ನಿಯಮ ಉಲ್ಲಂಘಿಸಿದರೆ ಮುಖಂಡರಿಗೆ ಲಕ್ಷ ರೂ.ದಂಡ..!

Jun 15, 2026 - 17:23
 0  12
ನಿಯಮ ಉಲ್ಲಂಘಿಸಿದರೆ ಮುಖಂಡರಿಗೆ ಲಕ್ಷ ರೂ.ದಂಡ..!
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಮುದ್ದೇಬಿಹಾಳ ತಾಲೂಕಿನ 22 ತಾಂಡಾಗಳಲ್ಲಿ ವರದಕ್ಷಿಣೆ ಪಿಡುಗಿಗೆ ಬ್ರೇಕ್‌ಗೆ ಸ್ವಯಂ ನಿರ್ಣಯ  

ಮುದ್ದೇಬಿಹಾಳ : ಆಡಂಬರದ ಮದುವೆ ಹಾಗೂ ವರದಕ್ಷಿಣೆ ಪಿಡುಗಿನಿಂದ ಆರ್ಥಿಕವಾಗಿ ನಲುಗುತ್ತಿರುವ ಬಂಜಾರ ಸಮುದಾಯವನ್ನು ರಕ್ಷಿಸಲು ಸಮಾಜದ ಹಿರಿಯರು, ಯುವಕರು ಮತ್ತು ಮಠಾಧೀಶರು ಸೇರಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಯ ಭಾಗವಾಗಿ ಸ್ವಯಂಪ್ರೇರಣೆಯಾಗಿ ಐತಿಹಾಸಿಕ ನಿರ್ಧಾರವನ್ನು ಭಾನುವಾರ ಕೈಗೊಂಡಿದ್ದಾರೆ.

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಆಲ್ ಇಂಡಿಯಾ ಬಂಜಾರ್ ಸೇವಾ ಸಂಘ ಹಾಗೂ ಯುವ ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ತಾಲ್ಲೂಕಾ ಬಂಜಾರಾ ಸಮಾಜ ಮಹಾಪಂಚಾಯತ್ ಮಹಾಸಭಾದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಬಂಜಾರಾ ಜನಾಂಗದವರಲ್ಲಿ ಸಾಂಸ್ಕೃತಿಯ ಪರಂಪರೆ ಅಗಾಧವಾಗಿದೆ. ಆದರೆ ಈಚೇಗಿನ ಬೆಳವಣಿಗೆಗಳು ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆ ಧಕ್ಕೆ ತರುವ ಕೆಲವು ಘಟನೆಗಳು ನಡೆದಿರುವುದು ಆತಂಕವನ್ನುಂಟು ಮಾಡಿದೆ. ಲವ್ ಜಿಹಾದ್,ಮತ್ತೊಂದು ಧರ್ಮಕ್ಕೆ ಮತಾಂತರದ ಸಮಸ್ಯೆಗಳು ವ್ಯಾಪಕವಾಗಿ ಕಾಡುತ್ತಿದ್ದು ವರದಕ್ಷಿಣೆಯ ಭಾರದಿಂದ ಇಂತಹ ಕೆಲವು ತಪ್ಪು ನಿರ್ಧಾರಗಳನ್ನು ಸಮಾಜದವರು ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ಸರಳ ಮದುವೆಗಳಿಗೆ ಒತ್ತು ನೀಡುವ ಜೊತೆಗೆ ಬಂಜಾರ ಜನಾಂಗದ ಸಿರಿವಂತಿಕೆ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಕಾರ್ಯವನ್ನು ಸಮಾಜದ ಮುದ್ದೇಬಿಹಾಳ ತಾಲ್ಲೂಕಿನ ಪ್ರಮುಖ ತಾಂಡಾಗಳ ನಾಯಕರು, ಕಾರಭಾರಿಗಳು ಮತ್ತು ಡಾವಸಾನ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿವಾಹ ಸಂಬಂಧಿ ವೆಚ್ಚಗಳಿಗೆ ಕಟ್ಟುನಿಟ್ಟಿನ ಮಿತಿ ಹೇರಲು ಕೈಗೊಂಡಿರುವ ನಿರ್ಧಾರ ಶ್ಲಾಘನೀಯ ಎಂದು ಹೇಳಿದರು.

