ಕೆ.ಆರ್.ಪೇಟೆ ವಿದ್ಯಾರ್ಥಿನಿಯರಿಗೆ ವಿಧಾನಮಂಡಲ ಕಲಾಪ ವೀಕ್ಷಣೆಗೆ ಸುವರ್ಣಾವಕಾಶ
ಕೆ.ಆರ್.ಪೇಟೆ: ಶಾಸಕ ಹೆಚ್ ಟಿ ಮಂಜು ಅವರು ಎರಡನೇ ಬಾರಿಗೆ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನ ಅಧಿವೇಶನದಲ್ಲಿ ನಡೆಯುವ ಕಲಾಪ ವೀಕ್ಷಿಸಲು ಸುವರ್ಣ ಅವಕಾಶ ಮಾಡಿಕೊಟ್ಟಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನದ ಕಲಾಪವನ್ನು ನೇರವಾಗಿ ವೀಕ್ಷಿಸುವ ಅಪೂರ್ವ ಅವಕಾಶ ಕಲ್ಪಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆಂಗೆಣ್ಣೇಗೌಡ ಮಾತನಾಡಿ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅವರ ವಿಶೇಷ ಆಸಕ್ತಿಯಿಂದ ವಿದ್ಯಾರ್ಥಿನಿಯರು ವಿಧಾನಮಂಡಲದ ಕಲಾಪವನ್ನು ವೀಕ್ಷಿಸಿ, ಪ್ರಜಾಪ್ರಭುತ್ವದ ಕಾರ್ಯವೈಖರಿ ಹಾಗೂ ಶಾಸಕರ ಕರ್ತವ್ಯಗಳ ಕುರಿತು ಅರಿವು ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶ.
ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ವಿದ್ಯಾರ್ಥಿನಿಯರು ಕಣ್ತುಂಬಿಕೊಳ್ಳಲು ಇಂತಹ ಉತ್ತಮ ಕೆಲಸಗಳು ಆಗುತ್ತಿರಬೇಕು. ಇಂತಹ ಅವಕಾಶ ಕಲ್ಪಿಸಿಕೊಟ್ಟ ಶಾಸಕ ಹೆಚ್.ಟಿ.ಮಂಜು ಅವರಿಗೆ ಪ್ರಾಂಶುಪಾಲರು ಹಾಗೂ ಕಾಲೇಜು ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿನಿಯರು ಮಾತನಾಡಿ, ಕಳೆದ ವರ್ಷವೂ ಶಾಸಕರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಧಾನಸಭಾ ಕಲಾಪ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ವರ್ಷವೂ ಅದೇ ರೀತಿಯ ಅವಕಾಶ ಕಲ್ಪಿಸಿರುವುದು ಶಾಸಕರಿಗೆ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರ ಕರ್ತವ್ಯಗಳು ಕೇವಲ ವಿಧಾನಸಭೆಯಲ್ಲಿ ಭಾಗವಹಿಸುವುದಕ್ಕೆ ಸೀಮಿತವಾಗದೆ, ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುವುದು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಾಗಿದೆ. ಈ ನಿಟ್ಟಿನಲ್ಲಿ ಹೆಚ್.ಟಿ. ಮಂಜು ಅವರು ವಿದ್ಯಾರ್ಥಿಗಳಿಗೆ ವಿಧಾನಮಂಡಲದ ಕಲಾಪ ಪರಿಚಯಿಸುವ ಮೂಲಕ ಉತ್ತಮ ಮಾದರಿ ಕಾರ್ಯ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಶಾಸಕರನ್ನು ಶ್ಲಾಘಿಸಿದರು.
ಈ ಸಮಯದಲ್ಲಿ ಕಾಲೇಜು ಅಧ್ಯಾಪಕರ ವೃಂದ ಹಾಗೂ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.