ದಸರಾ ಹಬ್ಬವು ಒಳಿತಿನ ವಿಜಯದ ಸಂದೇಶ ಸಾರುತ್ತದೆ: ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ
ತಾಲ್ಲೂಕು ಆಡಳಿತ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಸಿಬ್ಬಂದಿಗೆ ಸಿಹಿ, ಉಡುಪು ವಿತರಣೆ
ಭಾಗ್ಯನಗರ: ದಸರಾ ಹಾಗೂ ವಿಜಯದಶಮಿ ಹಬ್ಬವು ಸತ್ಯ ಮತ್ತು ಧರ್ಮದ ವಿಜಯವನ್ನು ಸಾರುವ ಪವಿತ್ರ ಹಬ್ಬವಾಗಿದ್ದು, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷ ನೆಲೆಸಲಿ ಎಂದು ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ ಅವರು ಶುಭ ಹಾರೈಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ದಸರಾ ಪೂಜೆ ನೆರವೇರಿಸಿ, ಸಿಬ್ಬಂದಿಗೆ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು, ಹಬ್ಬಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದವನ್ನು ವೃದ್ಧಿಸುತ್ತವೆ. ಇಂತಹ ಹಬ್ಬಗಳು ಎಲ್ಲರನ್ನೂ ಒಗ್ಗೂಡಿಸಿ, ಸಂತೋಷವನ್ನು ಹಂಚಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪರಸ್ಪರ ಸಹಕಾರ ಮತ್ತು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವುದು ಮುಖ್ಯ. ಹಬ್ಬಗಳ ಸಂದರ್ಭದಲ್ಲಿ ಒಟ್ಟಾಗಿ ಸಂಭ್ರಮಿಸುವುದರಿಂದ ಸಹೋದ್ಯೋಗಿಗಳ ನಡುವೆ ಆತ್ಮೀಯತೆ ಮತ್ತು ಬಾಂಧವ್ಯ ಹೆಚ್ಚುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಅವರು ಕಚೇರಿಯ ಎಲ್ಲಾ ಸಿಬ್ಬಂದಿಗೆ ಸಿಹಿ ಹಾಗೂ ಉಡುಪುಗಳನ್ನು ವಿತರಿಸಿ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಮೋಹನ್ ಬಾಬು, ಶಿರಸ್ತೇದಾರ್ ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ನರೇಂದ್ರ, ರಾಜಸ್ವ ನಿರೀಕ್ಷಕಿ ಸುನೀತಾ, ಗೂಳೂರು ರಾಜಸ್ವ ನಿರೀಕ್ಷಕ ಅನಿಲ್, ಗ್ರಾಮ ಆಡಳಿತಾಧಿಕಾರಿಗಳಾದ ಜಯರಾಮ್, ನವೀನ್, ರೋಷನಿ, ಜೋಗಿ, ಶಿವಪ್ರಕಾಶ್, ಮಾರುತಿ, ಮಂಜುನಾಥ್ ಹಾಗೂ ಚಾಲಕರಾದ ಶ್ರೀನಿವಾಸ್, ಶ್ರೀನಾಥ್, ನಾಗೇಶ್ ಸೇರಿದಂತೆ ತಾಲ್ಲೂಕು ಆಡಳಿತ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.