ಸರ್ಕಾರಿ ಆಸ್ತಿ ಉಳಿಸಲು ಕ್ರಮ ಕೈಗೊಳ್ಳಿ: ಶಾಸಕರಿಗೆ ಬಿಜೆಪಿ ಮುಖಂಡರು ಸವಾಲು

ಸರ್ಕಾರಿ ಆಸ್ತಿ ಉಳಿಸಲು ಕ್ರಮ ಕೈಗೊಳ್ಳಿ: ಶಾಸಕರಿಗೆ ಬಿಜೆಪಿ ಮುಖಂಡರು ಸವಾಲು

ಗ್ರಾಮ ಠಾಣೆ ಜಾಗ ವಿವಾದಕ್ಕೆ ತಾರಕಕ್ಕೇರಿದ ರಾಜಕೀಯ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಬೇತಮಂಗಲ: ವೆಂಗಸಂದ್ರ ಗ್ರಾಮದ ಗ್ರಾಮ ಠಾಣೆಗೆ ಸೇರಿದ 2 ಎಕರೆ 5 ಗುಂಟೆ ಸರ್ಕಾರಿ ಜಾಗದ ಕುರಿತು ಸಮಗ್ರ ಕಾನೂನುಬದ್ಧ ತನಿಖೆ ನಡೆಸಿ, ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರ ಉಪಯೋಗಕ್ಕೆ ಬಳಸುವಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಇತ್ತೀಚೆಗೆ ಮಾಜಿ ಶಾಸಕ ವೈ. ಸಂಪಂಗಿ ಅವರು ಹಾಲಿ ಶಾಸಕಿ ರೂಪಕಲಾ ವಿರುದ್ಧ ಮಾಡಿದ್ದ ಆರೋಪಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.

ಮಾಜಿ ಶಾಸಕ ವೈ. ಸಂಪಂಗಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಈ ಭಾಗಕ್ಕೆ ವಿದ್ಯುತ್ ಸಬ್‌ಸ್ಟೇಷನ್ ಮಂಜೂರು ಮಾಡಿಸಿ ನೂರಾರು ರೈತರಿಗೆ ಅನುಕೂಲ ಕಲ್ಪಿಸಿದ್ದರು. ಅದೇ ರೀತಿ ಹಾಲಿ ಶಾಸಕರು ಸಹ ಗ್ರಾಮ ಠಾಣೆ ಜಾಗವನ್ನು ಸಂರಕ್ಷಿಸಿ, ಅಲ್ಲಿ ಆಸ್ಪತ್ರೆ, ಶಾಲೆ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಾಲಯಕ್ಕೆ ನಿಯಮಿತವಾಗಿ ಹಾಜರಾಗುತ್ತಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಗ್ರಾಮ ಠಾಣೆ ಜಮೀನಿನ ವಿವಾದದ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಮೂಲ್ಯ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ಸಾರ್ವಜನಿಕ ಹಿತಕ್ಕಾಗಿ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಹೋರಾಟ ಯಾವುದೇ ವೈಯಕ್ತಿಕ ಉದ್ದೇಶಕ್ಕಾಗಿ ಅಲ್ಲ. ಸರ್ಕಾರಿ ಆಸ್ತಿ ಸಾರ್ವಜನಿಕರ, ವಿಶೇಷವಾಗಿ ಬಡವರ ಹಿತಕ್ಕಾಗಿ ಬಳಕೆಯಾಗಬೇಕು ಎಂಬ ಉದ್ದೇಶದಿಂದ ನಡೆಸಲಾಗುತ್ತಿದೆ. ಜುಲೈ 9ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಗೆ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಜರುಪಡಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ವೆಂಗಸಂದ್ರ ಗ್ರಾಪಂ ಮಾಜಿ ಅಧ್ಯಕ್ಷರಾದ ವೆಂಕಟಾಚಲಪತಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್ ಶರ್ಮ, ಗ್ರಾಪಂ ಮಾಜಿ ಅಧ್ಯಕ್ಷರಾದ ಸುನಿಲ್ ಕುಮಾರ್, ಮಾಜಿ ಉಪಾಧ್ಯಕ್ಷ ಮಲ್ಲಹಳ್ಳಿ ಹರೀಶ್, ಟಿಎಪಿಎಂಎಸ್ ನಿರ್ದೇಶಕರಾದ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ಪ್ರಸಾದ್, ಸುಧಾಕರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.