನಂತರ ೧೭ ಮೇ ೨೦೨೬ ರಂದು ಮುಂಬಾದೇವಿಯ ನಗರಿಯಾದ ಮುಂಬೈನಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ವು ಅತ್ಯಂತ ಭಾವಪೂರ್ಣ ಹಾಗೂ ಚೈತನ್ಯಮಯ ವಾತಾವರಣದಲ್ಲಿ ಸಂಪನ್ನಗೊಂಡಿತು. ಈ ಐತಿಹಾಸಿಕ ಮಹಾಯಜ್ಞಕ್ಕೆ ೫೦೦೦ ಕ್ಕೂ ಹೆಚ್ಚು ಭಕ್ತರು ಪ್ರತ್ಯಕ್ಷವಾಗಿ ಉಪಸ್ಥಿತರಿದ್ದು ದೇವಿಯ ಆಶೀರ್ವಾದ ಹಾಗೂ ಅಮೂಲ್ಯ ಆಧ್ಯಾತ್ಮಿಕ ಲಾಭವನ್ನು ಪಡೆದುಕೊಂಡರು. ಮುಂಬೈನ ಆ ಭವ್ಯ ಯಜ್ಞದ ನಂತರ, ಈಗ ರಾಜ್ಯದ ಉಡುಪಿಯಲ್ಲಿ ನಡೆಯಲಿರುವ ಈ ಯಾಗವು ಎರಡನೆಯ ಅತ್ಯಂತ ಬೃಹತ್ ಹಾಗೂ ಮಹತ್ವಪೂರ್ಣ ಮಹಾಯಜ್ಞವಾಗಿದೆ.

ಮಾನವರ ದುಃಖವನ್ನು ನಿವಾರಿಸಲು ಭಗವಾನ್ ಶ್ರೀವಿಷ್ಣುವು ಭಗವಾನ್ ಧನ್ವಂತರಿಯ ರೂಪದಲ್ಲಿ ಅವತರಿಸಿ ಜಗತ್ತಿನಲ್ಲಿ ಆಯುರ್ವೇದ ಪರಂಪರೆಯನ್ನು ಸ್ಥಾಪಿಸಿದರು. ಭಗವಾನ್ ಧನ್ವಂತರಿಯನ್ನು ಆಯುರ್ವೇದದ ದೇವತೆ ಎಂದು ಪೂಜಿಸಲಾಗುತ್ತದೆ. ಮನುಷ್ಯನಿಗೆ ರೋಗ-ರುಜಿನಗಳ ನಿವಾರಣೆಯಲ್ಲಿ ನೆರವಾಗಲೆಂದು ಅವರು ಆಯುರ್ವೇದ, ಗಿಡಮೂಲಿಕೆಗಳು ಹಾಗೂ ಅವುಗಳ ಜ್ಞಾನವನ್ನು ಧರೆಗಿಳಿಸಿದರು. ಸಮುದ್ರಮಂಥನದ ಸಮಯದಲ್ಲಿ ಅಮೃತಕಲಶವನ್ನು ಹಿಡಿದು ಅವರು ಪ್ರಕಟಗೊಂಡ ಘಟನೆಯನ್ನು ಶ್ರೀಮದ್ಭಾಗವತದ ಎಂಟನೆಯ ಸ್ಕಂಧದ ಎಂಟನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಅದರ ೩೪ ನೇ ಶ್ಲೋಕದಲ್ಲಿ ಹೀಗೆ ಉಲ್ಲೇಖಿಸಲಾಗಿದೆ:

 

‘ಸ ವೈ ಭಗವತಃ ಸಾಕ್ಷಾದ್ವಿಷ್ಣೋರಂಶಾಂಶಸಮ್ಭವಃ | ಧನ್ವಂತರಿರಿತಿ ಖ್ಯಾತ ಆಯುರ್ವೇದದೃಗಿಜ್ಯಭಾಕ್ |’

 

ಇದರಲ್ಲಿ ಭಗವಾನ್ ಧನ್ವಂತರಿಯು ಶ್ರೀವಿಷ್ಣುವಿನ ಅಂಶಾವತಾರ ಹಾಗೂ ಆಯುರ್ವೇದದ ಜ್ಞಾನಸ್ವರೂಪಿ ಎಂದು ವರ್ಣಿಸಲಾಗಿದೆ. ಅವರು ಪ್ರಥಮಬಾರಿ ಸಮುದ್ರಮಂಥನದ ಸಮಯದಲ್ಲಿ ಪ್ರಕಟವಾದರು ಮತ್ತು ಕಲಿಯುಗದಲ್ಲಿ ಕಾಶಿಯ ರಾಜ ದಿವೋದಾಸನ ರೂಪದಲ್ಲಿ ಪ್ರಕಟವಾಗಿ ಅವರು ಆಯುರ್ವೇದದ ಜ್ಞಾನವನ್ನು ನೀಡಿದರು. ಅಧ್ಯಾತ್ಮಶಾಸ್ತ್ರದ ಪ್ರಕಾರ, ಮನುಷ್ಯನಿಗೆ ಬರುವ ರೋಗಗಳು ಅಥವಾ ವ್ಯಾಧಿಗಳು ಆತನ ಪ್ರಸ್ತುತ ಅಥವಾ ಹಿಂದಿನ ಜನ್ಮಗಳ ಕರ್ಮಕ್ಕೆ ಸಂಬಂಧಿಸಿರುತ್ತವೆ. ವ್ಯಷ್ಟಿ ಪ್ರಾರಬ್ಧದಿಂದ ಉಂಟಾಗುವ ರೋಗಗಳ ನಿವಾರಣೆಗಾಗಿ ಮನುಷ್ಯನು ಸಾಧನೆಯನ್ನು ಮಾಡಬೇಕಾಗುತ್ತದೆ. ಅದೇ ರೀತಿ ಸಮಷ್ಟಿ ಪ್ರಾರಬ್ಧದಿಂದ ಬರುವ ವ್ಯಾಧಿಗಳಿಂದ ರಕ್ಷಣೆ ಪಡೆಯಲು ಸಾಮೂಹಿಕ ಸಾಧನೆಯೇ ಏಕೈಕ ಪರಿಣಾಮಕಾರಿ ಉಪಾಯವಾಗಿದೆ.

