ಸಮಾಜಮುಖಿ ಕೆಲಸ ಮಾಡಲು ಸಂಕಲ್ಪ ಅಗತ್ಯ: ಪ್ರೊ.ಹೆಚ್.ರಾಮಚಂದ್ರಪ್ಪ 

ಸಮಾಜಮುಖಿ ಕೆಲಸ ಮಾಡಲು ಸಂಕಲ್ಪ ಅಗತ್ಯ: ಪ್ರೊ.ಹೆಚ್.ರಾಮಚಂದ್ರಪ್ಪ 

ವರದಿ: ಮಂಜುನಾಥ್.ವಿ.  ಕೆಜಿಎಫ್

ಕೆಜಿಎಫ್: ಸಮಾಜಕ್ಕಾಗಿ ನಾವು ಏನಾದರೂ ಕೊಡುಗೆ ನೀಡಬೇಕು ಎಂಬ ದೃಢ ಸಂಕಲ್ಪವನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಪ್ರೇರೇಪಿಸುತ್ತದೆ. ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ದೃಢ ಸಂಕಲ್ಪ ಮೂಡಲು ಸಾಧ್ಯ ಎಂದು ಪ್ರೊ.ಹೆಚ್.ರಾಮಚಂದ್ರಪ್ಪ ಹೇಳಿದರು.

ನಗರದ ಮಹಾಬೋಧಿ ಅಶೋಕ ಧಮ್ಮ ಧೂತ ಸೊಸೈಟಿಯಲ್ಲಿ ಶುಕ್ರವಾರ ಸಂಜೆ ನಡೆದ ಪೌರ್ಣಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಬುದ್ಧನ ವಿಚಾರಧಾರೆಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಸ್ಥಾನಿಕ ಭಿಕ್ಕು ಹಾಗೂ ಸೊಸೈಟಿಯ ಕಾರ್ಯದರ್ಶಿ ಕೇಮಿಂಡೋ ಬಂಥೇಜಿ ಅವರು ಉಪಾಸಕ-ಉಪಾಸಕಿಯರಿಗೆ ತಿಸರಣ ಮತ್ತು ಪಂಚಶೀಲ ಬೋಧಿಸಿ ಧಮ್ಮ ಪ್ರವಚನ ನೀಡಿದರು.

ಮಹಾಪೋಷಕ ಡಾ.ಪೂರನೇಶನ್ ರಾಜು ಮಾತನಾಡಿ, ಬುದ್ಧನ ಬೋಧನೆಯಂತೆ ಎಲ್ಲ ಜೀವಿಗಳ ಮೇಲೂ ಅನುಕಂಪ ಮತ್ತು ಮೈತ್ರಿ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಬಾಳ್ವೆಯೇ ಉತ್ತಮ ಸಮಾಜದ ಅಡಿಪಾಯ ಎಂದು ಹೇಳಿದರು.
ಅಂಕಣಕಾರ ಎನ್.ಆರ್. ಪುರುಷೋತ್ತಮ ಮಾತನಾಡಿ, “ನಮ್ಮ ಮನಸ್ಸು ಸದಾ ನೆನ್ನೆ ಮತ್ತು ನಾಳೆಯ ನಡುವೆ ಓಡಾಡುತ್ತಿರುತ್ತದೆ. ಚಂದ್ರನನ್ನು ಮರೆಮಾಡುವ ಮೋಡಗಳಂತೆ ಮನಸ್ಸಿನ ಚಂಚಲತೆ ನಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಮರೆಮಾಡುತ್ತದೆ. 

ಮೋಡಗಳು ಚದುರಿದಾಗ ಹುಣ್ಣಿಮೆ ಚಂದ್ರ ನಿರ್ಮಲವಾಗಿ ಕಾಣುವಂತೆ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಾಗ ಜೀವನದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗಿ ಬಳಸಿಕೊಳ್ಳಬಹುದು” ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದ ಭಿಕ್ಕುಗಳ ಕಥೆಯೊಂದನ್ನು ವಿವರಿಸಿದರು.
ಸಮಾಜ ಸೇವೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಪ್ರೊ.ಹೆಚ್.ರಾಮಚಂದ್ರಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷ ಪ್ರತಾಪ್ ಸ್ವಾಗತಿಸಿದರು. ಉಪಾಸಕ ಮೈಅಳಗನ್ ವಂದಿಸಿದರು. ಉಪಾಸಕ, ಉಪಾಸಕಿಯರು ಉಪಸ್ತಿತರಿದ್ದರು.