ಮುಚ್ಚಿದ ಶತಮಾನ ಕಂಡ ಅಂಚೆ ಕಚೇರಿ ಜನ ಆಕ್ರೋಶ

ಮುಚ್ಚಿದ ಶತಮಾನ ಕಂಡ ಅಂಚೆ ಕಚೇರಿ ಜನ ಆಕ್ರೋಶ

ಕೆ.ಜಿ.ಎಫ್. :(ಕೋಲಾರ ಚಿನ್ನದ ಗಣಿ) ನಲ್ಲಿ ಸುಮಾರು 119 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಐತಿಹಾಸಿಕ ಚಾಂಪಿಯನ್ ರೀಫ್ಸ್ ಅಂಚೆ ಕಚೇರಿಯು ಅಧಿಕೃತವಾಗಿ ಬಂದ್ ಆಗಿದ್ದು, ತನ್ನೆಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ.

ಪ್ರಮುಖ ಇತಿಹಾಸ ಮತ್ತು ಹಿನ್ನೆಲೆ:

ಆರಂಭ: ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ 1907 ರಲ್ಲಿ ಈ ಅಂಚೆ ಕಚೇರಿಯನ್ನು ಆರಂಭಿಸಿದ್ದರು. ಇದು ಕೋಲಾರ ಜಿಲ್ಲೆಯ ಅತ್ಯಂತ ಹಳೆಯ ಅಂಚೆ ಕಚೇರಿಗಳಲ್ಲಿ ಒಂದಾಗಿದೆ.

ಮಹಾಯುದ್ಧದ ಕಾಲ: ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಟೆಲಿಗ್ರಾಂ ಮೂಲಕ ಯುದ್ಧದ ಮಾಹಿತಿ ಪಡೆಯಲು ಇದನ್ನು ಬಳಸುತ್ತಿದ್ದರು. ನಂತರ ರೇಡಿಯೋ ಸೇವೆಗಳ ನೋಂದಣಿಗೂ ಈ ಕಚೇರಿಯೇ ಬಳಕೆಯಾಗುತ್ತಿತ್ತು.

ಕಾರ್ಮಿಕರ ತೆರಿಗೆ: ಗಣಿ ಕಾರ್ಮಿಕರು ತಾವು ಬಳಸುತ್ತಿದ್ದ ಸೈಕಲ್‌ಗಳಿಗೆ ತೆರಿಗೆಯನ್ನು ಸಹ ಇದೇ ಅಂಚೆ ಕಚೇರಿಯಲ್ಲಿ ಪಾವತಿಸುತ್ತಿದ್ದರು.

ವಿಶೇಷ ಸ್ಟಾಂಪ್: 1980 ರಲ್ಲಿ ಚಿನ್ನದ ಗಣಿಯ ಶತಮಾನೋತ್ಸವದ ಸಂದರ್ಭದಲ್ಲಿ ಗಣಿ ಕಾರ್ಮಿಕನ ಗುರುತಿರುವ ವಿಶೇಷ ಸ್ಟಾಂಪ್ ಬಿಡುಗಡೆ ಮಾಡಲಾಗಿತ್ತು.

ಮುಚ್ಚಲು ಕಾರಣಗಳೇನು?

ಬಿ.ಜಿ.ಎಂ.ಎಲ್. (BGML) ಮುಚ್ಚಿದ ಮೇಲೆ ಈ ಅಂಚೆ ಕಚೇರಿಯಲ್ಲಿ ವಹಿವಾಟಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೇವಲ ಸರ್ಕಾರದ ಯೋಜನೆಗಳ ಫಲಾನುಭವಿಗಳು ಮಾತ್ರ ಇಲ್ಲಿಗೆ ಬರುತ್ತಿದ್ದರು.

ಹತ್ತಿರದಲ್ಲೇ ಇರುವ ಊರಿಗಾಂ ಅಂಚೆ ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆಯಿರುವುದರಿಂದ, ಈ ಚಾಂಪಿಯನ್ ರೀಫ್ಸ್ ಕಚೇರಿಯ ಅವಶ್ಯಕತೆ ಇಲ್ಲ ಎಂದು ಅಂಚೆ ಇಲಾಖೆ ನಿರ್ಧರಿಸಿತು.

6 ತಿಂಗಳ ಹಿಂದೆಯೇ ಇದನ್ನು ಮುಚ್ಚಲು ಪ್ರಯತ್ನಿಸಲಾಗಿತ್ತಾದರೂ, ಸಾರ್ವಜನಿಕರ ವಿರೋಧದಿಂದಾಗಿ ನಿರ್ಧಾರವನ್ನು ಮುಂದೂಡಲಾಗಿತ್ತು.

ಪ್ರಸ್ತುತ ಸ್ಥಿತಿ:

ಸಂಸದ ಮುನಿಸ್ವಾಮಿ ಅವರು ಈ ಪಾರಂಪರಿಕ ಅಂಚೆ ಕಚೇರಿಯನ್ನು ಉಳಿಸಿಕೊಳ್ಳುವಂತೆ ಸಂಸತ್ತಿನಲ್ಲಿ ಕೋರಿದ್ದರೂ, ಅಂಚೆ ಇಲಾಖೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣ ಈ ಶತಮಾನದ ಕಚೇರಿ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ.

ಈ ಕಚೇರಿಯ ವ್ಯಾಪ್ತಿಯಲ್ಲಿದ್ದ 563117 ಪಿನ್ ಕೋಡ್ ಕೂಡ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.  

ಅಂಚೆ ಕಚೇರಿ ಮುಚ್ಚಿರುವುದನ್ನು ತೀವ್ರವಾಗಿ ಖಂಡಿಸಿದ ಸಾಮಾಜಿಕ ಹೋರಾಟಗಾರರು. ಅನ್ಬುರಸನ್. ಕೆಜಿಎಫ್ ತನ್ನದೇ ಆದ ಇತಿಹಾಸ ಹೊಂದಿದ್ದು , ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕು. ಅಲ್ಲೇ ಕಚೇರಿಗಳನ್ನು ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈಗ ಇರುವ ಹಳೆಯ ಕಟ್ಟಡಗಳಲ್ಲಿರುವ ಕಚೇರಿಗಳು. ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಎಂದರು.