ಮಹದೇವಪುರ ಕ್ಷೇತ್ರದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಸಂಪನ್ನ

ಮಹದೇವಪುರ ಕ್ಷೇತ್ರದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಸಂಪನ್ನ

          ಬೆಂಗಳೂರು, ಆ. 29: ಕನ್ನಡ ಸಾಹಿತ್ಯ ಪರಿಷತ್ತು ಮಹದೇವಪುರ ವಿಧಾನಸಭಾ ಕ್ಷೇತ್ರ ಘಟಕ, ಬೆಂಗಳೂರು ನಗರ ಜಿಲ್ಲೆ ವತಿಯಿಂದ ಆಯೋಜಿಸಲಾದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಶನಿವಾರ, ಆಗಸ್ಟ್ 29ರಂದು ವರ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.30 ಗಂಟೆಗೆ ಟಿ. ವೀರಭದ್ರಪ್ಪ, ಹೆಚ್.ಎಸ್. ಯಶವಂತ್ ಹಾಗೂ ಸುನಿಲ್ ಕುಮಾರ್ ಅವರು ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮದ ಸಾರ್ವಜನಿಕರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು.

ನಂತರ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಶ್ರೀಮತಿ ಕೃಷ್ಣವೇಣಿ ಅವರು ಕನ್ನಡದ ಹಿರಿಮೆ ಮತ್ತು ಪರಂಪರೆಯ ಕುರಿತು ಮಾತನಾಡುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ)ದ ಕನ್ನಡ ರಾಘು, ಸ್ವಾಮಿ, ಕರವೇ ಸಿಂಹ ಸೈನ್ಯ, ವಿವಿಧ ಕನ್ನಡಪರ ಸಂಘಟನೆಗಳು, ಆಟೋ ಚಾಲಕರ ಸಂಘಗಳು ಹಾಗೂ ಅನೇಕ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಗೌರವ ಕಾರ್ಯದರ್ಶಿ ‘ಕನ್ನಡದ ಭಕ್ತ’ ಕಿರಣ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುತ್ತಾ ಗೀತೆಯನ್ನು ಪ್ರಸ್ತುತಪಡಿಸಿದರು.

ಆಶಯ ನುಡಿಗಳನ್ನಾಡಿದ ಕ್ಷೇತ್ರಾಧ್ಯಕ್ಷ ಟಿ. ವೀರಭದ್ರಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸುಧೀರ್ಘ ಇತಿಹಾಸ ಹಾಗೂ ತಮ್ಮ ಪರಿಷತ್ತಿನ ಒಡನಾಟವನ್ನು ಸ್ಮರಿಸಿದರು. ಪ್ರತಿಯೊಬ್ಬ ಕನ್ನಡಿಗರೂ ಪರಿಷತ್ತಿನ ಕಾರ್ಯಚಟುವಟಿಕೆಗಳ ಪರಿಚಯ ಹೊಂದಿ, ನಾಡು-ನುಡಿ-ಸಂಸ್ಕೃತಿಯ ಅರಿವು ಬೆಳೆಸಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೋಟಗಾನಹಳ್ಳಿ ರಾಮಯ್ಯ ಅವರಿಂದ ಸಮ್ಮೇಳನಾಧ್ಯಕ್ಷ ಡಾ. ಸಿ. ಚಂದ್ರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜ ಹಸ್ತಾಂತರ ನಡೆಯಿತು.

ಈ ಸಂದರ್ಭದಲ್ಲಿ ಡಾ. ಸಿ. ಚಂದ್ರಪ್ಪ ಅವರ ‘ವೀಸಾದ ನಿರೀಕ್ಷೆಯಲ್ಲಿ’ ಹಾಗೂ ಕಸಾಪ ಮಹದೇವಪುರ ಕ್ಷೇತ್ರ ಘಟಕದ ಪ್ರಕಾಶನದ ‘ದೊಡ್ಡಗುಬ್ಬಿ ಐತಿಹ್ಯ ಮತ್ತು ಇತಿಹಾಸ’ (ಆದಪ್ಪ ಪಾಸೋಡಿ) ಎಂಬ ಎರಡು ಕೃತಿಗಳನ್ನು ಎಂ. ಪ್ರಕಾಶಮೂರ್ತಿ ಅವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಕನ್ನಡ ಉಳಿದರೆ ಕರ್ನಾಟಕದಲ್ಲಿಯೂ ಕನ್ನಡ ಉಳಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಸಿ. ಚಂದ್ರಪ್ಪ ಅವರು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ತುರ್ತಾಗಿ ಕೈಗೊಳ್ಳಬೇಕಾದ ಹಲವಾರು ಕಾರ್ಯಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಮಹದೇವಪುರ ಕ್ಷೇತ್ರದಲ್ಲಿ ಶೀಘ್ರವೇ ಒಂದು ಕನ್ನಡ ಭವನ ನಿರ್ಮಾಣವಾಗಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ರಾಮಣ್ಣ ಹೆಚ್. ಕೋಡಿಹೊಸಳ್ಳಿ, ಗಾಯತ್ರಿ ರಾಮಣ್ಣ, ಯಮಲೂರು ವೆಂಕಟಪ್ಪ ಹಾಗೂ ನಿವೃತ್ತ ಡಿವೈಎಸ್‌ಪಿ ಎನ್.ಎಂ. ಈಟರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರ್ವಹಣೆಯನ್ನು ಚಂದ್ರಶೇಖರ ಮೂರ್ತಿ ಹಾಗೂ ಗೌರವ ಕಾರ್ಯದರ್ಶಿ ಉಪೇಂದ್ರಕುಮಾರ್ ಎಂ.ಆರ್. ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ವಿವಿಧ ಗೋಷ್ಠಿಗಳಲ್ಲಿ ಚಿಂತನ-ಮಂಥನ

