ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ||ನಾಗಲಕ್ಷ್ಮೀ ಭೇಟಿ
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುವೆ
ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ||ನಾಗಲಕ್ಷ್ಮೀ ಭೇಟಿ:
ವೈದ್ಯರನ್ನು ದೇವರೆಂದ ರೋಗಿಗಳು.
ಮುದ್ದೇಬಿಹಾಳ: ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿವರ್ಗದವರಿಗೆ ವಸತಿ ವ್ಯವಸ್ಥೆ ಸೇರಿದಂತೆ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ|ನಾಗಲಕ್ಷ್ಮೀ ಚೌಧರಿ ಭರವಸೆ ನೀಡಿದರು.
ಇಲ್ಲಿನ ತಾಲೂಕು ಸರ್ಕಾರಿ ಸಾವರ್ಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯ, ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ಚಟುವಟಿಕೆ ಮುಂತಾದವುಗಳನ್ನು ಪರಿಶೀಲನೆ ನಡೆಸಿದ ನಂತರ ಆರೋಗ್ಯ ಇಲಾಖೆ ನೌಕರರು ಸಲ್ಲಿಸಿದ ಮನವಿಗೆ ಸ್ಪಂಧಿಸಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ ಜನ ಕುಳಿತುಕೊಳ್ಳಲು ಆಸನಗಳ, ಸಾರ್ವಜನಿಕರ ವಾಹನ ಹಾಗೂ ಅಂಬ್ಯುಲೆನ್ಸ್ ನಿಲುಗಡೆಗೆ ಸೂಕ್ತ ಜಾಗದ ಕೊರತೆ, ಆಸ್ಪತ್ರೆ ಆವರಣದಲ್ಲಿ ಹೈಮಾಸ್ಟ್ ಲೈಟ್, ಕಂಪೌಂಡ್ ಗೋಡೆ ನಿರ್ಮಾಣ, ಶವಾಗಾರ ಸ್ಥಳಾಂತರ, ಸಿಬ್ಬಂದಿ ಕೊರತೆ ಬಗೆಹರಿಸುವುದು ಸೇರಿ ಹಲವು ಬೇಡಿಕೆಗಳನ್ನು ಅಧ್ಯಕ್ಷರ ಮುಂದಿಟ್ಟಿದ್ದಾರೆ. ಇವೆಲ್ಲವುಗಳನ್ನು ಸರ್ಕಾರದ ಗಮನಕ್ಕೆ ತರುತ್ತೆನೆ. ಇದಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸುವ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಕರೆಸಿ ಅವರ ಗಮನಕ್ಕೂ ತರುತ್ತೇನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರೊಂದಿಗೂ ಮಾತನಾಡುತ್ತೇನೆ ಎಂದರು.
ಈ ಸಂದರ್ಭ ಪಟ್ಟಣದ ಮಹಾಂತೇಶನಗರದ ಬಡಾವಣೆಯಿಂದ ಆಗಮಿಸಿದ್ದ ಕೆಲ ಮಹಿಳೆಯರು ತಮ್ಮ ಬಡಾವಣೆಯಲ್ಲಿ ಸ್ವಚ್ಛತೆಯ ಕೊರತೆ ಸೇರಿ ಹಲವು ಸಮಸ್ಯೆಗಳಿದ್ದು ಪುರಸಭೆಯವರು ನಿರ್ಲಕ್ಷ್ಯ ತೋರುತ್ತಿರುವುದನ್ನು ಗಮನಕ್ಕೆ ತಂದರು. ಕೂಡಲೇ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರನ್ನು ಮೋಬೈಲ್ ಫೋನ್ ಮೂಲಕ ಸಂಪರ್ಕಿಸಿ, ಬಡಾವಣೆಯ ಜನರ ಆರೋಪಗಳನ್ನು ಅವರ ಗಮನಕ್ಕೆ ತಂದು ಕೂಡಲೇ ಬಡಾವಣೆಗೆ ಭೇಟಿ ಕೊಟ್ಟು ಸಮಸ್ಯೆಗಳ ಪರಿಹಾರಕ್ಕೆ ಕೈಕೊಂಡ ಕ್ರಮಗಳ ಕುರಿತಾದ ಜಿಪಿಎಸ್ ಫೋಟೊಗಳನ್ನು ತಮಗೆ ಕಳಿಸುವಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಕೈಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.
