ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು: ನಾಡಿನ ಮಠಾಧೀಶರಿಗೆ ಮಾದರಿಯಾದ ಕಾಯಕಯೋಗಿ
ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಗಳಾಗಿರುವ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನಾಡಿನ ಪ್ರಮುಖ ಧಾರ್ಮಿಕ ಸಂತರು, ಸಮಾಜ ಸುಧಾರಕರು ಹಾಗೂ ಪರಿಸರವಾದಿಗಳು. ಇವರು 12ನೇ ಶತಮಾನದ ವಚನ ಸಾಹಿತ್ಯ, ಬಸವಾದಿ ಶರಣರ ತತ್ವಗಳನ್ನು ಸಾರುತ್ತಾ ಸಮಾಜದ ಒಳಿತಿಗಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ.
ಈ ಹಿಂದೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀಗಳು, ನಾಡಿನ ಹಿರಿಯ ಸಂತ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ನಿಧನದ ನಂತರ, ಅವರ ಇಚ್ಛೆಯಂತೆ 2018ರ ಅಕ್ಟೋಬರ್‌ನಲ್ಲಿ ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದರು. ತರುವಾಯ ವಚನ ಸಂಸ್ಕೃತಿಯ ಪ್ರಸಾರ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮದ್ಯಪಾನ ಮುಕ್ತ ಸಮಾಜ, ಸ್ವಚ್ಛತೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಕಪ್ಪತಗುಡ್ಡದ ಜೀವವೈವಿಧ್ಯ ರಕ್ಷಣೆ, ಗಿಡಮರ ಬೆಳೆಸುವ ಕಾರ್ಯಕ್ಕೆ ಮುಂದಾಳತ್ವ ವಹಿಸಿ. ನಿಸರ್ಗವನ್ನು ಪ್ರೀತಿಸುತ್ತಿದ್ದಾರೆ. 2018ರಲ್ಲಿ ಶ್ರೀಮಠಕ್ಕೆ ಬಂದ ನಂತರ ಕಳೆದ 8 ವರ್ಷಗಳಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಜನ-ಜಾಗೃತಿ, ವಚನ-ಜಾಗೃತಿ ಮಾಡಿದ್ದಾರೆ. ನೇರ ನುಡಿ, ನ್ಯಾಯ ನಿಷ್ಠುರತೆಯಿಂದ ಕೆಲವರ ವಿರೋಧ ಕಟ್ಟಿಕೊಂಡರೂ ಸತ್ಯ-ಸಿದ್ಧಾಂತದಿಂದ ಹಿಂದೆ ಸರಿದಿಲ್ಲ. ಹಿಂದೆ ಸರಿವಂತಹ ಸಂಸ್ಕೃತಿಯು ಇವರದಲ್ಲ. ಎಂತಹದೇ ಸಮಸ್ಯೆ ಬರಲಿ, ಬಂದರೂ ಅದನ್ನು ಸೌಮ್ಯವಾಗಿ ನಿವಾರಿಸುವ ಮಾನವೀಯತೆ ಗುಣಗಳು ಶ್ರೀಗಳು ಹೊಂದಿದ್ದಾರೆ. ಅದರಂತೆ ನಡೆದುಕೊಂಡು ಬರುತ್ತಿದ್ದಾರೆ. ಜೊತೆಗೆ
ಮಠದ ವತಿಯಿಂದ ನೂರಕ್ಕೂ ಹೆಚ್ಚು ಶಾಲೆ-ಕಾಲೇಜು, ಪ್ರಸಾದ ನಿಲಯಗಳನ್ನು ನಡೆಸಿ ಗ್ರಾಮೀಣ-ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಕನ್ನಡ, ವಚನ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದ್ದಾರೆ.
ಬಸವತತ್ವಗಳನ್ನು ಸಂಪೂರ್ಣ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ತೋಂಟದ ಸಿದ್ಧರಾಮ ಶ್ರೀಗಳು ಲಿಂಗಾಯತ ಪುಣ್ಯ ಪುರುಷರ ರತ್ನಮಾಲೆಯ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿ ರಾಜ್ಯದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರಗಳು ಮಾಡಲಾರದ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಈ ಮೂಲಕ ಶ್ರೀಗಳು ಜನರಿಗೆ ಜ್ಞಾನದಾಸೋಹ ನೀಡುತ್ತಿದ್ದಾರೆ.ಹಾಗೆಯೇ
ತೇರು-ಬೆಂಡು-ಬತ್ತಾಸುಗಳಿಗೆ ಸೀಮಿತವಾಗದ ತೋಂಟದಾರ್ಯ ಮಠದ ಜಾತ್ರೆ ಇಂದು ಜನೋಪಯೋಗಿ, ರಚನಾತ್ಮಕ ಕಾರ್ಯಗಳ ಕಣವಾಗಿದೆ. ಅನ್ನ-ಅಕ್ಷರ-ಆರೋಗ್ಯ-ಪರಿಸರ ದಾಸೋಹದ ಮೂಲಕ ಬಸವಣ್ಣನವರ ಕನಸಿನ ಸಮಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರೀಗಳು ಶ್ರಮಿಸುತ್ತಿದ್ದಾರೆ.
