ದೇಶದ ಪ್ರಮುಖ ನಾಯಕರುಗಳೆಲ್ಲಾ ಸರಕಾರಿ ಶಾಲೆಗಳ ಕೊಡುಗೆ : ರಾಜ್ಯ ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ

ದೇಶದ ಪ್ರಮುಖ ನಾಯಕರುಗಳೆಲ್ಲಾ ಸರಕಾರಿ ಶಾಲೆಗಳ ಕೊಡುಗೆ : ರಾಜ್ಯ ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಹಾಸನ : ದೇಶದ ಭವಿಷ್ಯ ಅಡಗಿರುವುದೇ ಸರಕಾರಿ ಶಾಲೆಗಳಲ್ಲಿ. ಏಕೆಂದರೆ ಭಾರತ ದೇಶದ ಪ್ರಮುಖ ನಾಯಕರುಗಳೆಲ್ಲಾ ಸರಕಾರಿ ಶಾಲೆಗಳ ಕೊಡುಗೆ. ಸರಕಾರಿ ಶಾಲೆಗಳು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ ಅಭಿಪ್ರಾಯಪಟ್ಟರು.

ಅವರು ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಡುವಳ್ಳಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಶೂಟ್ ಟ್ರ್ಯಾಕ್ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿ ಸರಕಾರಿ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ತಳಸಮುದಾಯ ಹಾಗೂ ಮಧ್ಯಮ ವರ್ಗದ ಬಹುತೇಕ ಮಕ್ಕಳು ಸರಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಈ ಮಕ್ಕಳ ಬೆಳವಣಿಗೆ ಅತ್ಯಗತ್ಯ. ಸರಕಾರಿ ಸೌಲಭ್ಯಗಳ ಜೊತೆಗೆ ಖಾಸಗಿಯಾಗಿ ಸಂಘಸಂಸ್ಥೆಗಳು, ಶಿಕ್ಷಣಾಸಕ್ತರು, ದಾನಿಗಳು ಆಯಾಯ ಊರಿನ ಸರಕಾರಿ ಶಾಲೆಗಳ ಬಗ್ಗೆ ಗಮನಹರಿಸಿದರೂ ಸಾಕು ಮಕ್ಕಳ ಔನತ್ಯಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಸಮಾಜದಿಂದಲೇ ಬೆಳೆದು ತಕ್ಕಮಟ್ಟಿನ ಜೀವನ ನಡೆಸುವ ನಾವುಗಳು ಸಮಾಜಕ್ಕಾಗಿ ಏನನ್ನಾದರೂ ಕೈಲಾದಷ್ಟು ಸಹಾಯ ಮಾಡುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆಲೋಚಿಸಬೇಕು. ಸರಕಾರಿ ಶಾಲೆಯ ಮಕ್ಕಳು ಯಾವುದೇ ಕಾನ್ವೆಂಟಿನ ಮಕ್ಕಳಿಗೂ ಕಡಿಮೆಯಿಲ್ಲ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಶಾರೀರಿಕವಾಗಿ, ನೈತಿಕವಾಗಿ ಈ ಮಕ್ಕಳು ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ನಮ್ಮ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ವೈಯಕ್ತಿಕವಾಗಿ ಸರಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ಹಾಗೂ ಅರೆಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಯತೀಶ್ ಹಾಗೂ ಪರಮೇಶ್, ಶಾಲಾ ಮುಖ್ಯ ಶಿಕ್ಷಕ ಶಂಕರಾಚಾರ್ಯ, ಹಿರಿಯ ಶಿಕ್ಷಕಿ, ಸರೋಜ ಹಾಗೂ ಸಹ ಶಿಕ್ಷಕಿ ಜೆ.ಸಿ. ಚಂದ್ರಕಲಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.