ಸರ್ಕಾರಿ ಆಸ್ತಿ ಲೂಟಿ: ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ವೈ ಸಂಪಂಗಿ ಗರಂ
ಬೇತಮಂಗಲ: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮತ್ತು ಅಕ್ರಮ ನಿವೇಶನಗಳ ಸೃಷ್ಟಿ ಅವ್ಯಾಹತವಾಗಿ ನಡೆಯುತ್ತಿದ್ದು, ಇದರ ಹಿಂದೆ ಕ್ಷೇತ್ರದ ಹಾಲಿ ಶಾಸಕರ ಕುಮ್ಮಕ್ಕು ಇದೆ ಎಂದು ಮಾಜಿ ಶಾಸಕ ವೈ. ಸಂಪಂಗಿ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ. ಸಂಪಂಗಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಗ್ರಾಮಸ್ಥರ ಉಪಯೋಗಕ್ಕಾಗಿ ಮೀಸಲಿಟ್ಟಿದ್ದ ಮೂರು ಎಕರೆ ಐದು ಕುಂಟೆ ಜಾಗದಲ್ಲಿ, ಸಬ್ಸ್ಟೇಷನ್ ನಿರ್ಮಾಣದ ಬಳಿಕ ಉಳಿದಿದ್ದ ಎರಡು ಎಕರೆ ಐದು ಕುಂಟೆ ಜಾಗವನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ದೂರಿದರು. ಗ್ರಾಮಸ್ಥರಿಗೆ ಮತ್ತು ನಿರಾಶ್ರಿತರಿಗೆ ಮನೆ ನಿರ್ಮಿಸಲು ಬಳಕೆಯಾಗಬೇಕಿದ್ದ ಈ ಜಾಗದಲ್ಲಿ ಒಬ್ಬನೇ ವ್ಯಕ್ತಿ ಹತ್ತು ಸೈಟ್ಗಳನ್ನು ಮಾಡಿಕೊಂಡಿದ್ದಾನೆ ಎಂದು ಕಿಡಿಕಾರಿದ ಅವರು, ಇದಕ್ಕೆ ಪಿಡಿಒ ಮತ್ತು ಗ್ರಾಮ ಸಹಾಯಕರ ಶಾಮೀಲಾತಿ ಇದೆ ಎಂದು ಆರೋಪಿಸಿದರು.
ಈ ಅಕ್ರಮದ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದ್ದರೂ, ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿದ ಸಂಪಂಗಿ, ಅಧಿಕಾರಿಗಳು ಕೋರ್ಟ್ಗೆ ಅಬ್ಸೆಂಟ್ ಆಗುವ ಮೂಲಕ ಅಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಈ ರೀತಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದರೆ ಅದರ ಹಿಂದೆ ಕ್ಷೇತ್ರದ ಶಾಸಕರ ಬೆಂಬಲವೇ ಇದೆ. ಈ ಅಕ್ರಮಕ್ಕೆ ಶಾಸಕರೇ ನೇರ ಹೊಣೆ ಎಂದು ನೇರವಾಗಿ ಟೀಕಿಸಿದರು.
ಎಸ್ಸಿ. ಎಸ್ಟಿ. ಹಣ ದುರ್ಬಳಕೆ: ಇದೇ ವೇಳೆ ರಾಜ್ಯ ಸರ್ಕಾರದ ಎಸ್.ಸಿ/ಎಸ್.ಟಿ ನಿಧಿ ಬಳಕೆಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 40,000 ದಿಂದ 45,000 ಕೋಟಿ ರೂಪಾಯಿಗಳ ಎಸ್.ಸಿ/ಎಸ್.ಟಿ ಅನುದಾನ ದುರುಪಯೋಗವಾಗಿದೆ. ಕಳಪೆ ಕಾಮಗಾರಿಗಳ ಮೂಲಕ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೇವಲ ಭರವಸೆಗಳ ಮೇಲೆ ನಂಬಿಕೆ ಇಲ್ಲದಂತಾಗಿದ್ದು, ಕೂಡಲೇ ಈ ಅನುದಾನದ ದುರುಪಯೋಗದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನಾನು ಕೇಳುತ್ತಿರುವುದು ಸಾರ್ವಜನಿಕ ಹಿತಕ್ಕಾಗಿ, ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿಗಳ ಸರ್ಕಾರಿ ಆಸ್ತಿ ಒತ್ತುವರಿ ನಡೆದಿದೆ. ಅಕ್ರಮದ ಸಂಪೂರ್ಣ ದಾಖಲೆಗಳು ನನ್ನ ಬಳಿ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿದರು. ಅಲ್ಲದೆ, ಕೆಲವು ಮಾಧ್ಯಮಗಳು ಸತ್ಯಾಂಶವನ್ನು ಮರೆಮಾಚಿ ಅಕ್ರಮ ಎಸಗುವವರ ಪರವಾಗಿ ನಿಂತು ಜನರ ದಾರಿತಪ್ಪಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ತಾನು ರಾಜಕೀಯ ಹಿತಾಸಕ್ತಿಗಾಗಿ ಅಲ್ಲದೆ, ಬಡವರ ಪರವಾಗಿ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುವುದಾಗಿ ವೈ. ಸಂಪಂಗಿ ಖಡಕ್ಕಾಗಿ ನುಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಗ್ರಾಪಂ ಮಾಜಿ ಅಧ್ಯಕ್ಷ ಸುನೀಲ್ ವೆಂಗಸಂದ್ರ ಮಂಜುನಾಥ್, ಮಾಜಿ ಗ್ರಾಪಂ ಸದಸ್ಯ ನಾರಾಯಣ್ ಸ್ವಾಮಿ, ಜೆಸಿಬಿ ಮುನಿಯಪ್ಪ, ಮುಖಂಡರಾದ ಧನುಷ್, ಪುರುಷೋತ್ತಮ್, ಪ್ರಸಾದ್, ಗ್ರಾಮಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.