ಕಾವ್ಯಗಳಿಂದ ಉತ್ತಮ ಸಮಾಜ ಕಟ್ಟೋಣ: ಸಂಧ್ಯಾ ಸುರೇಶ್.

ಕಾವ್ಯಗಳಿಂದ ಉತ್ತಮ ಸಮಾಜ ಕಟ್ಟೋಣ: ಸಂಧ್ಯಾ ಸುರೇಶ್.
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ

ಕಾವ್ಯದ ಸೂಕ್ಷ್ಮತೆ, ಸಂವೇದನೆ ಹಾಗೂ ಅದರಲ್ಲಿರುವ ಸಾಮಾಜಿಕ ಸಂದೇಶಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಕವಯತ್ರಿಯರು ಕವಿತೆ ರಚಿಸುವ ಸಂದರ್ಭದಲ್ಲಿ ಸಮಾಜದ ನೋವು–ನಲಿವು, ದುಃಖ–ದುಮ್ಮಾನ ಹಾಗೂ ಜನಜೀವನದ ತಲ್ಲಣಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಸಂಧ್ಯಾ ಸುರೇಶ್ ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಹಿರಿಯರ ಕವಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾವ್ಯವೆಂದರೆ ಹೆಣ್ಣಿನ ಸಂವೇದನೆ, ನೋವು, ನಗು, ಹೋರಾಟ ಹಾಗೂ ಪ್ರೀತಿಯನ್ನು ಪದಗಳಾಗಿ ಹೆಣೆಯುವ ಸೃಜನಶೀಲ ಶಕ್ತಿ. ಈ ಶಕ್ತಿ ಮುಂದಿನ ತಲೆಮಾರಿನ ಮಹಿಳೆಯರಲ್ಲೂ ನಾವೂ ಬರೆಯಬಹುದು ಎಂಬ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು. ಈ ಸಮ್ಮೇಳನ ಇತಿಹಾಸ ಸೃಷ್ಟಿಸುವ ಕ್ಷಣ. ಇಂದು ಈ ವೇದಿಕೆಯಲ್ಲಿ ಕೇಳಿಬರುವ ಪ್ರತಿಯೊಂದು ಕಾವ್ಯದ ಸಾಲು ನಾಳೆ ಯಾರದೋ ಬದುಕಿಗೆ ಧೈರ್ಯವಾಗಲಿ, ದಾರಿದೀಪವಾಗಲಿ. ಪದಗಳಿಂದ ಸಮಾಜ ಕಟ್ಟೋಣ, ಭಾವಗಳಿಂದ ಬಂಧ ಬೆಸೆಯೋಣ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಮಹಿಳಾ ಪ್ರತಿಭೆಗಳ ಅನಾವರಣಕ್ಕೆ ಮಹಿಳಾ ಸಮ್ಮೇಳನ ಸೂಕ್ತ ವೇದಿಕೆ.....

--ಜಯಮ್ಮ ನೀಲಗುಂದ

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಯಮ್ಮ ನೀಲಗುಂದ ಮಾತನಾಡಿ, ದಾವಣಗೆರೆ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವುದು ಹೆಮ್ಮೆಯ ಸಂಗತಿ. ಇದರ ಮೂಲಕ ಜಿಲ್ಲೆಯ ಮಹಿಳಾ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಹೇಳಿದರು. ಪ್ರಕೃತಿಯ ಸಮೃದ್ಧಿಯೇ ಹೆಣ್ಣು. ಅವಳ ಆರಾಧನೆಯೇ ಪ್ರಕೃತಿಯ ಆರಾಧನೆ. ಆಕೆಯ ಸಾಹಿತ್ಯದ ಆರಾಧನೆಯೇ ಸಂಸ್ಕೃತಿಯ ಆರಾಧನೆ ಎಂದು ಅವರು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಸಮ್ಮೇಳನದ ಸರ್ವಾಧ್ಯಕ್ಷೆ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ್ ಶೇಟ್, ಓಂಕಾರಮ್ಮ ರುದ್ರಮುನಿಸ್ವಾಮಿ, ಶೈಲಜಾ ಟಿ.ಎಸ್. ಹಾಗೂ ಮಲ್ಲಮ್ಮ ನಾಗರಾಜ್ ಉಪಸ್ಥಿತರಿದ್ದರು.

ಕವಿ ಗೋಷ್ಠಿಯಲ್ಲಿ ಮಂಜುಳಾ ಪ್ರಸಾದ್, ಜಿ.ಎಸ್.ಗಾಯತ್ರಿ, ನೂರ್ ಜಹಾನ್ ಬೇಗಂ, ಇಂದಿರಾ ಸಿದ್ದೇಶ್, ಆರ್.ಎಲ್. ರಾಜೇಶ್ವರಿ, ಸುನಿತಾ ಪ್ರಕಾಶ್, ಗೀತಾ ಕೊಂಡಜ್ಜಿ, ಡಿ.ಎ. ಪಾರ್ವತಿದೇವಿ ಕಾಳಾಚಾರ್, ಸುಶೀಲಾ ಬಸವರಾಜ್ ಹಿರೇಮಠ, ಕೆ.ಎಂ. ಅಕ್ಕಮಹಾದೇವಿ, ಎ.ಬಿ. ರುದ್ರಮ್ಮ ಸೇರಿದಂತೆ ಸುಮಾರು 25 ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರರಾದರು.

ಕವಿ ಗೋಷ್ಠಿಯ ನಿರೂಪಣೆಯನ್ನು ಮಮತಾ ನಾಗರಾಜ್, ಸ್ವಾಗತವನ್ನು ಪದ್ಮಜಾ ರಾವ್, ವಂದನಾರ್ಪಣೆಯನ್ನು ವೀಣಾ ಕಾಯಿ ಹಾಗೂ ನಿರ್ವಹಣೆಯನ್ನು ಸಾವಿತ್ರಿ ನೆರವೇರಿಸಿದರು.

ಕೆ. ರಾಘವೇಂದ್ರ ನಾಯರಿ

ಗೌರವ ಕೋಶಾಧ್ಯಕ್ಷರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ

ಮೊ.: 9844314543