ಇದಕ್ಕೂ ಮುನ್ನ ಆಸ್ಪತ್ರೆಯ ಎಲ್ಲ ವಾರ್ಡ, ಶಸ್ತ್ರಚಿಕಿತ್ಸೆ ಮತ್ತು ಹೆರಿಗೆ ಕೊಠಡಿ ಮುಂತಾದೆಡೆ ತೆರಳಿ ಪರಿಶೀಲಿಸಿದ ಡಾ|ನಾಗಲಕ್ಷ್ಮೀ ಅವರು ಅಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಒಳರೋಗಿಗಳನ್ನು ಮಾತನಾಡಿಸಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆಯ ಗುಣಮಟ್ಟ, ಸರ್ಕಾರದ ಸೌಲಭ್ಯ ಮುಂತಾದವುಗಳ ಮಾಹಿತಿ ಪಡೆದುಕೊಂಡರು. ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ|ಸತೀಶ ತಿವಾರಿ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ರಂಗನಾಥ ವೈದ್ಯ, ಸಿಡಿಪಿಓ ಶಿವಮೂರ್ತಿ ಕುಂಬಾರ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.
ವೈದ್ಯರನ್ನು ದೇವರೆಂದ ರೋಗಿಗಳು:
ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯರು ಮತ್ತು ಅವರ ಪಾಲಕರನ್ನು ಭೇಟಿಮಾಡಿದ ಡಾ|ನಾಗಲಕ್ಷ್ಮಿ ಅವರು ವೈದ್ಯರ ಸಹಕಾರ ಮತ್ತು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯದ ಕುರಿತು ವಿಚಾರಿಸಿದರು. ಆಗ ಮಹಿಳೆಯೊಬ್ಬರು ಇಲ್ಲಿನ ವೈದ್ಯರು ಅದರಲ್ಲೂ ಹೆರಿಗೆ ತಜ್ಞರಾಗಿರುವ ಡಾ|ರಂಗನಾಥ ವೈದ್ಯ ಅವರು ನಮ್ಮ ಪಾಲಿಗೆ ದೇವರಾಗಿದ್ದಾರೆ ಎಂದು ಸಂತಸ ಹೊರಹಾಕಿದರು. ಇದರಿಂದ ಖುಷಿಯಾದ ಡಾ|ನಾಗಲಕ್ಷ್ಮೀ ಅವರು ತಮ್ಮ ಜೊತೆಗಿದ್ದ ಡಾ|ರಂಗನಾಥ ಅವರತ್ತ ತಿರುಗಿ ನೋಡಿ ರೋಗಿಗಳು ನಿಮ್ಮನ್ನು ದೇವರು ಎನ್ನುತ್ತಾರೆ ಎಂದು ಹೇಳಿ ನಂತರ ಮಾತನಾಡುತ್ತ ವೈದ್ಯರು ದೇವರಿಗೆ ಸಮ ಎನ್ನುವುದು ಇದೇ ಕಾರಣಕ್ಕೆ ಎಂದರು. ಆಗ ಡಾ|ವೈದ್ಯ ಅವರ ಕಣ್ಣಲ್ಲಿ ನೀರು ಜಿನುಗಿದ್ದನ್ನು ಗಮನಿಸಿದ ಡಾ|ನಾಗಲಕ್ಷ್ಮೀ ಅವರು ನೋಡಿ ನಿಮ್ಮ ವೈದ್ಯ ದೇವರ ಕಣ್ಣಲ್ಲಿ ನೀರು ಬರುತ್ತಿದೆ ಎಂದರು. ಡಾ|ವೈದ್ಯ ಅವರು ತಮ್ಮ ಕರವಸ್ತ್ರದಿಂದ ಕಣ್ಣಿರನ್ನು ಒರೆಸಿಕೊಳ್ಳುತ್ತ ಡಾ|ನಾಗಲಕ್ಷ್ಮೀ ಅವರೊಂದಿಗೆ ಹೆಜ್ಜೆ ಹಾಕಿದರು. ಈ ಘಟನೆ ಅಲ್ಲಿದ್ದ ಎಲ್ಲರ ಮನಕಲಕುವಂತಾಯಿತು. ಇದಲ್ಲದೆ ಡಾ|ನಾಗಲಕ್ಷ್ಮೀ ಅವರು ಹೆಣ್ಣುಮಗುವೊಂದನ್ನು ಎತ್ತಿಕೊಂಡು ಮುದ್ದಾಡಿ, ಆ ಮಗುವಿನ ತಾಯಿಯನ್ನು ಆಲಂಗಿಸಿಕೊಂಡು ಹರ್ಷಿಸಿದ್ದು ಎಲ್ಲರಲ್ಲೂ ಸಂತೋಷದ ಛಾಯೆ ಮೂಡಿಸಿದಂತಾಯಿತು.
ಕೋಟ್:
ಒಂದೂವರೆ ವರ್ಷದ ಹಿಂದೆ ಇದೇ (ಮುದ್ದೇಬಿಹಾಳ) ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಗ ಇಲ್ಲಿ ತಿಂಗಳಿಗೆ 80-100 ಹೆರಿಗೆ ಆಗುತ್ತಿದ್ದವು. ಈಗ 120-130ಕ್ಕೆ ಹೆಚ್ಚಾಗಿದೆ. ಇದನ್ನು ಕೇಳಿ ಸಂತೋಷವಾಯಿತು. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ, ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ.
-ಡಾ|ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ.