ಜೌಹರ್ ಕುರಿತು ಹೇಳಿಕೆ ಸ್ವರಾ ಭಾಸ್ಕರ್‌ಗೆ ಕಾನೂನು ನೋಟಿಸ್

ಜೌಹರ್ ಕುರಿತು ಹೇಳಿಕೆ ಸ್ವರಾ ಭಾಸ್ಕರ್‌ಗೆ ಕಾನೂನು ನೋಟಿಸ್

      ಮುಂಬೈ: ರಾಣಿ ಪದ್ಮಾವತಿ ಸೇರಿದಂತೆ ಇತರ ಹಿಂದೂ ರಜಪೂತ ಮಹಿಳೆಯರು ಶೀಲರಕ್ಷಣೆಗಾಗಿ ಮಾಡಿದ ‘ಜೌಹರ್’ ಅನ್ನು ಹೇಡಿತನ ಎಂದು ಕರೆದಿರುವ ನಟಿ ಸ್ವರಾ ಭಾಸ್ಕರ್ ಅಹ್ಮದ್ ಅವರಿಗೆ ಹಿಂದೂ ವಿಧಿಜ್ಞ ಪರಿಷತ್ತು ಕಾನೂನು ನೋಟಿಸ್ ಕಳುಹಿಸಿದೆ. ₹25 ಲಕ್ಷ ಪರಿಹಾರ ಹಾಗೂ ಭವಿಷ್ಯದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳ ಕುರಿತು ಅವಮಾನಕಾರಕ ಹೇಳಿಕೆಗಳನ್ನು ನೀಡುವುದಿಲ್ಲ ಎಂಬ ಲಿಖಿತ ಭರವಸೆ ನೀಡಬೇಕು ಎಂದು ನೋಟಿಸ್ ಮೂಲಕ ಆಗ್ರಹಿಸಲಾಗಿದೆ. ಹಿಂದೂ ಧರ್ಮಪ್ರೇಮಿ ಶ್ರೀ. ರಮೇಶ್ ಕಾಡಗಲೆ ಅವರ ಸೂಚನೆಯ ಮೇರೆಗೆ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅನೇಷ್ ಪರಳ್ಕರ್ ಅವರು ಈ ನೋಟಿಸ್ ಕಳುಹಿಸಿದ್ದಾರೆ.

ಆಗಸ್ಟ್ 31ರಂದು ‘ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್’ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಪದ್ಮಾವತಿ’ ಎಂಬ ಹಿಂದಿ ಚಲನಚಿತ್ರದಲ್ಲಿನ ‘ಜೌಹರ್’ ಪ್ರಸಂಗವನ್ನು ವಿವರಿಸುವಾಗ ನಟಿ ಸ್ವರಾ ಭಾಸ್ಕರ್ ಅಹ್ಮದ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುಹಿಸಲಾದ ನೋಟಿಸ್‌ನಲ್ಲಿ, ಸಂವಿಧಾನವು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಅನಿಯಮಿತವಾಗಿಲ್ಲ; ಅದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿದೆ, ಎಂದು ಹೇಳಲಾಗಿದೆ.

ಸ್ವರಾ ಭಾಸ್ಕರ್ ಅಹ್ಮದ್ ಅವರ ಹೇಳಿಕೆಯಿಂದ ಮಹಾರಾಣಿ ಪದ್ಮಾವತಿ ಹಾಗೂ ‘ಜೌಹರ್’ ಮಾಡಿದ ವೀರಾಂಗನೆಯರ ಶೌರ್ಯ, ತ್ಯಾಗ ಮತ್ತು ಆತ್ಮಗೌರವಕ್ಕೆ ಅವಮಾನವಾಗಿದೆ. ಇದರಿಂದ ನನ್ನೊಂದಿಗೆ ವಿಶ್ವದಾದ್ಯಂತ ಇರುವ ಹಿಂದೂಗಳು ಹಾಗೂ ರಜಪೂತ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಸ್ವರಾ ಭಾಸ್ಕರ್ ಅಹ್ಮದ್ ಅವರು ನೀಡಿರುವ ಅವಮಾನಕಾರಕ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಹಿಂದೂ ಸಮಾಜದ, ವಿಶೇಷವಾಗಿ ರಜಪೂತ ಮಹಿಳೆಯರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂಬುದು ನನ್ನ ಬೇಡಿಕೆಯಾಗಿದೆ.

... ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ! – ನ್ಯಾಯವಾದಿ ಅನೇಷ್ ಪರಳ್ಕರ್, ಹಿಂದೂ ವಿಧಿಜ್ಞ ಪರಿಷತ್ತು

ಸ್ವರಾ ಭಾಸ್ಕರ್ ಅಹ್ಮದ್ ಅವರು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವೀಡಿಯೊ, ಸಂದೇಶ, ರೀಲ್ಸ್, ಕ್ಲಿಪ್‌ಗಳು ಮುಂತಾದ ವಿವಿಧ ರೂಪಗಳಲ್ಲಿರುವ ಎಲ್ಲ ಉಲ್ಲೇಖಗಳು ಹಾಗೂ ವಿಷಯಗಳನ್ನು ತಕ್ಷಣವೇ ತೆಗೆದುಹಾಕಬೇಕು. ಭವಿಷ್ಯದಲ್ಲಿ ಹಿಂದೂ ಧರ್ಮ, ಪರಂಪರೆ ಮತ್ತು ಐತಿಹಾಸಿಕ ಮಹಾಪುರುಷರ ಕುರಿತು ಯಾವುದೇ ಅವಮಾನಕಾರಕ ಹೇಳಿಕೆಗಳನ್ನು ನೀಡುವುದಿಲ್ಲ ಎಂಬುದಕ್ಕೆ ಲಿಖಿತ ಭರವಸೆ ನೀಡಬೇಕು.

ನೋಟಿಸ್ ಸ್ವೀಕರಿಸಿದ 7 ದಿನಗಳೊಳಗೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಸ್ವರಾ ಭಾಸ್ಕರ್ ಅಹ್ಮದ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಹಾಗೂ ಸಿವಿಲ್ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾಯವಾದಿ ಅನೇಷ್ ಪರಳ್ಕರ್ ಅವರು ಎಚ್ಚರಿಕೆ ನೀಡಿದ್ದಾರೆ.