ಬಂಜಾರ ಸಮಾಜದ ರಾಜ್ಯ ಯುವ ಮುಖಂಡ ಸಂತೋಷ ಚವ್ಹಾಣ(ಹುಲ್ಲೂರ) ಮಾತನಾಡಿ, ವರದಕ್ಷಿಣೆ ಮತ್ತು ಮೂಢನಂಬಿಕೆಗಳ ಆಚರಣೆಗಳಿಗೆ ಹಣ ವ್ಯರ್ಥ ಮಾಡುವ ಬದಲು, ತಾಂಡಾದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಆ ಹಣವನ್ನು ವಿನಿಯೋಗಿಸಬೇಕು. ವರದಕ್ಷಿಣಿ ಪಿಡುಗಿಗೆ ಸಾಧ್ಯವಾದಷ್ಟರ ಮಟ್ಟಿಗೆ ಕಡಿವಾಣ ಹಾಕಬೇಕು ಎಂಬ ತೀರ್ಮಾನಕ್ಕೆ ತಾಂಡಾಗಳ ನಾಯಕರು,ಕಾರಭಾರಿಗಳು, ಡಾವಗಳು,ಯುವಕರು ಸಹಮತದಿಂದ ಈ ನಿರ್ಣಯಕ್ಕೆ ಬಂದಿದ್ದೇವೆ.ತಾಂಡಾಗಳಲ್ಲಿ ಈಗ ಕೈಗೊಂಡಿರುವ ಮದುವೆ ನಿರ್ಣಯಗಳನ್ನು ಉಲ್ಲಂಘನೆ ಮಾಡಿದರೆ ಮೊದಲು ಆ ತಾಂಡಾದ ನಾಯಕರಿಗೆ ಒಂದು ಲಕ್ಷ ರೂ.ದಂಡ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಎಆಯ್‌ಬಿಎಸ್‌ಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಡಾ.ಸಂತೋಷ ನಾಯಕ ಮಾತನಾಡಿ, ಹೆಣ್ಣು ಹೆತ್ತವರು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು, ಇನ್ಮುಂದೆ ವಿವಾಹದ ಒಟ್ಟಾರೆ ಖರ್ಚು ವೆಚ್ಚಗಳನ್ನು ವಧು ಮತ್ತು ವರ ಎರಡೂ ಕುಟುಂಬದವರಿಗೂ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಕ್ರಾಂತಿಕಾರಿ ನಿರ್ಧಾರಕ್ಕೆ ಬರಲಾಗಿದೆ. ವಧುವಿಗೆ ಕೇವಲ ಅತ್ಯಗತ್ಯ ಗೃಹೋಪಯೋಗಿ ವಸ್ತುಗಳನ್ನು ಮಾತ್ರ ನೀಡಲು ಸಮ್ಮತಿಸಲಾಗಿದ್ದು, ಆಡಂಬರ ಪ್ರದರ್ಶನಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂತಹ ನಿರ್ಧಾರ ಕೈಗೊಳ್ಳಲು ಸಮಾಜದ ಬಾಂಧವರು ಒಗ್ಗಟ್ಟು ಪ್ರದರ್ಶಿಸಿರುವುದು ನಮಗೆ ಖುಷಿ ತಂದಿದೆ ಎಂದು ಹೇಳಿದರು. 

ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ,ತಾಲ್ಲೂಕು ಅಧ್ಯಕ್ಷ ಬಹಾದ್ದೂರ ರಾಠೋಡ,ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ,ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ನಾನಪ್ಪ ನಾಯಕ,ಗ್ರಾಪಂ ಮಾಜಿ ಸದಸ್ಯ ಥಾವರಪ್ಪ ಜಾಧವ, ಅಶೋಕ ರಾಠೋಡ (ನೇಬಗೇರಿ),ನಿವೃತ್ತ ಆರ್‌ಟಿಒ ಅಧಿಕಾರಿ ಜಯರಾಮ ನಾಯಕ, ಹಣಮಂತ ಚವ್ಹಾಣ, ರಾಮು ನಾಯಕ, ಸತೀಶ ಚವ್ಹಾಣ, ಕೃಷ್ಣಾ ಚವ್ಹಾಣ, ದಿಲೀಪ ರಾಠೋಡ, ಲಕ್ಷ್ಮಣ ರಾಠೋಡ, ಚಂದ್ರಶೇಖರ ರಾಠೋಡ, ಚಂದ್ರಶೇಖರ ನಾಯ್ಕ, ವಾಲು ನಾಯಕ, ರವಿ ಚವ್ಹಾಣ, ಪಾಂಡು ಚವ್ಹಾಣ, ಹೋಬಾ ನಾಯಕ, ಶ್ರೀಕಾಂತ ನಾಯಕ, ಮಿಥುನ ಚವ್ಹಾಣ, ಜಗದೀಶ ನಾಯ್ಕ, ಖೂಬಪ್ಪ ಚವ್ಹಾಣ, ಬಸವರಾಜ ಚಿಂತಾಮಣಿ, ಏಕನಾಥ ಸೀತಿಮನಿ, ಸಚೀನ ಚವ್ಹಾಣ,ಎಚ್.ಬಿ.ಲಮಾಣಿ ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.

