ಕೆಜಿಎಫ್ ಉರಿಗಾಂ ರೈಲ್ವೆ ಮೇಲ್ಸೇತುವೆ ಕಾಮಗಾರಿ: ಮನೆಗಳ ತೆರವು ಕಾರ್ಯ ಯಶಸ್ವಿ
ಕೆಜಿಎಫ್: ಸುಮಾರು ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಉರಿಗಾಂ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಇದೀಗ ಚಾಲನೆ ದೊರೆತಿದ್ದು, ಕಾಮಗಾರಿಗೆ ಅಡ್ಡಿಯಾಗಿದ್ದ ಮನೆಗಳ ತೆರವು ಕಾರ್ಯವನ್ನು ತಾಲೂಕು ಆಡಳಿತ, ಬಿಜಿಎಂಎಲ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಯಶಸ್ವಿಯಾಗಿ ಕೈಗೊಳ್ಳಲಾಯಿತು.
ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಕಾಮಗಾರಿಗೆ ಹಸಿರು ನಿಶಾನೆ ದೊರೆತ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿದ್ದು, ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಸುಮಾರು 20 ಮನೆಗಳ ತೆರವು ಕಾರ್ಯವನ್ನು ಮಂಗಳವಾರ ಬೆಳಗಿನ ಜಾವ 5 ಗಂಟೆಯಿಂದ ಅಧಿಕಾರಿಗಳು ಕೈಗೊಂಡರು.
ಬಿಜಿಎಂಎಲ್ ವತಿಯಿಂದ ಸಂಬಂಧಪಟ್ಟ ಮನೆಗಳ ನಿವಾಸಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ತೆರವುಗೊಳಿಸಲು ಕಾಲಾವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಕಟ್ಟಡಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ತೆರವು ಕಾರ್ಯಾಚರಣೆ ವೇಳೆ ಕೆಲ ಕುಟುಂಬಸ್ಥರು ಮನೆಗಳನ್ನು ಉಳಿಸಿಕೊಳ್ಳುವಂತೆ ಉಪವಿಭಾಗಾಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಭಾವುಕರಾದ ದೃಶ್ಯ ಕಂಡುಬಂದಿತು. ಈ ವೇಳೆ ಅಧಿಕಾರಿಗಳು, “ಈಗಾಗಲೇ ನೋಟಿಸ್ ನೀಡಿ ಅಗತ್ಯ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಕಟ್ಟಡಗಳನ್ನು ತೆರವುಗೊಳಿಸದಿರುವುದು ಎಷ್ಟರಮಟ್ಟಿಗೆ ಸರಿ?” ಎಂದು ಪ್ರಶ್ನಿಸಿ, ಕಾನೂನು ಪ್ರಕ್ರಿಯೆಯಂತೆ ಕಾರ್ಯಾಚರಣೆ ನಡೆಸಿದರು.
ತೆರವು ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು, ಬಿಜಿಎಂಎಲ್ ಸಿಬ್ಬಂದಿ, ನಗರಸಭೆ ಹಾಗೂ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಉರಿಗಾಂ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಇದೀಗ ಅಡ್ಡಿಯಾಗಿದ್ದ ಕಟ್ಟಡಗಳ ತೆರವು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ವೇಗ ಪಡೆದುಕೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿ. ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಹಾಗೂ ತಹಶೀಲ್ದಾರ್. ಗಾಯತ್ರಿ. ಲೋಕ ಉಪಯೋಗ ಇಲಾಖೆ. ಅಧಿಕಾರಿ ರಾಜಶೇಖರನ್. ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು