ಅಂಗನವಾಡಿ ನೇಮಕಾತಿಯಲ್ಲಿ ಗಂಭೀರ ಅಕ್ರಮ ಆರೋಪ: ಸಮಗ್ರ ತನಿಖೆಗೆ ದಲಿತಪರ ಸಂಘಟನೆಗಳು ಒತ್ತಾಯ 

ಅಂಗನವಾಡಿ ನೇಮಕಾತಿಯಲ್ಲಿ ಗಂಭೀರ ಅಕ್ರಮ ಆರೋಪ: ಸಮಗ್ರ ತನಿಖೆಗೆ ದಲಿತಪರ ಸಂಘಟನೆಗಳು ಒತ್ತಾಯ 

        ಕೆಜಿಎಫ್ : ತಾಲ್ಲೂಕಿನ 2025-26 ಮತ್ತು 2026-27ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ದಲಿತ ಸಿಂಹ ಸೇನೆ ಸಂಘಟನೆ, ಛಲವಾದಿ ಮಹಾಸಭಾ ಮತ್ತು ಎವೈವಿಕೆ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026-27ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದಂತೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸದೆ, ನಿಯಮಬಾಹಿರವಾಗಿ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ಎಸಗಿದ್ದಾರೆ  ಎಂದು ದೂರಿದರು.

ಕೂಡಲೇ ಪ್ರಸ್ತುತ ನಡೆದಿರುವ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಹೊಸದಾಗಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಹಾಗೂ ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಮಗ್ರ ತನಿಖೆ: 2025-26 ಮತ್ತು 2026-27ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ  ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತಕ್ಷಣವೇ ತನಿಖೆ ನಡೆಸಬೇಕು.


ಆಯ್ಕೆ ಪಟ್ಟಿ ರದ್ದು: ಆನ್‌ಲೈನ್ ಬದಲಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಿ ಸಿದ್ಧಪಡಿಸಲಾಗಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಕ್ಷಣವೇ ರದ್ದುಗೊಳಿಸಿ, ಸತ್ಯಾಸತ್ಯತೆಯನ್ನು ಹೊರತರಬೇಕು.

ಅಕ್ರಮ ಅಭ್ಯರ್ಥಿಗಳ ವಜಾ: ನೇಮಕಾತಿ ಪ್ರಕ್ರಿಯೆಯಲ್ಲಿ ಲಂಚ ಮತ್ತು ಭ್ರಷ್ಟಾಚಾರ ನಡೆದಿರುವುದು ಸಾಬೀತಾದಲ್ಲಿ, ಅಕ್ರಮವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ನೇಮಕಾತಿಯನ್ನು ವಜಾಗೊಳಿಸಬೇಕು.

ಅಧಿಕಾರಿಗಳ ವಿರುದ್ಧ ಕ್ರಮ: ಈ ಅಕ್ರಮ ನೇಮಕಾತಿಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ರೀತಿ ಶಿಸ್ತಿನ ಕ್ರಮ ಜರುಗಿಸಬೇಕು.

ಉಗ್ರ ಹೋರಾಟದ ಎಚ್ಚರಿಕೆ:
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ  ಹೋರಾಟ ಮಾಡಲಾಗುವುದು ಎಂದು ಸಾಮ್ರಾಟ್ ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ತಾಲ್ಲೂಕು ಅಧ್ಯಕ್ಷ ಸಾಮ್ರಾಟ್ ಕೃಷ್ಣಮೂರ್ತಿ, ಗೌರವಾದ್ಯಕ್ಷ  ಕೆಂಚಪ್ಪ, ಹೋಬಳಿ ಅಧ್ಯಕ್ಷ ತಿಪ್ಪಣ್ಣ, ಎವೈವಿಕೆ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್, ಪಂತನಹಳ್ಳಿ ಶಿವ ಮೋಹನ್, ಸೇರಿದಂತೆ ದಲಿತಮುಖಂಡರು ಇದ್ದರು.