ಮಹಾಪಂಚಾಯತ್ ಸಭೆಯಲ್ಲಿ ಮಂಡನೆಯಾದ ಪ್ರಮುಖ ವಿಚಾರಗಳು : ತಾಲ್ಲೂಕಿನ ೨೨ ತಾಂಡಾಗಳ ಪ್ರಮುಖರು ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣದ ಕ್ರಾಂತಿಕಾರಿ ಕಟ್ಟುಪಾಡುಗಳನ್ನು ಜಾರಿಗೆ ತಂದಿದ್ದಾರೆ.ಇನ್ಮುಂದೆ ತಾಲ್ಲೂಕಿನ ಯಾವುದೇ ತಾಂಡಾಗಳಲ್ಲಿ ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ವರದಕ್ಷಿಣೆ ನಿಷೇಧ : ಮದುವೆ ಹೆಸರಿನಲ್ಲಿ ನಗದು ರೂಪದ ವರದಕ್ಷಿಣೆ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

ಡಿಜೆ ನಿಷೇಧ : ಮದುವೆಗಳಲ್ಲಿ ಹೆಚ್ಚಾಗಿರುವ ಭಾರಿ ವೆಚ್ಚದ ಡಿಜೆ ಮ್ಯೂಸಿಕ್ ಸಿಸ್ಟಮ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮದ್ಯ ನಿಷೇಧ: ಮದ್ಯಪಾನ ಮುಕ್ತ ವಿವಾಹಕ್ಕೆ ಒತ್ತು ನೀಡಿದ್ದು ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡುವಂತಿಲ್ಲ. ನಿಯಮ ಮೀರಿದರೆ ಇಡೀ ಕುಟುಂಬಕ್ಕೆ ಸಮಾಜದ ಮಟ್ಟದಲ್ಲಿ ಕಠಿಣ ದಂಡ ವಿಧಿಸಲಾಗುವುದು.

ಸರಳ ಹಳದಿ ಶಾಸ್ತ್ರ : ದಿನಗಟ್ಟಲೆ ನಡೆಯುವ 'ಹಳದಿ ಕಾರ್ಯಕ್ರಮ'ದ ಹೆಸರಿನಲ್ಲಿ ವ್ಯರ್ಥವಾಗುವ ಹಣ ಹಾಗೂ ಸಮಯವನ್ನು ಉಳಿಸಲು ಕೇವಲ ಒಂದೇ ದಿನದಲ್ಲಿ ಸರಳ ಆಚರಣೆಗೆ ಸೂಚಿಸಲಾಗಿದೆ. ಹೆತ್ತವರು ಕೇವಲ 2 ತೋಲಾ ಬಂಗಾರ ನೀಡಬಹುದು, ಆದರೆ ವರದಕ್ಷಿಣೆ ಹೆಸರಲ್ಲಿ ದ್ವೀಚಕ್ರ, ಕಾರು ನೀಡುವಂತಿಲ್ಲ, ಡಿ ಜೆ ಸೌಂಡ ಸಂಪೂರ್ಣ ನಿಷೇಧಿಸಬೇಕು. ಸರಳ ಸಂಪ್ರದಾಯದ ಮದುವೆ ನಡೆಸಬೇಕು ಎಂದು ಚರ್ಚಿಸಿ ಈ ನಿರ್ಣಯ ಮಂಡಿಸಲಾಗಿದರ ಎಂದು ತಿಳಿಸಿದರು.

What's Your Reaction?

like

dislike

love

funny

angry

sad

wow

Suddi Kirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268, 9686665456 #suddikiranatv #suddikiranaott