ಎಂಟು ವರ್ಷಗಳಿಂದ ಅವಿರತ ಸೇವೆ:
ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಶ್ರೀಮಠಕ್ಕೆ ಬಂದು, ನಾಡಿನ ಉದ್ದಗಲಕ್ಕೂ ಸಂಚರಿಸಿ ಭಕ್ತರ ಹೃನ್ಮನಗಳನ್ನು ಗೆದ್ದಿದ್ದಾರೆ. ಕಳೆದ 8 ವರ್ಷಗಳಿಂದ ಶ್ರೀಮಠದಲ್ಲಿ ಪ್ರತಿ ಸೋಮವಾರ ಸಂಜೆ ಶಿವಾನುಭವಗಳನ್ನು ಏರ್ಪಡಿಸುವ ಮೂಲಕ ನಗರದ ಜನರಲ್ಲಿ ವೈಚಾರಿಕ ಮನೋಭಾವನೆ ಜಾಗೃತಗೊಳಿಸಿದ್ದಾರೆ.
ಜಾತೀಯತೆ ಒಂದು ಪಿಡುಗಿನಂತೆ ದೇಶದಲ್ಲಿ ದಿನೇದಿನೇ ಬೆಳೆಯುತ್ತಿದೆ. ಜಾತ್ಯತೀತ ತತ್ವ, ಸಿದ್ಧಾಂತಗಳ ಬಗ್ಗೆ ಅನೇಕರು ವೇದಿಕೆಗಳಲ್ಲಿ ಮಾತನಾಡುತ್ತಾರೆ, ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಆದರೆ ಜಾತ್ಯತೀತ ಶಕ್ತಿಗಳ ಬಲವರ್ಧನೆಗೆ ತೋಂಟದಾರ್ಯ ಮಠ ಸಾಕಷ್ಟು ಕೊಡುಗೆ ನೀಡಿದೆ.
ನ್ಯಾಯ ನಿಷ್ಠುರತೆಗೆ ಹೆಸರಾದ ಶ್ರೀಗಳಿಗೆ ತಮ್ಮ ನೇರ ನಡೆ-ನುಡಿಯಿಂದ ಕೆಲವರ ವಿರೋಧ ಕಟ್ಟಿಕೊಳ್ಳಬೇಕಾದ ಸಂದರ್ಭಗಳು ಎದುರಾಗಿವೆ. ಆದರೂ ಶ್ರೀಗಳು ಈ ಭಾಗದಲ್ಲಿ ಕೋಮು ಸೌಹಾರ್ದತೆ, ಜಾತ್ಯತೀತ ತತ್ವಗಳ ಅನುಷ್ಠಾನದಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಕಪ್ಪತಗುಡ್ಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜೀವವೈವಿಧ್ಯ ರಕ್ಷಣೆ ಹಾಗೂ ಗಿಡಮರಗಳನ್ನು ಬೆಳೆಸುವಲ್ಲಿ ತೋಂಟದ ಮಠವು ತೋರುತ್ತಿರುವ ಕಾಳಜಿಗೆ ಇವರ ಮಾರ್ಗದರ್ಶನವೇ ಪ್ರಮುಖವಾಗಿದೆ.
ಮಾನವೀಯತೆಯ ತೋಂಟದಾರ್ಯ ಮಠ:
ಮಾನವೀಯತೆಯ ಮೌಲ್ಯಗಳಿಗೆ ತೋಂಟದಾರ್ಯ ಮಠ ಹೆಸರಾಗಿದೆ. ಅಷ್ಟೇ ಏಕೆ, ಜೀವಪರವಾದ, ಜನಪರವಾದ ಮಠವಾಗಿದೆ.