ಮೊದಲ ಗೋಷ್ಠಿಯಲ್ಲಿ ಸಾಹಿತಿ ಹುಸ್ಕೂರು ಮುನಿಯಪ್ಪ ಅವರು “ಶಿಕ್ಷಣದಲ್ಲಿ ಕನ್ನಡ ಭಾಷೆಯ ಪಾತ್ರ” ಕುರಿತು ಉಪನ್ಯಾಸ ನೀಡಿದರು.

ಎರಡನೇ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಮಂಜುನಾಥಯ್ಯ ಅವರು “ಕನ್ನಡದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ” ಎಂಬ ವಿಷಯದ ಕುರಿತು ಉದಾಹರಣೆಗಳೊಂದಿಗೆ ಪತ್ರಕರ್ತರ ಜವಾಬ್ದಾರಿಗಳನ್ನು ವಿವರಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಒಂಬತ್ತು ಮಂದಿ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಸತ್ಯಮಂಗಲ ಮಹದೇವ ಅವರು ಕಾವ್ಯದ ಮೂಲ ಆಶಯ ಮತ್ತು ಸಾಮಾಜಿಕ ಹೊಣೆಗಾರಿಕೆಗಳ ಕುರಿತು ಬೆಳಕು ಚೆಲ್ಲಿದರು.

ಮೂರನೇ ಗೋಷ್ಠಿಯಲ್ಲಿ ಅರುಣ್ ಪುಷ್ಪದಂತ ಅವರು “ಶಿವರಾಮ ಕಾರಂತರ ಕಾದಂಬರಿಗಳಲ್ಲಿನ ವೈಚಾರಿಕತೆ” ಕುರಿತು ಸಂಕ್ಷಿಪ್ತವಾಗಿ ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭ ಹಾಗೂ ಸನ್ಮಾನ

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್, ಖ್ಯಾತ ಮನೋವೈದ್ಯರು ಹಾಗೂ ವೈದ್ಯ-ಸಾಹಿತಿಗಳು, ಸಮಾರೋಪ ಭಾಷಣಕಾರರಾಗಿ ಆಗಮಿಸಿ ಕನ್ನಡದ ಕೆಲಸಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ವಿವಿಧ ಮಾರ್ಗಗಳ ಕುರಿತು ಮಾತನಾಡಿದರು. ಜೊತೆಗೆ ಮಾನಸಿಕ ಆರೋಗ್ಯದ ಮಹತ್ವವನ್ನು ವಿವರಿಸಿ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ‘ನೆಮ್ಮದಿಗಾಗಿ ಮನಸಿನ ಮ್ಯಾನೇಜ್ಮೆಂಟ್’ ಕೃತಿಯನ್ನು ಡಾ. ಸಿ.ಆರ್. ಚಂದ್ರಶೇಖರ್ ಹಾಗೂ ‘ಮಹತ್ವ’ ಕವನ ಸಂಕಲನವನ್ನು ಉಪೇಂದ್ರಕುಮಾರ್ ಎಂ.ಆರ್. ಮತ್ತು ‘ಬೀದೀಲಿ ಬಿದ್ದ ಕೂಸು’ ಮಕ್ಕಳ ಕಾದಂಬರಿಯನ್ನು ಮಾಲತಿ ಆರಾಧ್ಯ ಅವರು ಪರಿಚಯಿಸಿದರು. ಈ ಕೃತಿಗಳನ್ನು ಸಂತೋಷ್ ಹಾನಗಲ್, ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬಿಡುಗಡೆ ಮಾಡಿದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಮಂದಿ ಸಾಧಕರಿಗೆ ಮಾಜಿ ಸಚಿವ ಹೆಚ್. ನಾಗೇಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಮಹದೇವಪುರ ಕ್ಷೇತ್ರದಲ್ಲಿ ಕನ್ನಡ ಭವನ ನಿರ್ಮಾಣ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು.

ನಿರೂಪಣೆಯನ್ನು ಸೌಜನ್ಯ ರವರು ಅಚ್ಚುಕಟ್ಟಾಗಿ ನರವೇರಿಸಿಕೊಟ್ಟರು

ಅಂತಿಮವಾಗಿ ಪ್ರಸಿದ್ಧ ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಅವರ ಮಧುರ ಗಾಯನದೊಂದಿಗೆ ಸಮ್ಮೇಳನವು ಯಶಸ್ವಿಯಾಗಿ ಸಮಾಪ್ತಿಯಾಯಿತು.