ಅಂಬೇಡ್ಕರ್ ಯುವ ವೇದಿಕೆ ಒಂದು ವರ್ಷದ ಹೋರಾಟಕ್ಕೆ ಫಲಶ್ರುತಿ: ನಿವೇಶನ ರಹಿತರಿಗೆ 5 ಎಕರೆ ಜಮೀನು ಮಂಜೂರು
ಬೇತಮಂಗಲ: ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಸಂದ್ರ ಮಿಟ್ಟೂರು ಗ್ರಾಮದ ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಜಮೀನು ಮಂಜೂರು ಮಾಡಿಸಬೇಕೆಂದು ಡಾ. ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯು ಸತತ ಒಂದು ವರ್ಷದಿಂದ ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ. ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಸರ್ವೆ ನಂ. 151ರಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಲು ಕರ್ನಾಟಕ ಸರ್ಕಾರದ ವತಿಯಿಂದ ಕೋಲಾರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ತಿಳಿಸಿದರು.
ಐಸಂದ್ರ ಮಿಟ್ಟೂರು ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಕಡುಬಡವರು ಹಾಗೂ ದಲಿತ ಕುಟುಂಬಗಳು ವಾಸಿಸಲು ಸೂಕ್ತ ಮನೆಗಳಿಲ್ಲದೆ ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಂತ ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕೆಂಬ ಉದ್ದೇಶದಿಂದ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದು ಸಂಘಟನೆಯ ಹೋರಾಟದ ಫಲವಾಗಿ ಇದೀಗ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಐದು ಎಕರೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆಗೆ ಮಹತ್ವದ ಮುನ್ನಡೆ ದೊರೆತಿದೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಕರ್ನಾಟಕ ಸರ್ಕಾರ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಶೀಘ್ರ ಹಕ್ಕುಪತ್ರ ವಿತರಿಸಲು ಶಾಸಕರಿಗೆ ಮನವಿ:
ಐಸಂದ್ರ ಮಿಟ್ಟೂರು ಗ್ರಾಮದ ನಿವೇಶನ ರಹಿತರಿಗೆ ಸರ್ವೆ ನಂ. 151ರಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನೆಲೆಯಲ್ಲಿ, ಕೆಜಿಎಫ್ ಶಾಸಕಿ ರೂಪಕಲಾ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಹ ಬಡ ಕುಟುಂಬಗಳಿಗೆ ಆದಷ್ಟು ಬೇಗ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜೈಭೀಮ್ ಶ್ರೀನಿವಾಸ್ ಒತ್ತಾಯಿಸಿದರು.
ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಕೃತಜ್ಞತೆ:
ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ನಡೆಸಿದ ಹೋರಾಟದ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅಗತ್ಯ ಸಹಕಾರ ನೀಡಿದ್ದಾರೆ. ಕೆಜಿಎಫ್ ಪೊಲೀಸ್ ಇಲಾಖೆಯೂ ಸೂಕ್ತ ರಕ್ಷಣೆ ಮತ್ತು ಸಹಕಾರ ನೀಡಿದೆ. ಹೀಗಾಗಿ ಹೋರಾಟಕ್ಕೆ ಸಹಕರಿಸಿದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮತ್ತು ಸಂಘಟನೆಯ ಪರವಾಗಿ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸುವುದಾಗಿ ಜೈಭೀಮ್ ಶ್ರೀನಿವಾಸ್ ತಿಳಿಸಿದರು.
ಬಡ ಕುಟುಂಬಗಳಿಗೆ ನೆಲೆ ಕಲ್ಪಿಸುವ ಹೋರಾಟಕ್ಕೆ ಗ್ರಾಮಸ್ಥರ ಮೆಚ್ಚುಗೆ:
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಐಸಂದ್ರ ಮಿಟ್ಟೂರು ಗ್ರಾಮದಲ್ಲಿ ಅನೇಕ ಬಡ ಕುಟುಂಬಗಳು ಸ್ವಂತ ಮನೆ ನಿರ್ಮಿಸಿಕೊಳ್ಳಲು ಸೂಕ್ತ ನಿವೇಶನವಿಲ್ಲದೆ ತೊಂದರೆ ಅನುಭವಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಅವರು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನಿವೇಶನ ಕಲ್ಪಿಸುವಂತೆ ಒಂದು ವರ್ಷದಿಂದ ನಿರಂತರ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.
ಇದೀಗ ಕರ್ನಾಟಕ ಸರ್ಕಾರದ ವತಿಯಿಂದ ಕೋಲಾರ ಜಿಲ್ಲಾಧಿಕಾರಿಗಳು ಐದು ಎಕರೆ ಜಮೀನು ಮಂಜೂರು ಮಾಡಲು ಆದೇಶಿಸಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಬಡ ಕುಟುಂಬಗಳ ಸಮಸ್ಯೆಗೆ ಸ್ಪಂದಿಸಿ ಹೋರಾಟ ನಡೆಸಿದ ಜೈಭೀಮ್ ಶ್ರೀನಿವಾಸ್ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎವೈವಿಕೆ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ, ಹೋಬಳಿ ಅಧ್ಯಕ್ಷ ಸಂಜು, ಮತ್ತು ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.