ಪಂತನಹಳ್ಳಿಯ ಸ.ನಂ.104/1ರ ಜಾಗದ ವಿವಾದ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕಿ ರೂಪಕಲಾ

ಪಂತನಹಳ್ಳಿಯ ಸ.ನಂ.104/1ರ ಜಾಗದ ವಿವಾದ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕಿ ರೂಪಕಲಾ
ಚಿತ್ರ 01: ಪಂತನಹಳ್ಳಿಯ ಸ.ನಂ.104/1ರ ಜಾಗದ ವಿವಾದಕ್ಕೆ ಸಂಬಂದಿಸಿದಂತೆ ಶಾಸಕಿ ರೂಪಕಲಾ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

         ಬೇತಮಂಗಲ: ಎನ್‌.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂತನಹಳ್ಳಿ ಗ್ರಾಮದ ಸರ್ವೆ ನಂ.104/1ರ ಜಾಗಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ವೆ ನಂ.104/1ರಲ್ಲಿ ಒಟ್ಟು 2 ಎಕರೆ 22 ಗುಂಟೆ ಜಮೀನಿದ್ದು, ಈ ಪೈಕಿ ಸುಮಾರು 2 ಎಕರೆ ಪ್ರದೇಶದಲ್ಲಿ ಹಲವು ಕುಟುಂಬಗಳು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ಮೂಲ ಖಾತೆದಾರರಿಂದ ಜಮೀನು ಪರಭಾರೆಯಾಗಿದ್ದರೂ, ಆ ಸಂದರ್ಭದಲ್ಲಿ ಖಾತೆ ಬದಲಾವಣೆ ಆಗಿರಲಿಲ್ಲ. ಬಳಿಕ ಜಮೀನು ಮತ್ತೊಬ್ಬರಿಗೆ ಪರಭಾರೆಯಾಗಿ, ಅವರಿಂದ ಪ್ರಸ್ತುತ ವಾಸಿಸುತ್ತಿರುವ ಕುಟುಂಬಗಳ ಹಿರಿಯರು ಖರೀದಿಸಿದ್ದರು ಎನ್ನಲಾಗಿದೆ.

ಜಮೀನಿನ ಖಾತೆ ಮಾಡಿಸಿಕೊಳ್ಳದಿದ್ದರೂ, ಗ್ರಾಮ ಪಂಚಾಯಿತಿಯಲ್ಲಿ ಮನೆಗಳ ಖಾತೆ ಮಾಡಿಸಿಕೊಂಡು ಹಲವು ವರ್ಷಗಳಿಂದ ಕಂದಾಯ ಪಾವತಿಸುತ್ತಾ ಕುಟುಂಬಗಳು ವಾಸಿಸುತ್ತಿವೆ. ಈ ನಡುವೆ ಮೂಲ ಖಾತೆದಾರರ ವಾರಸುದಾರರು ಪಹಣಿಯಲ್ಲಿ ತಮ್ಮ ಹೆಸರು ಇರುವುದನ್ನು ಆಧರಿಸಿ ದಾನಪತ್ರದ ಮೂಲಕ ಇತ್ತೀಚೆಗೆ ಖಾತೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಖಾತೆ ಮಾಡಿಕೊಂಡ ಬಳಿಕ ಜಮೀನಿನ ಅಳತೆಗೆ ಮುಂದಾದಾಗ, ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳು ತಕರಾರು ವ್ಯಕ್ತಪಡಿಸಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿಯೂ ವಾಸಸ್ಥಳದಲ್ಲಿರುವ ಕುಟುಂಬಗಳ ಪರವಾಗಿ ತೀರ್ಪು ಬಂದಿರುವುದಾಗಿ ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ನಮಗೆ ಬೇರೆ ಜಾಗವಿಲ್ಲ, ನಮ್ಮನ್ನು ಕಾಪಾಡಿ: 
ಜಮೀನಿನ ಖಾತೆ ಮಾಡಿಕೊಂಡಿರುವವರು ಪದೇಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು, ಹಲವು ವರ್ಷಗಳಿಂದ ಇದೇ ಜಾಗದಲ್ಲಿ ವಾಸಿಸುತ್ತಿದ್ದು, ಇದನ್ನು ಹೊರತುಪಡಿಸಿ ತಮ್ಮ ಬಳಿ ಬೇರೆ ಜಾಗವಿಲ್ಲ. ಸಮಸ್ಯೆ ಬಗೆಹರಿಸಿ ನಮ್ಮನ್ನು ರಕ್ಷಿಸಬೇಕು ಎಂದು ಶಾಸಕಿ ರೂಪಕಲಾ ಅವರಿಗೆ ಮನವಿ ಮಾಡಿದರು.

ಸ್ಥಳೀಯರ ಮನವಿ ಆಲಿಸಿದ ಶಾಸಕರು, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿಕೊಂಡು ಇಲ್ಲಿ ವಾಸಿಸುತ್ತಿದ್ದೀರಿ. ತಿಳುವಳಿಕೆಯ ಕೊರತೆಯಿಂದ ದಾಖಲೆಗಳನ್ನು ಸರಿಪಡಿಸಿಕೊಂಡಿಲ್ಲ. ನಿಮ್ಮ ಹಿರಿಯರು ಬಹಳ ಹಿಂದೆಯೇ ಜಮೀನು ಖರೀದಿಸಿರುವುದಾಗಿ ತಿಳಿಸಿದ್ದೀರಿ. ಯಾವುದೇ ಕಾರಣಕ್ಕೂ ನಿಮಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ದಾಖಲೆ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಸೂಚನೆ:
ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪಕ್ಕಾ ದಾಖಲೆ ದೊರೆಯುವಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಶಾಸಕಿ ಸೂಚಿಸಿದರು.
ಅಲ್ಲಿಯವರೆಗೆ ವಾಸಿಸುವ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲು ಪೊಲೀಸ್ ಅಧಿಕಾರಿಗಳಿಗೂ ನಿರ್ದೇಶನ ನೀಡಿದರು.
ಇದಲ್ಲದೆ, ದಾಖಲೆಗಳನ್ನು ಸರಿಪಡಿಸಿದ ನಂತರ ಸದರಿ ವಸತಿ ಪ್ರದೇಶವನ್ನು ಗ್ರಾಮಠಾಣ ವ್ಯಾಪ್ತಿಗೆ ಸೇರಿಸಿ, ನಿವಾಸಿಗಳಿಗೆ ಖಾಯಂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಸಕಿ ರೂಪಕಲಾ ಎಂ. ಶಶಿಧರ್ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಾಯಿತ್ರಿ, ತಾಪಂ  ಕಾರ್ಯನಿರ್ವಾಹಕ ಅಧಿಕಾರಿ, ವೆಂಕಟೇಶಪ್ಪ, ಪಿಡಿಒ ಮಂಜುನಾಥ್, ಪಿಎಸೈ ತ್ಯಾಗರಾಜ್, ಗ್ರಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ಎಂಬಿಎ ಕೃಷ್ಣಪ್ಪ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.