ಪಿತ್ರಾರ್ಜಿತ ಆಸ್ತಿ ಕಬಳಿಕೆ ಆರೋಪ: ಗಂಡ–ಮಗುವಿನೊಂದಿಗೆ ಬೀದಿಗೆ ಬಿದ್ದ ಕುಟುಂಬ ನ್ಯಾಯಕ್ಕಾಗಿ ಮೊರೆ
ಬೇತಮಂಗಲ: ಪಿತ್ರಾರ್ಜಿತ ಆಸ್ತಿಯನ್ನು ಅನ್ಯಾಯವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ಸಂಬಂಧಿಕರೇ ಕುಟುಂಬವನ್ನು ಮನೆಯಿಂದ ಹೊರಹಾಕಲು ಯತ್ನಿಸುತ್ತಿದ್ದಾರೆ ಎಂದು
ಶ್ರೀನಿವಾಸ ಸಂದ್ರ ಗ್ರಾಪಂ ವ್ಯಾಪ್ತಿಯ ಬೆನ್ನಾವರ ಗ್ರಾಮದ ಶೇಲ್ ಪೆಟ್ರೋಲ್ ಬಂಕ್ ಮಾಲೀಕ ಶಿವಶಂಕರ್ ಪ್ರಸಾದ್ ಹಾಗೂ ಬೆಸ್ಕಾಂ ಉದ್ಯೋಗಿ ವಾಣಿ ವಿರುದ್ಧ ಸಂತ್ರಸ್ತೆ ಸುಮಾ ಆರೋಪ ಮಾಡಿದ್ದಾರೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಾವನ ಹೆಸರಿನಲ್ಲಿ ಸುಮಾರು 16 ಎಕರೆ ಪಿತ್ರಾರ್ಜಿತ ಜಮೀನು ಇತ್ತು. ಆರಂಭದಲ್ಲಿ ಅಡಮಾನದಲ್ಲಿದ್ದ ಸುಮಾರು 3.5 ಎಕರೆ ಜಮೀನನ್ನು ಹಣ ನೀಡಿದ ಬಳಿಕ ವಾಪಸ್ ಮಾಡಿಕೊಡುವುದಾಗಿ ಭರವಸೆ ನೀಡಿ ತಮ್ಮ ಹೆಸರಿಗೆ ಬರೆಸಿಕೊಂಡರು ಎಂದು ಆರೋಪಿಸಲಾಗಿದೆ. ಬಳಿಕ ವಿದ್ಯಾಭ್ಯಾಸದ ಸಾಲ ತೀರಿಸುವುದಾಗಿ ಹೇಳಿ ಮತ್ತೊಂದು 1.5 ಎಕರೆ ಜಮೀನನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ಸುಮಾ ತಿಳಿಸಿದ್ದಾರೆ.
ಇದಾದ ಬಳಿಕ, ತಾವು ಹೊಟ್ಟೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಕುಟುಂಬದ ಸಂಕಷ್ಟವನ್ನು ದುರುಪಯೋಗಪಡಿಸಿಕೊಂಡು, ಉಳಿದ ಜಮೀನನ್ನೂ ಸೇರಿಸಿ ಒಟ್ಟು 16 ಎಕರೆ ಆಸ್ತಿಯನ್ನು ಗಿಫ್ಟ್ ಡೀಡ್ ಸೇರಿದಂತೆ ವಿವಿಧ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂಬುದು ಸುಮಾ ಅವರ ಆರೋಪವಾಗಿದೆ.
ಸುಮಾ ಅವರ ಪತಿ ಕಳೆದ ಹಲವು ವರ್ಷಗಳಿಂದ ಪಾರ್ಶ್ವವಾಯು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಸುಮಾರು 13 ವರ್ಷಗಳ ಕಾಲ ತಾವೇ ಪತಿಯ ಆರೈಕೆ ಮಾಡುತ್ತಿದ್ದಾಗಿ ಅವರು ತಿಳಿಸಿದರು.
ಆದರೆ ಇದೀಗ ಆಸ್ತಿ ಸಂಪೂರ್ಣವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಶಿವಶಂಕರ್ ಮತ್ತು ವಾಣಿ ಹಣ ಹಾಗೂ ಅಧಿಕಾರದ ಪ್ರಭಾವ ಬಳಸಿ ಕುಟುಂಬವನ್ನು ಮನೆಯಿಂದ ಹೊರಹಾಕಲು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸುಮಾ ಆರೋಪಿಸಿದ್ದಾರೆ.
ನಮ್ಮ ಬಳಿ ಈಗ ಯಾವುದೇ ಆಸ್ತಿ ಉಳಿದಿಲ್ಲ. ಪತಿ ಹಾಗೂ 9 ವರ್ಷದ ಮಗುವಿನೊಂದಿಗೆ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ನಮಗೆ ನ್ಯಾಯ ಬೇಕು ಎಂದು ಸುಮಾ ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.
ನಮಗೆ ನ್ಯಾಯ ಒದಗಿಸಿಕೊಡಿ: ಆಸ್ತಿ ವರ್ಗಾವಣೆ ಹಾಗೂ ಕುಟುಂಬದ ಮೇಲಿನ ದೌರ್ಜನ್ಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ, ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಕಾನೂನುಬದ್ಧ ರಕ್ಷಣೆ ಹಾಗೂ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.