ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಅಡ್ವಕೇಟ್ ಬರೀದ್
ಆರು ಪ್ರಮುಖ ಭರವಸೆಗಳೊಂದಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ
ಭಾಗ್ಯನಗರ: ಪದವೀಧರರ ಹಕ್ಕುಗಳ ರಕ್ಷಣೆ, ನಿರುದ್ಯೋಗಿ ಯುವಕರ ಭವಿಷ್ಯ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವಕೇಟ್ ಬರೀದ್ ತಿಳಿಸಿದರು.
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಖಾಸಗಿ ಕೋಮಲ್ ಗಾರ್ಡನ್ ಹೋಟೆಲ್ನಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ತಮ್ಮ ಪ್ರಣಾಳಿಕೆಯಲ್ಲಿ ಆರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿರುವ ಅವರು, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪದವೀಧರರ ಕುಂದುಕೊರತೆ ಪರಿಹಾರ ವೇದಿಕೆ ಸ್ಥಾಪನೆ, ಪದವೀಧರರ ದೂರು ಮತ್ತು ಬೇಡಿಕೆಗಳಿಗಾಗಿ ಡಿಜಿಟಲ್ ಪೋರ್ಟಲ್ ಆರಂಭ ಹಾಗೂ ಸಾರ್ವಜನಿಕ ಮತ್ತು ನ್ಯಾಯಾಲಯದ ಗ್ರಂಥಾಲಯಗಳ ಆಧುನೀಕರಣಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕನಿಷ್ಠ ವೇತನ, ಪಿಎಫ್ ಹಾಗೂ ಇಎಸ್ಐ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು. ನ್ಯಾಯಾಲಯಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಲು ಪ್ರಯತ್ನಿಸುವುದರ ಜೊತೆಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ಗಳಿಗೆ ಗುಣಮಟ್ಟದ ಕನ್ನಡ ಪಠ್ಯಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದ ಅವರು ನನಗೆ ಒಮ್ಮೆ ಅವಕಾಶ ನೀಡಿ” ಎಂಬ ಘೋಷಣೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿರುವ ಅವರು, ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ವಿಧಾನ ಪರಿಷತ್ತಿನಲ್ಲಿ ಅವರ ಪರವಾಗಿ ಧ್ವನಿ ಎತ್ತುವುದು ತಮ್ಮ ಬದ್ಧತೆಯಾಗಿದೆ. ಅಧಿಕಾರಕ್ಕಿಂತ ಸೇವೆಗೆ ಆದ್ಯತೆ ನೀಡುತ್ತೇನೆ. ಹಣದ ಪ್ರಭಾವಕ್ಕಿಂತ ಪ್ರಾಮಾಣಿಕತೆ ಮತ್ತು ಮೌಲ್ಯಗಳಿಗೆ ಮನ್ನಣೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್. ಮಾರ್ಕೆಟ್ ಮಂಡಿ ಮಾಲೀಕರಾದ ಸಾಫ್ರಾನ್, ವಸೀಮ್, ಇನಾಯಿತ್ ಭಾಷ, ಆದಿ, ಹರಿ, ರಾಮಾಂಜಿ, ನರಸಿಂಹ, ನಾಗೇಶ್, ವೆಂಕಟೇಶ್ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.