 

ಭಾರತೀಯ ಸಂಸ್ಕೃತಿಯಲ್ಲಿ ವೈದಿಕ ಕಾಲದಿಂದಲೂ ಯಜ್ಞಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಯಜ್ಞದ ಅಗ್ನಿ ಮತ್ತು ಮಂತ್ರಗಳ ಉಚ್ಛಾರಣೆಯಿಂದ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಶುದ್ಧೀಕರಣಗೊಳ್ಳುತ್ತದೆ. ಯಜ್ಞದಿಂದ ಪರಿಸರ ಹಾಗೂ ಮಾನವಕುಲದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಎಂಬುದು ಈಗ ವೈಜ್ಞಾನಿಕ ಸಂಶೋಧನೆಗಳಿಂದಲೂ ಸಿದ್ದವಾಗಿದೆ. ಈ ಶ್ರೀ ಮಹಾಧನ್ವಂತರಿ ಯಾಗದಲ್ಲಿ  ಭಾವಪೂರ್ಣವಾಗಿ ಪಾಲ್ಗೊಳ್ಳುವುದರಿಂದ ವ್ಯಕ್ತಿಯ ಸುತ್ತಲೂ ಒಂದು ಅಭೇದ್ಯವಾದ ಆಧ್ಯಾತ್ಮಿಕ ರಕ್ಷಾಕವಚ ನಿರ್ಮಾಣವಾಗುತ್ತದೆ ಮತ್ತು ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ. ಈ ಸಮಷ್ಟಿ ಸಾಧನೆಯಿಂದ ಭಗವಾನ್ ಧನ್ವಂತರಿಯ ಆಶೀರ್ವಾದ ಲಭಿಸುತ್ತದೆ, ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಹಾಗೂ ಸಮಷ್ಟಿ ಪ್ರಾರಬ್ಧವನ್ನು ಎದುರಿಸಲು ಸಮಾಜಕ್ಕೆ ಅಪಾರ ಶಕ್ತಿ ಪ್ರಾಪ್ತವಾಗುತ್ತದೆ. ಜೊತೆಗೆ ಇದು ಸಮಾಜದ ಮನಸ್ಸಿನಲ್ಲಿ ಸಂಘಟಿತ ಭಾವನೆಯನ್ನೂ ಜಾಗೃತಗೊಳಿಸುತ್ತದೆ.

 

ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಂಬರುವ ದಿನಗಳಲ್ಲಿ ಭಾರತೀಯ ನಾಗರಿಕರ ಆರೋಗ್ಯ ರಕ್ಷಣೆಗೊಂಡು, ಅವರಿಗೆ ರಾಷ್ಟ್ರರಕ್ಷಣೆ ಮಾಡಲು ಆಧ್ಯಾತ್ಮಿಕ ಬಲ ದೊರೆಯಲಿ ಎಂಬುದೇ ಈ ಮಹಾಯಾಗದ ಮುಖ್ಯ ಉದ್ದೇಶವಾಗಿದೆ. ಭಗವಾನ್ ಧನ್ವಂತರಿಯ ಉಪಾಸನೆಯ ಮೂಲಕ ರೋಗಗಳ ನಿವಾರಣೆಗಾಗಿ ಮತ್ತು ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಲು ಈ ನಿಮಿತ್ತ ಒಂದು ದೊಡ್ಡ ಅವಕಾಶ ಒದಗಿಬಂದಿದೆ. ಸಾಮೂಹಿಕ ಸಾಧನೆಯ ಮಹತ್ವವನ್ನು ಅರಿತು, ಈ ಮಹಾಯಾಗದ ಆಧ್ಯಾತ್ಮಿಕ ಲಾಭವನ್ನು ಪಡೆದುಕೊಳ್ಳಲು ನಾವೆಲ್ಲರೂ ಕುಟುಂಬ ಸಮೇತರಾಗಿ ಉಪಸ್ಥಿತರಿರಬೇಕಾಗಿ ವಿನಮ್ರ ವಿನಂತಿ !

 

 ಸ್ಥಳ : ಎಂ. ಜಿ. ಎಂ. ಮೈದಾನ, ಕುಂಜಿಬೆಟ್ಟು, ಉಡುಪಿ-ಮಣಿಪಾಲ ರಸ್ತೆ, ಉಡುಪಿ

 ದಿನಾಂಕ : 29 ನವೆಂಬರ್ 2026

ಸಮಯ : ಮಧ್ಯಾಹ್ನ 3.೦೦ ರಿಂದ ಸಂಜೆ 7.೦೦ ರ ವರೆಗೆ

ಸಂಪರ್ಕ ಸಂಖ್ಯೆ : 9113080978 / 7058885610

 

 

 ಸಂಕಲನ : ಶ್ರೀ. ವಿನೋದ್ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ

ಸಂಪರ್ಕ: 9342599299