ನಿಕ್ಕರ್ ಹಾಕಿಕೊಳ್ಳುವುದೇ ತಪ್ಪೇ? ಬಿಜೆಪಿ ಮುಖಂಡರ ವಿರುದ್ಧ ರೈತ ಚಂದ್ರಯ್ಯ ಆಕ್ರೋಶ
ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಮುಖಂಡರು ಕ್ಷಮೆಯಾಚಿಸಬೇಕು: ಚಂದ್ರಯ್ಯ ಆಗ್ರಹ
ಬೇತಮಂಗಲ: ವೆಂಗಸಂದ್ರ ಗ್ರಾಮದ ಸರ್ವೇ ನಂ. 324ರ ಗ್ರಾಮ ಠಾಣೆ ವಿವಾದಿತ ಜಮೀನಿಗೆ ಸಂಬಂಧಿಸಿದಂತೆ ತಮ್ಮ ಸ್ವಾಧೀನದಲ್ಲಿರುವ ಜಮೀನಿನ ಕುರಿತು ರೈತ ಚಂದ್ರಯ್ಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಈ ವೇಳೆ ಬಿಜೆಪಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಬ್ಬ ರೈತ ನಿಕ್ಕರ್ ಹಾಕಿಕೊಳ್ಳುವುದೇ ತಪ್ಪೇ? ನನ್ನ ವಿರುದ್ಧ ಅವಹೇಳನಕಾರಿ ಹಾಗೂ ಏಕವಚನದಲ್ಲಿ ಮಾತನಾಡಿರುವ ಬಿಜೆಪಿ ಮುಖಂಡರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಗ್ರಾಮ ಠಾಣೆ ಜಮೀನು ವಿವಾದದ ಕುರಿತು ಬಿಜೆಪಿ ಮುಖಂಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಚಂದ್ರಯ್ಯ, ಕಳೆದ ಸುಮಾರು 100 ವರ್ಷಗಳಿಂದ ತಮ್ಮ ಕುಟುಂಬ ಈ ಜಾಗವನ್ನು ಸ್ವಾಧೀನದಲ್ಲಿದ್ದೇವು ಎಂದು ಹೇಳಿದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಗ್ರಾಮ ಠಾಣೆ ಜಮೀನಿಗೆ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಿದ್ದು, ಅದರಂತೆ ಗ್ರಾಮಸಭೆ ನಡೆಸಿ ಗ್ರಾಮಸ್ಥರ ಒಪ್ಪಿಗೆ ಪಡೆದು ನಿರ್ಣಯ (ರೆಸಲ್ಯೂಷನ್) ಅಂಗೀಕರಿಸಲಾಗಿತ್ತು, ನಂತರ 2012ರಲ್ಲಿ ಗ್ರಾಮಸ್ಥರು ನಿವೇಶನ ರಹಿತರಿಗೆ ಜಮೀನು ನೀಡುವ ಉದ್ದೇಶದಿಂದ ಖಾತೆ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಆಗಿನ ಶಾಸಕ ವೈ. ಸಂಪಂಗಿ ಅವರನ್ನು ಭೇಟಿ ಮಾಡಿದಾಗ, ನೀನು ನ್ಯಾಯಾಲಯಕ್ಕೆ ಹೋಗು ಎಂದು ಸಲಹೆ ನೀಡಿದ್ದರು. ಅದರಂತೆ ನ್ಯಾಯಾಲಯಕ್ಕೆ ಹೋದ ಬಳಿಕ ತಡೆ ಆದೇಶ ದೊರೆಯಿತು ಎಂದು ತಿಳಿಸಿದರು.
ಶಾಸಕಿ ರೂಪಕಲಾಗೆ ವಿವಾದ ಜಮೀನಿಗೆ ಯಾವುದೇ ಸಂಬಂಧವಿಲ್ಲ: ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ, ಕಾನೂನು ಪ್ರಕ್ರಿಯೆಯ ಮೂಲಕ ಸರ್ಕಾರ ಮತ್ತು ನ್ಯಾಯಾಲಯ ಏನು ತೀರ್ಮಾನ ಕೈಗೊಳ್ಳುತ್ತವೆಯೋ ಅದನ್ನು ಗೌರವಿಸಿ ಪಾಲಿಸುತ್ತೇನೆ. ಈ ವಿವಾದಕ್ಕೆ ಹಾಲಿ ಶಾಸಕಿ ರೂಪಕಲಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುಮಾರು 10 ವರ್ಷಗಳ ಕಾಲ ಮಾಜಿ ಶಾಸಕ ವೈ. ಸಂಪಂಗಿ ಅವರೊಂದಿಗೆ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ದ್ವೇಷದ ರಾಜಕಾರಣದಿಂದ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.
ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಕರಾಬು ಜಮೀನು ಅಕ್ರಮವಾಗಿ ಒತ್ತುವರಿಯಾಗಿದ್ದು, ಅಂತಹ ಎಲ್ಲ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿದರೆ ತಾನು ಕೂಡ ತನ್ನ ಜಾಗವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಚಂದ್ರಯ್ಯ ಹೇಳಿದರು.