ಕೆಜಿಎಫ್ ತಾಲ್ಲೂಕು ಬಹುಜನ ವಿಚಾರ ವೇದಿಕೆ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ತಾಲ್ಲೂಕಿನ ಬೇತಮಂಗಲ ಪ್ರವಾಸಿ ಮಂದಿರದಲ್ಲಿ ಬಹುಜನ ವಿಚಾರ ವೇದಿಕೆ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷರಾದ ಚಿನ್ನ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಹಾತ್ಮಪುಲೆ ಅಕ್ಷರ ಅಕಾಡೆಮಿಯ ಅಧ್ಯಕ್ಷರಾದ ಕೆ.ಸಿ.ರಾಜಣ್ಣ ಅವರು ಮಾತನಾಡಿ ಸಂಘಟನೆಯ ಮೂಲ ಉದ್ದೇಶಗಳು ಹಾಗೂ ಭವಿಷ್ಯದ ಶೈಕ್ಷಣಿಕ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘಟನೆಯ ತಾಲ್ಲೂಕು ಮಟ್ಟದ ಶಾಖೆಯ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿ ಅಭಿನಂದಿಸಲಾಯಿತು. ನೂತನ ಅಧ್ಯಕ್ಷರಾಗಿ ನ್ಯೂಟನ್ ಪ್ರಶಾಂತ್,ಹಿರಿಯ ಉಪಾಧ್ಯಕ್ಷರಾಗಿ ವಿ.ಹರೀಶ್, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಜಯರಾಮ್ ಕಾರ್ಯದರ್ಶಿಗಳಾಗಿ ಎಂ. ಮುನೇಶ್, ಸುಪ್ರೀತ್, ಹಾಗೂ ಎನ್.ಎಸ್. ಸುದೀಪ್, ಮತ್ತು ಖಜಾಂಚಿಯಾಗಿ ಎಂ.ಆರ್. ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.,
ನಂತರ ಮಾತನಾಡಿದ ಕೆ.ಸಿ.ರಾಜಣ್ಣ ಅವರು, ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರುವುದು ಸಂಘಟನೆಯ ಬಹುಮುಖ್ಯ ಉದ್ದೇಶವಾಗಿದೆ ಎಂದರು. ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸಂಘಟನೆಯ ಏಕೈಕ ಅಜೆಂಡಾ ಆಗಿದ್ದು, ಪ್ರತ್ಯೇಕ ಪ್ರಣಾಳಿಕೆ ಅಥವಾ ಬೇರೆ ಯಾವುದೇ ಗುಪ್ತ ಅಜೆಂಡಾಗಳಿಲ್ಲ. ಸಂವಿಧಾನದ ಆಶಯಗಳ ಮೂಲಕ 'ಪ್ರಬುದ್ಧ ಭಾರತ'ವನ್ನು ನಿರ್ಮಾಣ ಮಾಡುವ ಸ್ಪಷ್ಟ ಗುರಿಯನ್ನು ಸಂಘಟನೆ ಹೊಂದಿದೆ ಎಂದು ಅವರು ತಿಳಿಸಿದರು.
ಅಕ್ಷರ ಅಕಾಡೆಮಿ ನಿರ್ಮಾಣ ಹಾಗೂ ಶೈಕ್ಷಣಿಕ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ಕೋಲಾರದಲ್ಲಿ 50x30 ಅಳತೆಯ ಒಟ್ಟು ನಾಲ್ಕು ಅಂತಸ್ತುಗಳ ಬೃಹತ್ ಅಕಾಡೆಮಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದರು. ಕಟ್ಟಡದ ಒಳಭಾಗದ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಹೊರಭಾಗದ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು 40 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದು, ಇಂಟೀರಿಯರ್ ವಿನ್ಯಾಸ ಸೇರಿದಂತೆ ಸಂಪೂರ್ಣ ಕಾಮಗಾರಿಗೆ ಒಟ್ಟು 1 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಸಮಾಜದಿಂದ ಜ್ಞಾನ ಹಾಗೂ ವಿದ್ಯೆಯನ್ನು ಪಡೆದು ಆರ್ಥಿಕವಾಗಿ ಸಬಲರಾಗಿರುವವರು ಸಮಾಜಕ್ಕೆ ಮರಳಿ ನೀಡುವ (Pay back to society) ಸದುದ್ದೇಶದಿಂದ ಈ ಬೃಹತ್ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ 'ಅಕ್ಷರ ಅಕಾಡೆಮಿ'ಯ ಮೂಲಕ ಪಿಡಿಒ (PDO), ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI), ಎಸ್.ಡಿ.ಎ (SDA), ಹಾಗೂ ಎಫ್.ಡಿ.ಎ (FDA) ಹುದ್ದೆಗಳ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರವನ್ನು ತೆರೆಯಲಾಗುವುದು. ಇದರ ಮೂಲಕ ಸಮಾಜದಲ್ಲಿ ಹೊಸ ವಿದ್ಯಾವಂತ ತಲೆಮಾರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಅವರು ತಮ್ಮ ಯೋಜನೆಗಳನ್ನು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಅಶ್ವಿನ್ ,ಅಶೋಕ್, ಅಪ್ರೋಜ್ ಪಾಷಾ, ಪ್ರಸನ್ನ,ಪ್ರಕಾಶ್,ಶ್ರೀಕಾಂತ್, ನಿತಿನ್, ಆನಂದ್, ದೀಕ್ಷಿತ್,ಬಿಸಿಎಂ ಬಾಬು, ಗುರಪ್ಪ,ಜಿ.ವೆಂಕಟೇಶ್,ಕೆ.ಎಂ.ರಾಜು, ವೆಂಕಟರಾಮ್,ಮಂಜುನಾಥ್, ಗಂಗಾಧರಂ, ಎಂ.ಕೇಶವ,ಬಾಬು ಕೆಜಿಎಫ್ ಗುರಪ್ಪ, ಅಂಬರೀಷ್
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
What's Your Reaction?