"ಮನುಷ್ಯ ಜಾತಿ ತಾನೊಂದೆ ವಲಂ" ಎಂದು ಪಂಪ ಹೇಳಿದಂತೆ ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸುವ ಮನಸ್ಸುಗಳು ಬೆಳೆಯಬೇಕಾಗಿದೆ. ನಮ್ಮ ದೇಶದಲ್ಲಿ ಹಸಿವು, ಅವಮಾನ, ಜಾತಿ ಈಗಲೂ ಅನೇಕರನ್ನು ಕಾಡುತ್ತಿವೆ. ಮಠ-ಮಂದಿರಗಳು ಧರ್ಮ-ಜಾತಿಗಳ ಸೋಂಕಿನಿಂದ ದೂರದಲ್ಲಿದ್ದು ಎಲ್ಲರನ್ನೂ ಸಮಾನವಾಗಿ ಕಾಣುವಂತಿರಬೇಕು. ನಿಸರ್ಗವನ್ನು ಪ್ರೀತಿಸಲಾರದವರು ಮನುಷ್ಯರನ್ನು ಎಂದಿಗೂ ಪ್ರೀತಿಸಲಾರರು. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಹೋರಾಡಿದ ಬಸವಣ್ಣನವರು ನಮಗೆ ಸದಾ ಆದರ್ಶರಾಗಿರಬೇಕು.ಅಂತೆಯೇ ಬಸವಾದಿ ಶರಣರ ಆಶಯದಂತೆ ಶ್ರೀಮಠ ಕೆಲಸ ಮಾಡುತ್ತಿದೆ ಮತ್ತು ಸಕಲ ಜೀವಾತ್ಮರ ಲೇಸಿಗಾಗಿ ದಿನನಿತ್ಯವೂ ದುಡಿಯುತ್ತಿದೆ. ಇಷ್ಟಲ್ಲದೆ
ರಾಜ್ಯದ ಬೇರೆಬೇರೆ ಭಾಗಗಳಲ್ಲಿ ನಡೆಯುವ ಇತರೆ ಜಾತ್ರೆಗಳಿಗೂ ಗದುಗಿನ ತೋಂಟದಾರ್ಯ ಮಠದ ಜಾತ್ರೆಗೂ ಸಾಕಷ್ಟು ಭಿನ್ನತೆಗಳಿವೆ. ಇತರೆ ಜಾತ್ರೆಗಳಂತೆ ಈ ಜಾತ್ರೆ ತೇರು, ಬೆಂಡು-ಬತ್ತಾಸುಗಳು, ಮನರಂಜನೆ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳ್ಳದೆ ಅನೇಕ ಜನೋಪಯೋಗಿ ಕಾರ್ಯಗಳಿಗೆ ಪ್ರೇರಣದಾಯಕವಾಗಿದೆ. ಈ ಜಾತ್ರೆಯಲ್ಲಿ ಸಮಾಜಕ್ಕೆ ಉಪಯುಕ್ತವಾದ ರಚನಾತ್ಮಕ ಕೆಲಸಗಳು ನಡೆಯುವುದರಿಂದ ತೋಂಟದಾರ್ಯ ಮಠ ಇತರೆ ಎಲ್ಲ ನಾಡಿನ ಮಠಗಳಿಗೆ ಮಾದರಿಯಾಗಿದೆ.
ಬಸವ ತತ್ವಕ್ಕಾಗಿ ಸಿದ್ಧರಾಮ ಶ್ರೀಗಳ ಕೊಡುಗೆ:
ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಬಸವಾದಿ ಶರಣರ ವಚನಗಳನ್ನು ಮತ್ತು ಬಸವ ತತ್ವಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸಂತರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಬೋಧಿಸಿದ ಬಸವಣ್ಣನವರ ಆದರ್ಶಗಳನ್ನು ಜನಸಾಮಾನ್ಯರಿಗೆ ತಿಳಿಸುತ್ತಿದ್ದಾರೆ.
ಮಠದಲ್ಲಿ ನಿತ್ಯವೂ ಶಿವಾನುಭವ ಮಂಟಪದ ಕಾರ್ಯಕ್ರಮಗಳನ್ನು ನಡೆಸಿ, ವಚನಗಳ ತಾತ್ವಿಕ ಚಿಂತನೆಗಳನ್ನು ಮನೆ-ಮನೆಗೆ ಮುಟ್ಟಿಸುತ್ತಿದ್ದಾರೆ. ಬಸವ ತತ್ವದ ಅಸ್ಮಿತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವಕ್ಕಾಗಿ ನಡೆಯುವ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಶರಣರ ವಿಚಾರಗಳನ್ನು ಪ್ರಚುರಪಡಿಸುವುದು, ವಚನ ಸಾಹಿತ್ಯದ ಪ್ರಕಟಣೆ ಮತ್ತು ನಾಡಿನಾದ್ಯಂತ ನಡೆಯುವ ಬಸವ ಸಂಸ್ಕೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಮೂಢನಂಬಿಕೆಗಳನ್ನು ವಿರೋಧಿಸಿ, ಬಸವಣ್ಣನವರ ಕಾಯಕ ತತ್ವ ಮತ್ತು ವೈಚಾರಿಕತೆಯ ಆಧಾರದ ಮೇಲೆ ಪ್ರಗತಿಪರ ಚಿಂತನೆಗಳನ್ನು ಜನರಲ್ಲಿ ಬೆಳೆಸುತ್ತಿದ್ದಾರೆ.
