ಬೀರನಕುಪ್ಪ ದರ್ಗಾ ವಿವಾದ; ತಮ್ಮ ಮೇಲಿನ ಎಲ್ಲಾ ಆರೋಪ ಸತ್ಯಕ್ಕೆ ದೂರ ಅಪ್ತಾಬ್ ಹುಸೇನ್ ಸ್ಪಷ್ಟನೆ
ಬೇತಮಂಗಲ: ಇಲ್ಲಿಗೆ ಸಮೀಪದ ಪಾರಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೀರನಕುಪ್ಪ ಸೈಯದ್ ಗೌಷದ್ ವಾಲಿ ದರ್ಗಾ ಮತ್ತು ಮಸೀದಿ ಆಡಳಿತ ಮಂಡಳಿಯ ನಿರ್ವಹಣೆ ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರ ಎಂದು ದರ್ಗಾ ಮಾಜಿ ಅಧ್ಯಕ್ಷ ಅಪ್ತಾಬ್ ಹುಸೇನ್ ಸ್ಪಷ್ಟಕರಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದಿನ ಸಮಿತಿಯ ಸದಸ್ಯರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ತಮ್ಮ ಆಡಳಿತ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ದಾಖಲೆಗಳನ್ನು ಮಾಧ್ಯಮಗಳ ಮುಂದಿಟ್ಟರು. ತಮ್ಮ ಮೇಲಿನ ಹಣಕಾಸು ದುರುಪಯೋಗದ ಆರೋಪಗಳು ಆಧಾರರಹಿತ ಎಂದಿರುವ ಹುಸೇನ್, ತಮ್ಮ ಅವಧಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ, ಮಸೀದಿ-ದರ್ಗಾ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ತಿಳಿಸಿದರು.
ದರ್ಗಾದ ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ಗ್ಯಾಜೆಟ್ ಅಧಿಸೂಚನೆ ಸೇರಿದಂತೆ ಎಲ್ಲಾ ಕಾನೂನು ದಾಖಲೆಗಳು ತಮ್ಮ ಬಳಿ ಭದ್ರವಾಗಿವೆ. 2016 ರಿಂದ 2026ರವರೆಗಿನ ಪ್ರತಿಯೊಂದು ಹಣಕಾಸು ವಹಿವಾಟು, ದೇಣಿಗೆ ಹಾಗೂ ಆಡಿಟ್ ವರದಿಗಳು ಸಿದ್ಧವಿದ್ದು, ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದರು.
ತಮ್ಮ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲಿ ಹಾಗೂ ದರ್ಗಾ ಆಸ್ತಿಯ ನಿಖರ ಸರ್ವೆ ಮಾಡಿಸಿ ಸತ್ಯಾಸತ್ಯತೆಯನ್ನು ಹೊರಗೆ ತರಲಿ ಒಂದುವೇಳೆ ನಮ್ಮ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ಶಿಕ್ಷೆ ಅನುಭವಿಸಕ್ಕ್ಕೆ ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.