35 ವರ್ಷಗಳ ಶಿಕ್ಷಣ ಸೇವೆಗೆ ನಿವೃತ್ತಿಯ ವಿದಾಯ: ಶ್ರೀನಿವಾಸಪ್ಪರಿಗೆ ಆತ್ಮೀಯ ಬೀಳ್ಕೊಡುಗೆ
ಬೇತಮಂಗಲ: ಶಿಕ್ಷಣ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕ ಶ್ರೀನಿವಾಸಪ್ಪ ಅವರಿಗೆ ಶಿಕ್ಷಕ ವೃಂದ, ಸಹೋದ್ಯೋಗಿಗಳು ಹಾಗೂ ಶಾಲಾ ಸಿಬ್ಬಂದಿ ವತಿಯಿಂದ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಆತ್ಮೀಯವಾಗಿ ಆಯೋಜಿಸಲಾಗಿತ್ತು.
ಇಲ್ಲಿಗೆ ಸಮೀಪದ ರಾಮಸಾಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಸಮಾರಂಭಕ್ಕೆ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಶ್ರೀನಿವಾಸಪ್ಪ ಅವರ ಸೇವೆಯನ್ನು ಸ್ಮರಿಸಿ, ಅವರ ವೃತ್ತಿಜೀವನದ ಸಾಧನೆಗಳನ್ನು ಗಣ್ಯರು ಹಾಗೂ ಸಹೋದ್ಯೋಗಿಗಳು ಮೆಚ್ಚಿ ಮಾತನಾಡಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸಪ್ಪ, ನನ್ನ ವೃತ್ತಿ ಜೀವನದಲ್ಲಿ ಇದೊಂದು ಕೊನೆಯ ಸಮಾರಂಭವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆಯ ಸಂಗತಿ. 2022ರಲ್ಲಿ ರಾಮಸಾಗರ ಕರ್ನಾಟಕ ಪಬ್ಲಿಕ್ ಶಾಲೆಗೆ ಬಂದ ಬಳಿಕ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ಹಾಗೂ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡಿದ್ದಾರೆ. ಎಲ್ಲರ ಪ್ರೀತಿ ಮತ್ತು ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.
ನನ್ನ ಸಹಕಾರ ಎಂದಿಗೂ ಇರುತ್ತದೆ: ರಾಮಸಾಗರ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಸಮಾಜಮುಖಿಯಾಗಿ ನನ್ನಿಂದಾಗುವ ಎಲ್ಲ ರೀತಿಯ ಸಹಕಾರವನ್ನು ಮುಂದೆಯೂ ಸಂಪೂರ್ಣವಾಗಿ ನೀಡುತ್ತೇನೆ ಎಂದು ಶ್ರೀನಿವಾಸಪ್ಪ ತಿಳಿಸಿದರು.
ಆತ್ಮೀಯ ಸನ್ಮಾನ:
ವಯೋನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದ ಶಿಕ್ಷಕ ವೃಂದ ಹಾಗೂ ಸಹೋದ್ಯೋಗಿಗಳು ಶ್ರೀನಿವಾಸಪ್ಪ ಹಾಗೂ ಅವರ ಧರ್ಮಪತ್ನಿಯನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾಜಿ ಜಿಪಂ ಸದಸ್ಯ ಅಮು ಲಕ್ಷ್ಮೀನಾರಾಯಣ, ನೌಕರ ಸಂಘದ ಖಜಾಂಚಿ, ಕೃಷ್ಣಮೂರ್ತಿ, ಪ್ರಾಥಮಿಕ ಶಿಕ್ಷಕ ಸಂಘದ ಖಜಾಂಚಿ ಶ್ರೀನಿವಾಸ್ ಶಿಕ್ಷಕರಾದ ಶ್ರೀನಿವಾಸ್, ತೂಕಲ್ ಶ್ರೀನಿವಾಸ್, ಉಪಾಧ್ಯಕ್ಷೆ ಭಾರತಿ, ನಾಗವೇಣಿ ಅಂಬಿಕಾ, ಬಾಬು, ಗ್ರಾಮದ ಮುಖಂಡರಾದ ಕೇಶವರೆಡ್ಡಿ, ಹೇಮಾರೆಡ್ಡಿ, ಸೇರಿದಂತೆ ಸಾರ್ವಜನಿಕರು ಕುಟುಂಬಸ್ಥರು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
35 ವರ್ಷಗಳ ಶಿಕ್ಷಣ ಸೇವೆಗೆ ನಿವೃತ್ತಿಯ ವಿದಾಯ ಶ್ರೀನಿವಾಸಪ್ಪರಿಗೆ ಆತ್ಮೀಯ ಬೀಳ್ಕೊಡುಗಿಸಿದ ಶಿಕ್ಷಕ ವೃಂದದವರು ಹಾಗೂ ಕುಟುಂಬಸ್ಥರು.