ಜಗತ್ತಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೊಟ್ಟಮೊದಲು ಪ್ರತಿಪಾದಿಸಿ, ಅವುಗಳನ್ನು ಅನುಷ್ಠಾನಕ್ಕೆ ತಂದವರು ಬಸವಣ್ಣನವರು. ಇದರಂತೆ ಶ್ರೀಗಳು ಸಾಮಾಜಿಕ ನ್ಯಾಯ, ಜಾತಿ-ಮತ-ಪಂಥಗಳ ಭೇದ ಮರೆತು ಸಮಸಮಾಜ ನಿರ್ಮಾಣ ಮಾಡಲು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
ಹಾಗೆಯೇ ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಶಾಪ. ಆ ಶಾಪದಿಂದ ಮುಕ್ತವಾದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ. ವ್ಯಸನಮುಕ್ತ, ಜಾತಿ-ಮತ-ಪಂಥ, ಲಿಂಗ ಭೇದಗಳಿಂದ ಮುಕ್ತವಾಗಿರುವ ಸಮಾಜ ನಿರ್ಮಾಣ ಮಾಡುವುದೇ ಸಿದ್ಧರಾಮ ಶ್ರೀಗಳ ಪ್ರಮುಖ ಗುರಿಯಾಗಿದೆ.
"ಲಿಂಗಾಯತರು ಎಚ್ಚರಗೊಳ್ಳುವ ಸಮಯ ಬಂದಿದೆ" ಎನ್ನುತ್ತಾರೆ ಶ್ರೀಗಳು:
ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಿಲ್ಲ. ಆದರೆ ಲಿಂಗಾಯತ ಎಂದು ಬರೆಸುವ ಜನರ ಕೊರತೆಯಿಂದಾಗಿ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಯಾವಾಗಲೂ ಹೇಳುತ್ತಿರುತ್ತಾರೆ.
"ಲಿಂಗಾಯತರ ಸಂಖ್ಯೆ ಕಡಿಮೆಯಾಗಬಾರದು. ಯಾಕೆಂದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರುತ್ತದೆ, ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ. ಆದ್ದರಿಂದ ಲಿಂಗಾಯತ ಎಂದು ಬರೆಸಲಾಗದೇ ಬೇರೆ ಏನೋ ಬರೆಸುತ್ತ ಹೋದರೆ ಲಿಂಗಾಯತರು ಮುಂಬರುವ ಎಲ್ಲ ಅವಕಾಶಗಳಿಂದ ವಂಚಿತರಾಗುತ್ತಾರೆ" ಎಂಬುದನ್ನು ಮರೆಯಬಾರದು ಎಂದು ಲಿಂಗಾಯತ ಸಮುದಾಯದಲ್ಲಿ ಶ್ರೀಗಳು ವಿನಂತಿಸಿಕೊಂಡಿದ್ದಾರೆ.
"ಈಗಲಾದರೂ ಲಿಂಗಾಯತರು ತಮ್ಮ ತಮ್ಮಲ್ಲಿರುವ ಸ್ವಾರ್ಥ-ಪ್ರತಿಷ್ಠೆಗಳು ಬದಿಗೊತ್ತುವ ಮುಖಾಂತರ ಎಚ್ಚರಗೊಳ್ಳುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ಎಚ್ಚರಗೊಳ್ಳದಿದ್ದರೆ ಮುಂದಿನ ಹತ್ತು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಲಿಂಗಾಯತರು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ತಮ್ಮ ಜಾತಿಯ ಹೆಸರನ್ನು ಬರೆಸಬೇಕು. ಇದರಿಂದ ಲಿಂಗಾಯತರ ನಿಖರ ಸಂಖ್ಯೆ ತಿಳಿಯುತ್ತದೆ" ಎಂಬುದು ಶ್ರೀಗಳ ಅಂತಃಕರಣದ ಕಳಕಳಿಯಾಗಿದೆ.
ಸಿದ್ಧರಾಮ ಶ್ರೀಗಳ ಶೈಕ್ಷಣಿಕ ಸೇವೆ ಅನನ್ಯ:
ಗದಗದ ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನಾಡಿನ ಪ್ರಮುಖ ಶಿಕ್ಷಣ ತಜ್ಞರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಶೈಕ್ಷಣಿಕ ಸೇವೆಗಳ ಕೊಡುಗೆ ಅನನ್ಯ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಶ್ರೀಗಳ ಮಾರ್ಗದರ್ಶನದಲ್ಲಿ, ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ತೋಂಟದಾರ್ಯ ಮಠದ ವತಿಯಿಂದ ಕಾರ್ಯಾಚರಿಸುತ್ತಿವೆ. ಈ ಸಂಸ್ಥೆಗಳು ಮುಖ್ಯವಾಗಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಸಾವಿರಾರು ವಿದ್ಯಾರ್ಥಿಗಳು ಈ ಮಠದ ಅಧೀನದಲ್ಲಿರುವ ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ (ಪ್ರಸಾದ ನಿಲಯ) ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕೇವಲ ಸಾಮಾನ್ಯ ಶಿಕ್ಷಣವಷ್ಟೇ ಅಲ್ಲದೆ, ಕನ್ನಡ ಭಾಷೆಯ ಉಳಿವು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮಠದ ಶಿಕ್ಷಣ ಸಂಸ್ಥೆಗಳು ಮಾದರಿಯಾಗಿವೆ.
ಮಠದ ವತಿಯಿಂದ ಕಾಲಗರ್ಭದಲ್ಲಿ ಮರೆಯಾದ ಸಾಧಕರ ಚರಿತ್ರೆಗಳು ಹಾಗೂ ಬಸವ ಸಂಸ್ಕೃತಿಗೆ ಸಂಬಂಧಿಸಿದ ನೂರಾರು ಕೃತಿಗಳನ್ನು ಪ್ರಕಟಿಸಲಾಗಿದೆ. ಪ್ರತಿಯೊಬ್ಬರು ಕನ್ನಡವನ್ನು ಕಲಿಯಬೇಕು ಹಾಗೂ ಮನೆಯಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಬೇಕು ಎಂದು ಶ್ರೀಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ
ವಚನ ಸಾಹಿತ್ಯ ಮತ್ತು ಕಾಯಕ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಇವರು ನಿರಂತರ ಶ್ರಮಿಸುತ್ತಿದ್ದಾರೆ. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಮಂತ್ರ ಎಂದು ನಂಬಿರುವ ಶ್ರೀಗಳು, ಮೌಢ್ಯಗಳನ್ನು ತೊಡೆದುಹಾಕಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ಕರೆ ನೀಡುತ್ತಿದ್ದಾರೆ. ಹಾಗೆಯೇ
ಶ್ರೀಗಳು ನಾಡಿನ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಹಾಗೂ ರಾಜ್ಯದ ವಿವಿಧೆಡೆ ನಡೆಯುವ ವಚನ ಕಮ್ಮಟಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಗೌರವ ನುಡಿ:
12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ತತ್ವಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಶ್ರೀಗಳ ಪಾತ್ರ ದೊಡ್ಡದು. ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಸರ್ವ ಧರ್ಮಗಳ ಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶವನ್ನು ನಿರಂತರವಾಗಿ ಸಾರುತ್ತಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಉತ್ತಮ ಸಂಸ್ಕಾರ ಸಿಗಬೇಕು ಎಂಬುದು ಇವರ ಆಶಯವಾಗಿದೆ. ಶ್ರೀಗಳ ದೈನಂದಿನ ಪ್ರವಚನಗಳು, ಸಾಮಾಜಿಕ ಚಿಂತನೆಗಳು ನಾಡಿಗೆ ಪ್ರೇರಣದಾಯಕ.
ಮೂಢನಂಬಿಕೆಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸುವುದು ಹಾಗೂ ವೈಚಾರಿಕ ಚಿಂತನೆಗಳನ್ನು ಬಿತ್ತುವ ಮೂಲಕ ಸಮಾಜವನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿದ್ದಾರೆ. ಮಠದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಬಡವರಿಗೆ ಅನ್ನದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಾರಣ
ಶ್ರೀಗಳ ಸರಳತೆ, ಕಾಯಕನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳು ಇಡೀ ನಾಡಿನ ಜನರಿಗೆ ಮತ್ತು ಮಠಾಧೀಶರಿಗೆ ಮಾದರಿಯಾಗಿವೆ.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
What's Your Reaction?