ಕರ್ತವ್ಯನಿಮಿತ್ಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರೊಂದಿಗೆ ಸೌಜನ್ಯದಿಂದ ವರ್ತಿಸಿ 

ಕರ್ತವ್ಯನಿಮಿತ್ಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರೊಂದಿಗೆ ಸೌಜನ್ಯದಿಂದ ವರ್ತಿಸಿ 

        ಬೆಂಗಳೂರು, ಸೆ17: ರಾಜ್ಯದ ಪೊಲೀಸ್ ಠಾಣೆ ಮತ್ತು ಪೊಲೀಸ್ ಕಚೇರಿಗಳಿಗೆ ಕರ್ತವ್ಯ ನಿಮಿತ್ಯ ಭೇಟಿ ನೀಡುವ ವಕೀಲರೊಂದಿಗೆ  ವಾಗ್ವಾದ ಮಾಡದೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು  ಗೌರವ,ಸೌಜನ್ಯದಿಂದ ವರ್ತಿಸುವಂತೆ ರಾಜ್ಯದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಜ್ಞಾಪನ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ!

ವಕೀಲರು ನ್ಯಾಯದಾನ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ತಮ್ಮ ಕಕ್ಷಿದಾರರ ಕಾನೂನು ಬದ್ದ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದರಿಂದ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ತಮ್ಮ ಕಕ್ಷಿದಾರರ ಪರವಾಗಿ ದೂರು, ತನಿಖೆ, ಬಂಧನ, ಜಾಮೀನು, ವಿಚಾರಣೆ, ದಾಖಲೆಗಳು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳಿಗೆ ಸಂಬಂದಿಸಿದಂತೆ ಕರ್ತವ್ಯನಿಮಿತ್ತ ವಕೀಲರು ಭೇಟಿ ನೀಡುವುದು ಸಾಮಾನ್ಯ ವೃತ್ತಿಪರ ಕರ್ತವ್ಯದ ಭಾಗವಾಗಿರುತ್ತದೆ. ಕಾರ್ಯನಿಮಿತ್ಯ ರಾಜ್ಯದ ಕೆಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ವಕೀಲರೊಂದಿಗೆ ಅನಗತ್ಯವಾಗಿ ವಾಗ್ವಾದಕ್ಕಿಳಿಯುವುದು, ಅವಾಚ್ಯವಾಗಿ ಮಾತನಾಡುವುದು, ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು, ಕಾನೂನು ಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಂತಹ ಹಾಗೂ ಅನಗತ್ಯ ಕಿರುಕುಳ ನೀಡುವಂತಹ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಲ್ಲದೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿಯೂ ದೂರುಗಳು ದಾಖಲಾಗಿ ವಿಚಾರಣೆಯಲ್ಲಿದ್ದು ನಿರಂತರ ಕಛೇರಿಗೆ ಹಲವಾರು ದೂರುಗಳು ಸಲ್ಲಿಕೆಯಾಗುತ್ತಿರುತ್ತವೆ, 

ಇತರರಿಂದ ವಕೀಲರ ಮೇಲಾಗುವ ದೌರ್ಜನ್ಯ, ಹಲ್ಲೆ, ಬೆದರಿಕೆಯಂತಹ ಹಿಂಸಾಚಾರದಿಂದ ವಕೀಲರನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಜಾರಿಯಲ್ಲಿದ್ದರೂ ಸದರಿ ಕಾಯ್ದೆಯನ್ನು ಜಾರಿ ಮಾಡುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳೇ ಇಂತಹ ದುರ್ನಡತೆ ತೋರುತ್ತಿರುವುದ್ದರಿಂದ ಸಾರ್ವಜನಿಕ ಹಾಗೂ ವಕೀಲ ಸಮೂಹದಲ್ಲಿ ನಿರಂತರ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಿರುತ್ತವೆ, ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಯಲ್ಲಿರುವ ಸಂದರ್ಭದಲ್ಲಿ ವಕೀಲರು ತಮ್ಮ ವೃತ್ತಿಪರ ಕರ್ತವ್ಯವನ್ನು ನಿರ್ಭೀತಿಯಿಂದ ಮತ್ತು ಗೌರವಯುತ ವಾತಾವರಣದಲ್ಲಿ ನಿರ್ವಹಿಸಬೇಕಾಗಿದ್ದು ಪೊಲೀಸ್ ಇಲಾಖೆ ಮತ್ತು ವಕೀಲರು ನ್ಯಾಯದಾನ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದರಿಂದ ಪರಸ್ಪರ ಗೌರವ ಮತ್ತು ಸಹಕಾರದಿಂದ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯವಾಗಿರುವುದ್ದರಿಂದ ಕಾನೂನು ಸುವ್ಯವಸ್ಥೆ ಮತ್ತು ನ್ಯಾಯದಾನದ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ರಾಜ್ಯದ ಪೊಲೀಸ್ ಠಾಣೆ ಮತ್ತು ಪೊಲೀಸ್ ಕಛೇರಿಗಳಿಗೆ ಕರ್ತವ್ಯನಿಮಿತ್ಯ ಭೇಟಿ ನೀಡುವ ವಕೀಲರೊಂದಿಗೆ ಅನಗತ್ಯವಾಗಿ ವಾಗ್ವಾದಕ್ಕಿಳಿಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆದರಿಕೆ ಹಾಕುವುದು, ವೃತ್ತಿಗೆ ಅವಮಾನಿಸುವಂತಹ ದುರ್ನಡತೆ ತೋರದೆ ಗೌರವಯುತ ಮತ್ತು ಸೌಜನ್ಯಯುತವಾಗಿ ವರ್ತಿಸುವಂತೆ, ಪೊಲೀಸ್ ಠಾಣೆಯಲ್ಲಿ ವಕೀಲರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾದಲ್ಲಿ ಅದನ್ನು ವಾಗ್ವಾದ ಅಥವಾ ಸಂಘರ್ಷ ಮಾಡದೇ ಶಾಂತಿಯುತವಾಗಿ ಕಾನೂನು ಬದ್ಧರೀತಿಯಲ್ಲಿ ಪರಿಹರಿಸಿಕೊಳ್ಳುವಂತೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಕೀಲರೊಂದಿಗೆ ಅಸಭ್ಯ ವರ್ತನೆ, ಕಿರುಕುಳ, ಬೆದರಿಕೆ ಅಥವಾ ವೃತ್ತಿಪರ ಕರ್ತವ್ಯಕ್ಕೆ ಅಡ್ಡಿಪಡಿಸುವ ಕುರಿತು ದೂರುಗಳು ಬಂದಲ್ಲಿ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ, ವಕೀಲರು ಮತ್ತು ಪೊಲೀಸರ ನಡುವೆ ಉತ್ತಮ ಸಮನ್ವಯ ಮತ್ತು ಪರಸ್ಪರ ಗೌರವಕ್ಕಾಗಿ ಜಿಲ್ಲಾ & ತಾಲೂಕು ಮಟ್ಟದಲ್ಲಿ ಸಂಬಂದಿಸಿದ ಪೊಲೀಸ್ ಅಧಿಕಾರಿಗಳು ವಕೀಲರೊಂದಿಗೆ ಕಾಲಕಾಲಕ್ಕೆ (ಪೊಲೀಸ್-ಬಾರ್ ಕೋರ್ಡಿನೇಷನ್ ಮೀಟಿಂಗ್) ಸಮನ್ವಯ ಸಭೆಗಳನ್ನು ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ!